ಕೊರೊನಾ ವೈರಸ್​ನ ಹೊಸ ಹೊಸ ರೂಪ ಪ್ರತಿದಿನ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ.. ವುಹಾನ್ ವೈರಸ್ ಅಂತೆ, ಮ್ಯೂಟೇಶನ್ ಅಂತೆ.. ಬ್ಲಾಕ್ ಫಂಗಸ್ ಅಂತೆ.. ರಕ್ತ ಹೆಪ್ಪುಗಟ್ಟೋದಂತೆ..ಹಾರ್ಟ್​ ಅಟ್ಯಾಕ್ ಅಂತೆ ಹೀಗೆ.. ಸರಣಿ ಆಘಾತ ಮೂಡಿಸುತ್ತಿದೆ ಈ ವೈರಸ್.. ಈ ನಡುವೆ ಇನ್ನೊಂದು ವಿಷಯ ಬೆಳಕಿಗೆ ಬಂದಿದ್ದು.. ಸೈಂಟಿಸ್ಟ್​ಗಳೇ ದಿಗ್ಭ್ರಮೆಗೆ ಒಳಗಾಗಿ ಬಿಟ್ಟಿದ್ದಾರೆ.

AIDS: ಅಕ್ವೈರ್ಡ್​ ಇಮ್ಮುನೋ ಡಿಫಿಸಿಯೆನ್ಸಿ ಸಿಂಡ್ರೋಮ್ ಅನ್ನೋ ಖಾಯಿಲೆ HIV ಅಂದ್ರೆ ಹುಮ್ಯನ್ ಇಮ್ಯುನೋ ಡಿಫಿಸಿಯೆನ್ಸ್ ವೈರಸ್​​ನಿಂದ ಬರುತ್ತೆ ಅನ್ನೋದು ಎಲ್ಲಿರಿಗೂ ತಿಳಿದಿರುವಂಥದ್ದೆ. HIV ಅಂದ್ರೆನೇ ರೋಗನಿರೋಧಕ ಶಕ್ತಿಯನ್ನ ಕುಂದಿಸೋ ವೈರಸ್​.. ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯಿಂದ ಹರಡುವ ಈ ವೈರಸ್​ ಮನುಷ್ಯನ ರೋಗನಿರೋಧಕ ಶಕ್ತಿಯನ್ನ ನಿರ್ನಾಮ ಮಾಡಿಬಿಡುತ್ತೆ.. ಹೀಗಾಗಿಯೇ ಚಿಕ್ಕ ಚಿಕ್ಕ ಖಾಯಿಲೆಗಳೂ ಈ ಸೋಂಕಿರುವ ಖಾಯಿಲೆಗಳಿಗೆ ಮಹಾ ರೋಗಗಳಾಗಿ ಕಾಡಲು ಆರಂಭಿಸಿ ಬಿಡುತ್ತವೆ. ಇವತ್ತು ಬಹುತೇಕ ಹಲವ ದೇಶಗಳಲ್ಲಿ AIDS ನಿಯಂತ್ರಣಕ್ಕೆ ಬರ್ತಿದೆ.. ಆಫ್ರಿಕನ್ ರಾಷ್ಟ್ರಗಳೂ ಏಡ್ಸ್​ ಮುಕ್ತವಾಗಲು ದಾಪುಗಾಲಿಟ್ಟಿವೆ. ಲೆಟೆಸ್ಟ್​ ವಿಷಯ ಏನಂದ್ರೆ ಹೆಚ್​ಐವಿ ಪೀಡಿತರೊಬ್ಬರಲ್ಲಿ ಕೊರೊನಾ ಸೋಂಕು ಬರೋಬ್ಬರಿ 216 ದಿನ ಉಳಿದುಕೊಂಡಿತ್ತು, ಜೊತೆಗೆ 30 ಕ್ಕೂ ಹೆಚ್ಚು ಬಾರಿ ಮ್ಯೂಟೆಂಟ್ ಆಗಿತ್ತು ಅನ್ನೋ ಸುದ್ದಿ ಹೊರ ಬಿದ್ದಿದೆ.

HIV ಹಾಗೂ ಕೊರೊನಾ ವೈರಸ್​ಗೆ ಏನು ಸಂಬಂಧ?
ಅಷ್ಟಕ್ಕೂ ಇಲ್ಲಿ ಹೇಳ್ತಿರೋ ಸಂಗತಿಯಾದ್ರೂ ಏನ್​ ಗೊತ್ತಾ?

