ಕಂಗನಾಗೆ ಸಂಕಷ್ಟ; ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ದೇಶ ದ್ರೋಹ ಕೇಸ್


ಬೆಂಗಳೂರು; ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ವಿರುದ್ಧ ಕ್ರೂರ ಮತ್ತು ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹತ್ಮಾ ಗಾಂಧೀಜಿ – ಪಂಡಿತ್ ಜವಾಹರ್ ಲಾಲ್ ನೆಹರು ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿರುವ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದ ಯುವ ಕಾಂಗ್ರೆಸ್ ನ ಕಾನೂನು ಘಟಕ ಕಂಗನಾ ರಣಾವತ್ ಮತ್ತು ಅಜಿತ್ ಬಾರ್ತಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ. ದೇಶ ದ್ರೋಹವೆಸಗಿರುವ ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ 124-A,153-A, 500, 504, 505 ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ನಾಯಕರ ವಿರುದ್ಧ ಮಾಡಿದ ಮಾನಹಾನಿಕರ ಟೀಕೆಗಳು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 13 ಅಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ದೂರು ದಾಖಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ, ದೇಶ 75 ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತಿರುವ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಮಾಡಿರುವ ಟೀಕೆಯಿಂದ ಭಾರತದ ಕೀರ್ತಿಗೆ ದೇಶ ವಿದೇಶಗಳಲ್ಲಿ ಧಕ್ಕೆಯಾಗಿದೆ. ಇವರ ವಿರುದ್ಧ ಈವರೆಗೆ ಕೇಂದ್ರದ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ.

ಕಂಗನಾರನ್ನು ಅಜಾದಿ ಕಾ ಅಮೃತ್ ಮಹೋತ್ಸವ್ ರಾಯಭಾರಿ ಮಾಡ್ಕೋಳಿ..!

ಕಂಗನಾ ರಣಾವತ್ ನಿಜವಾದ ದೇಶ ಭಕ್ತೆಯಾಗಿದ್ದರೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಜಾದಿ ಕಾ ಅಮೃತ್ ಮಹೋತ್ಸವ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಮಾಡಿಕೊಳ್ಳುವುದು ಸೂಕ್ತ ಎಂದು ಕಿಡಿ ಕಾರಿದರು. ಈ ನಟಿಯನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬೇಕಿದ್ದರೆ ಬಳಸಿಕೊಳ್ಳಲಿ. ಸ್ವಚ್ಛತಾ ಅಭಿಯಾನದಲ್ಲಿ ಮಹಾತ್ವಾ ಗಾಂಧೀಜಿ ಕನ್ನಡಕದ ಲೋಗೋ ತೆಗೆದು ಕಂಗನಾ ರಾಣಾವತ್ ಲೋಗೋ ಬೇಕಿದ್ದರೆ ಹಾಕಿಕೊಳ್ಳಲಿ ಎಂದು ರಕ್ಷಾ ರಾಮಯ್ಯ ವ್ಯಂಗ್ಯವಾಡಿದರು.

ಇದೇ ರೀತಿಯಲ್ಲಿ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿರುವ ಅಜಿತ್ ಬಾರ್ತಿ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ತನ್ನ ಹೋರಾಟ ತೀವ್ರಗೊಳಿಸಲಿದೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಾನೂನು ಘಟಕದ ಅಧ್ಯಕ್ಷ ಚಾಣಕ್ಯ, ಜವಾಹರ್ ಲಾಲ್ ಬಾಲ್ ಭವನ್ ಅಧ್ಯಕ್ಷ ಸಿರಿಲ್ ಪ್ರಭು, ಕೆಪಿವೈಸಿಸಿ ಕಾರ್ಯದರ್ಶಿ ವಿಜಯ್ ಆನಂದ್ ಅವರು ಉಪಸ್ಥಿತರಿದ್ದರು.

News First Live Kannada


Leave a Reply

Your email address will not be published. Required fields are marked *