ನವದೆಹಲಿ: ರೆಸ್ಲರ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ಭಾರತದ ಪರ ಎರಡು ಬಾರಿ ಪದಕ ಗೆದ್ದಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.

ಕಳೆದ 20ದಿನಗಳಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ಇಂದು ದೆಹಲಿ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಈ ಕುರಿತು ಅಧಿಕೃತವಾಗಿ ತಿಳಿಸಿರುವ ದೆಹಲಿ ಪೊಲೀಸರು, ಸುಶೀಲ್ ಕುಮಾರ್ ಮತ್ತು ಸಹಚರನನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4 ರಂದು ಸಾಗರ್ ರಾಣಾ ಕೊಲೆಯಾಗಿದ್ದರು. ಬಳಿಕ ಸುಶೀಲ್ ಹಾಗೂ ಸಾಗರ್ ರಾಣಾ ನಡುವಣ ಘರ್ಷಣೆಯಲ್ಲಿ ಸಾಗರ್ ಹತ್ಯೆಗೀಡಾಗಿದ್ದರು ಎಂದು ವರದಿಯಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ರನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದರು. ನಂತರ ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಪೊಲೀಸರು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ, ಆತನ ಸಹಚರ ಅಜಯ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ಕೂಡ ಘೋಷಿಸಿದ್ದರು.

ಇದಾದ ಬಳಿಕ ಮೇ 18ರಂದು ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ರೋಹಿಣಿ ನ್ಯಾಯಾಲಯ ವಜಾಗೊಳಿಸಿತ್ತು. ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಸುಶೀಲ್ ಕುಮಾರ್ ಮತ್ತು ಅವರ ಸ್ನೇಹಿತನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಮತ್ತು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜಯಿಯಾಗಿದ್ದರು.

The post ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸುಶೀಲ್ ಕುಮಾರ್ ಬಂಧನ appeared first on Public TV.

Source: publictv.in

Source link