ಹಾಗಂತ ಸೋಂಕಿನ ಮೂಲ ಕೂಡ ಮರೆಯೋ ಹಾಗಿಲ್ಲ.. ಅಷ್ಟಕ್ಕೂ ಈ ಪ್ರಕರಣ ನಡೆದಿದ್ದು ಸೌಥ್​ ಆಫ್ರಿಕಾದಲ್ಲಿಯಾದ್ರೂ.. ಭಾರತ, ಇಂಗ್ಲೆಂಡ್, ಅಮೆರಿಕಾ, ಜಪಾನ್, ಜರ್ಮನಿ, ಫ್ರಾನ್ಸ್ ಹೀಗಿ ಹಲವು ದೇಶಗಳ ವಿಜ್ಞಾನಿಗಳನ್ನ ಅಟ್ರಾಕ್ಟ್ ಮಾಡಿ ಬಿಟ್ಟಿದೆ. ಅಷ್ಟಕ್ಕೂ ಆಗಿದ್ದಾದ್ರೂ ಏನು ಅಂತಾ ನೋಡೋದಾದ್ರೆ.. ದಕ್ಷಿಣ ಆಫ್ರಿಕಾದ 36 ವರ್ಷದ ಮಹಿಳೆಯೋರ್ವರಲ್ಲಿ ಬರೋಬ್ಬರಿ 216 ದಿನಗಳ ಕಾಲ ಕೊರೊನಾ ಸೋಂಕು ಇತ್ತು.
ಸದ್ಯ ಜಗತ್ತಿನಾದ್ಯಂತ ಎರಡನೇ ಅಲೆ ಮೂರನೇ ಅಲೆ, ನಾಲ್ಕನೇ ಅಲೆ ರೂಪದಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನ ಕುರಿತು ದಿನಕ್ಕೊಂದು ಕುತೂಹಲಕಾರಿ ಅಂಶಗಳು ಹೊರಬರುತ್ತಲೇ ಇವೆ. ಇದೀಗ ಮಹಿಳೆಯೊಬ್ಬರಲ್ಲಿ ಕೊರೊನಾ ವೈರಸ್ 216 ದಿನಗಳ ಕಾಲ ಇದ್ದು ಕನಿಷ್ಠ 32 ಬಾರಿ ರೂಪಾಂತರಗೊಂಡಿದೆ ಎಂಬ ಅಚ್ಚರಿಯ ವರದಿ ಹೊರಬಿದ್ದಿದೆ. ಅದೂ ಆ ಮಹಿಳೆ ಸಾಮಾನ್ಯ ಮಹಿಳೆಯಲ್ಲ HIV.. AIDS ಗಂಭೀರ ಹಂತಕ್ಕೆ ಹೋಗಿರೋ ಸೋಂಕಿತ ಮಹಿಳೆ.

7 ತಿಂಗಳು ಬಿಡಾರ ಹೂಡಿದ್ದ ಕೊರೊನಾ
ಈ ಮಹಿಳೆ ಕೊರೊನಾ ಸೋಂಕಿಗೂ ಒಳಗಾಗಿದ್ದರು. ಇವರ ದೇಹದಲ್ಲಿ ಸುಮಾರು 216 ದಿನಗಳ ಕಾಲ ಅಂದ್ರೆ 7 ತಿಂಗಳಿಗೂ ಹೆಚ್ಚು ಕಾಲ ಬಿಡಾರ ಹೂಡಿಕೊಂಡಿತ್ತು ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದಕ್ಕಿಂತಲೂ ಮತ್ತೊಂದು ಆತಂಕಕಾರಿ ವಿಚಾರ ಎಂದರೆ ಈ ಮಹಿಳೆಯ ದೇಹದಲ್ಲಿ 32 ಕ್ಕೂ ಹೆಚ್ಚು ಬಾರಿ ವೈರಸ್ ರೂಪಾಂತರಗೊಂಡಿದೆ ಅಂತ ವೈಜ್ಞಾನಿಕ ಜರ್ನಲ್​ವೊಂದರಲ್ಲಿ ಮಾಹಿತಿ ಪ್ರಕಟಗೊಂಡಿದೆ.

