ಮುಂಬೈ: 360 ಜನ ಪ್ರಯಾಣಿಸಬಹುದಾದ ವಿಮಾನವೊಂದು ಕೇವಲ ಓರ್ವ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಹಾರಾಟ ಮಾಡಿರುವುದು ವರದಿಯಾಗಿದೆ.

ಬೋಯಿಂಗ್ 777-300 ವಿಮಾನವು ಒಟ್ಟು 360 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ಮುಂಬೈನಿಂದ ದುಬೈಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕೇವಲ ಓರ್ವ ಪ್ರಯಾಣಿಕರಿದ್ದರು. ಆದರೂ ಕೂಡ ವಿಮಾನ ತನ್ನ ಏಕೈಕ ಪ್ರಯಾಣಿಕರಿಗಾಗಿ ಹಾರಾಟ ನಡೆಸಿದೆ. ಈ ಕುರಿತು ಸ್ವತಃ ವಿಮಾನದಲ್ಲಿ ಏಕೈಕ ಪ್ರಯಾಣಿಕನಾಗಿ ಹಾರಾಟ ನಡೆಸಿದ ಭವೇಶ್ ಜವೇರಿ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಸ್ಟಾರ್‍ಗೆಮ್ಸ್‍ನ ಸಿಇಒ ಆಗಿರುವ ಜವೇರಿ, ಮುಂಬೈನಿಂದ ದುಬೈಗೆ ಪ್ರಯಾಣ ಆರಂಭಿಸುತ್ತಿದ್ದಂತೆ, ವಿಮಾನದಲ್ಲಿ ನಾನೊಬ್ಬನೇ ಇದ್ದೆ ವಿಮಾನ ಪ್ರವೇಶಿಸುತ್ತಿದ್ದಂತೆ ವಿಮಾನದ ಸಿಬ್ಬಂದಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಖಾಲಿ ಸೀಟ್‍ಗಳ ಮಧ್ಯೆ ಕುಳಿತು ಹಾರಾಟ ನಡೆಸಿದೆ. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮುಂಬೈಯಿಂದ ದುಬೈಗೆ ಹಲವು ಬಾರಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದೇನೆ. ಆದರೆ ಈ ಪ್ರಯಾಣ ವಿಭಿನ್ನವಾಗಿತ್ತು. ಪ್ರತಿ ಬಾರಿ ಪ್ರಯಾಣಿಸುವಾಗ ವಿಮಾನ ಸಿಬ್ಬಂದಿ ಮೈಕ್ ಮೂಲಕ ಸೂಚನೆಗಳನ್ನು ನೀಡುತ್ತಿದ್ದರು. ಆದರೆ ಈ ಬಾರಿ ನನ್ನ ಬಳಿ ಬಂದು ನಿವೋಬ್ಬರೇ ಪ್ರಯಾಣಿಕ, ಹಾಗಾಗಿ ಪೂರ್ತಿ ವಿಮಾನದ ಪರಿಚಯ ಮಾಡಬೇಕೆ ಎಂದು ಕೇಳಿದರು ಎಂದು ಹೇಳುವ ಮೂಲಕ ಸಂತೋಷ ಹಂಚಿಕೊಂಡರು.

ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಈ ವೀಡಿಯೋವನ್ನು ರೂಪಿನ್ ಶರ್ಮಾ ಐಪಿಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ.

ಜವೇರಿ ಅವರು ಯುಎಇ ಸರ್ಕಾರದ ಗೋಲ್ಡನ್ ವೀಸಾ ಪಡೆದುಕೊಂಡಿದ್ದ ಕಾರಣ ಏಕೈಕ ಪ್ರಯಾಣಿಕನಿದ್ದರು ಕೂಡ ವಿಮಾನ ಹಾರಾಟ ನಡೆಸಿದೆ. ರಾಜ ತಾಂತ್ರಿಕ ಅಧಿಕಾರಿಗಳು ಮತ್ತು ಯುಎಇ ಪ್ರಜೆಗಳು ವಿಮಾನದಲ್ಲಿ ಇಂತಹ ಸಂದರ್ಭದಲ್ಲಿ ಒಬ್ಬರಿದ್ದರೂ ಕೂಡ ವಿಮಾನ ಹಾರಾಟ ಮಾಡಬೇಕಾಗಿದೆ.

The post ಓರ್ವ ಪ್ರಯಾಣಿಕನಿಗಾಗಿ ಮುಂಬೈನಿಂದ ದುಬೈಗೆ ಹಾರಿದ ವಿಮಾನ appeared first on Public TV.

Source: publictv.in

Source link