ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಉಂಟಾದ ಸಾವು ನೋವು ಕಂಡು ಬೆಚ್ಚಿಬಿದ್ದಿರುವ ಹಲವು ರಾಜ್ಯ ಸರ್ಕಾರಗಳು ಈ ವರ್ಷ ನಡೆಯಬೇಕಿದ್ದ ಬೋರ್ಡ್​​ ಪರೀಕ್ಷೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಮಾಡಿ ವಿದ್ಯಾರ್ಥಿಗಳನ್ನು ಉತೀರ್ಣ ಮಾಡುವ ತಯಾರಿ ನಡೆಸಿವೆ. ಆದರೆ ಆಂಧ್ರ ಪ್ರದೇಶ ಸರ್ಕಾರ ಮಾತ್ರ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ನಿರ್ಧಾರದ ಕುರಿತು ಅಫಿಡವಿಟ್ ಸಲ್ಲಿಕೆ ಮಾಡಲು ಸೂಚಿಸಿರುವ ಸುಪ್ರೀಂ ಕೋರ್ಟ್​, ಪರೀಕ್ಷೆ ನಡೆಸುವ ಒಬ್ಬ ವಿದ್ಯಾರ್ಥಿ ಸತ್ತರೂ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದೆ.

ಸುಪ್ರೀಂ ಕೋರ್ಟ್​ನ ನ್ಯಾ. ಎ.ಎಂ.ಖಾನ್ವಿಲ್ಕರ್ ಹಾಗೂ ನ್ಯಾ. ದಿನೇಶ್ ಮಹೇಶ್ವರಿ ಅವರ ದ್ವಿಸದಸ್ಯ ಪೀಠದ ಎದುರು ಆಂಧ್ರ ಪ್ರದೇಶ ಸರ್ಕಾರ ಪರ ಹಾಜರಾಗಿದ್ದ ವಕೀಲ ಮಹಫೂಜ್ ನಜ್ಕಿ, ಜುಲೈನಲ್ಲಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಿದ್ದರು. ಸುಮಾರು 5 ಲಕ್ಷ ವಿದ್ಯಾರ್ಥಿಗಳು ಬೋರ್ಡ್​ ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತಿ ಎಕ್ಸಾಂ ಹಾಲ್​ನಲ್ಲಿ 15-20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದರು.

ಸಿಬಿಎಸ್​​​ಸಿ, ಸಿಐಎಸ್​​ಇಸಿ ಹಾಗೂ ರಾಜ್ಯ ಶಿಕ್ಷಣ ಮಂಡಳಿಗಳು ನಡೆಸುವ ಪರೀಕ್ಷೆಗಳ ಕುರಿತು ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ನ್ಯಾ.ದಿನೇಶ್ ಮಹೇಶ್ವರಿ ಅವರು ಆಂಧ್ರ ಸರ್ಕಾರದ ನಿರ್ಧಾರದ ಕುರಿತು ಪ್ರಶ್ನಿಸಿ, ಎಲ್ಲಾ ರಾಜ್ಯಗಳಿಗಿಂತ ಪರೀಕ್ಷೆ ನಡೆಸಲು ಹೆಚ್ಚು ವಿಶ್ವಾಸವನ್ನು ಹೊಂದಿದ್ದರೆ ಅದಕ್ಕೆ ಕಾರಣವನ್ನು ನೀಡಿ ನೋಡೋಣ ಎಂದು ಸೂಚನೆ ನೀಡಿದರು. ಪರೀಕ್ಷೆ ನಡೆಸುವುದರಿಂದ ಯಾವುದೇ ಸಾವು ಸಂಭವಿಸಿದರೂ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ನ್ಯಾ. ಎ.ಎಂ.ಖಾನ್ವಿಲ್ಕರ್ ಎಚ್ಚರಿಕೆ ನೀಡಿದರು. ಇನ್ನು ಆಂಧ್ರ ಪ್ರದೇಶದೊಂದಿಗೆ ಕೇರಳ ಸರ್ಕಾರ ಕೂಡ ಕ್ಲಾಸ್ 11 ಪರೀಕ್ಷೆ ನಡೆಸುತ್ತೇವೆ ಎಂದು ಅಫಿಡವಿಟ್ ಸಲ್ಲಿಕೆ ಮಾಡಿದೆ.

The post ‘ಒಬ್ಬನೇ ಒಬ್ಬ ವಿದ್ಯಾರ್ಥಿ ಸತ್ತರೂ ನೀವೇ ಹೊಣೆ’ ಆಂಧ್ರ ಸರ್ಕಾರಕ್ಕೆ ‘ಸುಪ್ರೀಂ’ ಎಚ್ಚರಿಕೆ appeared first on News First Kannada.

Source: newsfirstlive.com

Source link