ಆ ಮಹಿಳೆ ದೇಹದಲ್ಲೇ 32 ಕ್ಕೂ ಹೆಚ್ಚು ಬಾರಿ ಕೊರೊನಾ ವೈರಸ್ ಮ್ಯೂಟೆಷನ್​ಗೆ ಒಳಗಾಗಿದೆ.. ಅದ್ರಲ್ಲೂ ಬರೋಬ್ಬರಿ 13 ಬಾರಿ ಸ್ಪೈಕ್​ ಪ್ರೋಟಿನ್​ ಅಲ್ಲಿ ಕೊರೊನಾ ವೈರಸ್ ಮ್ಯೂಟೇಷ್​ ಆಗಿದೆ. ಈ ಸ್ಪೈಕ್​ ಪ್ರೋಟಿನ್ ಅಂದರೆ ವೈರಸ್ ಸುತ್ತ ಇರುವ ಮುಳ್ಳಿನ ಆಕಾರದ ರಚನೆ. ಇದರ ಮೂಲಕವೇ ಅದು ಮನುಷ್ಯನ ರೋಗ ನಿರೋಧಕ ಶಕ್ತಿ ಭೇದಿಸಿ ಅಟ್ಯಾಕ್ ಮಾಡುತ್ತೆ ಮತ್ತು ಸೋಂಕಾಗಿ ಕಾಡುತ್ತೆ. ಈ ಸ್ಪೈಕ್ ಪ್ರೋಟಿನ್​ಗಳೇ ಮನುಷ್ಯನ ಶ್ವಾಶಕೋಶದ ರಿಸೆಪ್ಟರ್​ಗಳಿಗೆ ಹೋಗಿ ಅಂಟಿಕೊಳ್ಳುತ್ತವೆ.

ಇನ್ನೊಂದು ವಿಚಾರ ಅಂದ್ರೆ ರೋಗನಿರೋಧಕ ಶಕ್ತಿಯಿಂದ ಎಸ್ಕೇಪ್ ಆಗುವಂಥ ವಿಚಾರದಲ್ಲಿ ಮತ್ತು ದೇಹಕ್ಕೆ ಗೊತ್ತೇಯಾಗದ ಹಾಗೆ ದೇಹದಲ್ಲೇ ವಾಸಿಸೋ ರೀತಿಗು ಗುಣಗಳಿಗೆ ಸಂಬಂಧಿಸಿದಂತೆಯೂ ಇದು ಮ್ಯೂಟೇಟ್ ಆಗಿದೆ.. ಅನ್ನೋ ಮಾಹಿತಿ ಲಭ್ಯವಾಗಿದೆ.

HIV ಸೋಂಕಿತೆಯಲ್ಲಿ ಇಷ್ಟು ದಿನ ಈ ವೈರಸ್ ಇದ್ದಿದ್ದು ಹೇಗೆ?
ಇದು ಮ್ಯೂಟೇಟ್ ಆಗಲು ಕಾರಣವಾದ್ರೂ ಏನು?

ವಿಶೇಷ ಅಂದ್ರೆ ಹೆಚ್​ಐವಿ ಸೋಂಕಿತೆಗೆ ಈ ಸೋಂಕು ಬಂದಿದ್ದು ಅಷ್ಟೇ ಅಲ್ಲ ಗುಣ ಕೂಡ ಆಗಿದೆ. ಆದ್ರೆ ಇಷ್ಟೊತ್ತಿಗೆ ಬರೋಬ್ಬರಿ 32 ಬಾರಿ ಮ್ಯೂಟೇಷನ್ ಕೂಡ ಆಗಿದೆ.. ಹಾಗಿದ್ರೆ ಅದು ಬರೋಬ್ಬರಿ 2016 ದಿನಗಳ ಕಾಲ ಆಕೆಯ ದೇಹದಲ್ಲಿ ಇದ್ದಿದ್ದು ಹೇಗೆ? ಇಷ್ಟು ಬಾರಿ ಮ್ಯೂಟೇಷನ್ ಆಗಿದ್ದಾದ್ರೂ ಹೇಗೆ? ಅಷ್ಟು ಬಾರಿ ಮ್ಯೂಟೇಷನ್ ಆಗಿದ್ದರೂ ಆಕೆಗೆ ಯಾಕೆ ಗಂಭೀರ ಅಪಾಯ ಆಗಿಲ್ಲ? ಮುಂತಾದ ವಿಚಾರಗಳಿಗೆ ಇನ್ನೂ ತನಕ ಯಾವುದೇ ಸ್ಪಷ್ಟ ಉತ್ತರವಂತೂ ಸಿಕ್ಕಿಲ್ಲ.

