ದಾವಣಗೆರೆ: ಕೊರೊನಾ ಲಾಕ್​ಡೌನ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನಟ ಉಪೇಂದ್ರ ಅವರು ಮಾಡುತ್ತಿರುವ ನೆರವಿನ ಹಸ್ತ ಮುಂದುವರಿದಿದೆ. ದಾವಣಗೆರೆಯಲ್ಲಿ ಹಾಳಾಗುತ್ತಿದ್ದ ಕ್ಯಾಪ್ಸಿಕಮ್ ಖರೀದಿ ಮಾಡಿ ಜನರಿಗೆ ಹಂಚಿದ್ದಾರೆ.

ದಾವಣಗೆರೆಯ ಸತ್ಯನಾರಾಯಣಪುರ ಕ್ಯಾಂಪ್​ನ ಇಂಜಿನಿಯರ್ ವಿದ್ಯಾರ್ಥಿ ಆದರ್ಶ ಅವರಿಂದ ಕ್ಯಾಪ್ಸಿಕಮ್ ಖರೀದಿ ಮಾಡಿದ್ದಾರೆ. ಒಟ್ಟು 9 ಕ್ವಿಂಟಾಲ್ ಕ್ಯಾಪ್ಸಿಕಮ್ 11 ಸಾವಿರಕ್ಕೆ ಕೊಂಡು ಜನರಿಗೆ ಫ್ರೀಯಾಗಿ ಹಂಚಿದ್ದಾರೆ. ಕಷ್ಟಪಟ್ಟು ಬೆಳೆದಿದ್ದ ಯುವಕ ಆದರ್ಶ ಲಾಕ್​ಡೌನ್​​ನಿಂದ ಮಾರಾಟವಾಗದೇ ಕಂಗಾಲಾಗಿದ್ದರು.

ಈ ವಿಷಯವನ್ನ ಆದರ್ಶ ಫೋನ್ ಮಾಡಿ ಉಪೇಂದ್ರ ಅವರಿಗೆ ತಿಳಿಸಿದ್ದಾರೆ. ಕೂಡಲೇ ಉಪೇಂದ್ರ ಅವರು ತಮ್ಮ ಅಭಿಮಾನಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲಿಗೆ ಬಂದ ಉಪೇಂದ್ರ ಅಭಿಮಾನಿಗಳಾದ ಧನಂಜಯ್, ಸಿದ್ದೇಶ್, ರಮೇಶ್, ಶಿವಕುಮಾರ್ ಅಭಿಮಾನಿಗಳು 900 ಕೆಜಿ ಕ್ಯಾಪ್ಸಿಕಮ್ ಖರೀದಿ ಮಾಡಿದ್ದಾರೆ.

ದಾವಣಗೆರೆಯ ಅಣ್ಣಿಗೇರಿ ವೀರಭದ್ರಪ್ಪ ನಗರ, ಭಗತ್ ಸಿಂಗ್ ನಗರ, ಚಿಕ್ಕನಹಳ್ಳಿ ಹೊಸಬಡಾವಣೆ, ನೀಲಮ್ಮ ತೋಟ, ಕೊಟ್ರೇಶ್ವರ ನಗರದಲ್ಲಿರುವ ಬಡ ಜನರಿಗೆ ಕ್ಯಾಪ್ಸಿಕಮ್ ಹಂಚಿಕೆ ಮಾಡಲಾಗಿದೆ. ಉಪೇಂದ್ರ ಅವರ ಕಾರ್ಯಕ್ಕೆ ಬೆಣ್ಣೆ ನಗರಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಕಂಗಾಲಾಗಿದ್ದ ರೈತನಿಗೆ ಉಪೇಂದ್ರ ಬಂಪರ್; 9 ಕ್ವಿಂಟಾಲ್ ಕ್ಯಾಪ್ಸಿಕಮ್ ಖರೀದಿಸಿ ವಿತರಣೆ appeared first on News First Kannada.

Source: newsfirstlive.com

Source link