ಬಹುಶಃ ಒಂದು ಕಡೆ ಹೆಚ್​ಐವಿ ಕೂಡ ತನ್ನ ಅಸ್ತಿತ್ವಕ್ಕಾಗಿ ಕೊರೊನಾ ಜೊತೆ ಹೋರಾಟ ನಡೆಸಿದರ ಪರಿಣಾಮವಾಗಿ ಈ ವೈರಸ್ ಇಷ್ಟು ಬಾರಿ ಮ್ಯೂಟೇಷನ್ ಆಗಿದೆಯಾ? ಅಥವಾ ಹೆಚ್ಐವಿಗಾಗಿ ಪಡೆಯುತ್ತಿರುವ ಔಷಧಗಳ ಕಾರಣದಿಂದ ಹೀಗಾಗಿರಬಹುದಾ? ಅಥವಾ ದೇಹದಲ್ಲಿ ಆಗಲೇ ಹುಟ್ಟಿಕೊಂಡಿರೊ ಆ್ಯಂಟಿಬಾಡಿಗಳಿಂದಾ ಹೀಗಾಗಿರಬಹುದಾ? ಮುಂತಾದ ಲಹರಿಯಲ್ಲೂ ವಿಜ್ಞಾನಿಗಳು ಉತ್ತರ ಹುಡಕಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಆಕೆಯಿಂದ ಮತ್ತೆ ಯಾರಿಗೆಲ್ಲ ಈ ವೈರಸ್ ತಗುಲಿದೆ? ಅನ್ನೋ ವಿಚಾರವಾಗಿಯೂ ಸಂಶೋಧನೆ ಮುಂದುವರೆದಿದೆ.

ಕರ್ನಾಟಕದಲ್ಲಿ ಏನಾಗಿತ್ತು..?
ಇದಕ್ಕೆ ಪೂರಕವೆಂಬಂತೆ ಕರ್ನಾಟಕದಲ್ಲಿಯೇ ಕೆಲವು ವಿವರಗಳು ಕೂಡ ಲಭ್ಯವಾಗಿವೆ. ಅದೂ ಕೂಡ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಿಂದ ಕೆಲ ಅಚ್ಚರಿಯ ವಿವರಗಳು ಸಿಕ್ಕಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ಬರೋಬ್ಬರಿ 16612 ಹೆಚ್​ಐವಿ ಸೋಂಕಿತರು ಇದ್ದಾರೆ. ಮೊದಲನೇ ಅಲೆ ವೇಳೆ ಇವರಲ್ಲಿ ಕೇವಲ 25 ಜನರಲ್ಲಿ ಸೋಂಕು ಕಾಣಿಡಿಕೊಂಡಿತ್ತು.. ಇವರಲ್ಲಿ ಮೂವರು ಮೃತ ಪಟ್ಟಿದ್ದರು.. ಇನ್ನು ಎರಡನೇ ಅಲೆಯಲ್ಲಿ 16542 ಹೆಚ್ ಐ ವಿ ಸೊಂಕಿತರ ಪೈಕಿ ಕೇವಲ 14 ಜನರಿಗೆ ಮಾತ್ರ ಕೊರೊನಾ ತಗುಲಿದೆ. ಇದ್ರಲ್ಲೂ ಮೂವರು ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಬಹುಶಃ ಹೆಚ್​ಐವಿ ಸೋಂಕಿತರು ಆ್ಯಂಟಿವೈರಲ್ ಡ್ರಗ್ ತೆಗೆದುಕೊಳ್ಳುವ ಪರಿಣಾಮ ಕೋವಿಡ್ ಹೆಚ್ಚು ದಾಳಿ ಮಾಡಿರಲಿಕ್ಕಿಲ್ಲ.. ಅಂತಾ ಬಾಗಲಕೋಟೆ ಡಿಹೆಚ್​ಓ ಅನಂತ್ ದೇಸಾಯಿ ನ್ಯೂಸ್​ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಕೊರೊನಾ ವೈರಸ್​ನ ಆಳ ಮತ್ತು ಅಂತ್ಯದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿಯಂತೂ ಲಭ್ಯವಾಗ್ತಿಲ್ಲ.. ಹೀಗಾಗಿ ಜನರು ಈಗ ಲಭ್ಯವಿರುವ ಮಾರ್ಗಗಳನ್ನ ಅನುಸರಿಸಿಯೇ ಈ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಿದೆ. ಅಂದ್ರೆ ವ್ಯಾಕ್ಸಿನ್ ಪಡೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್​ ಧರಿಸುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕಿದೆ..

ವಿಶೇಷ ವರದಿ: ರಾಘವೇಂದ್ರ ಗುಡಿ,
ಪೂರಕ ಮಾಹಿತಿ: ಕೃಷ್ಣ ಹಾದಿಮನಿ, ವರದಿಗಾರರು.

The post ಓರ್ವ ಮಹಿಳೆಯಲ್ಲಿ 7 ತಿಂಗಳು ಬಿಡಾರ ಹೂಡಿದ್ದ ಕೊರೊನಾ; 32 ಬಾರಿ ರೂಪಾಂತರ! appeared first on News First Kannada.

Source: newsfirstlive.com

Source link