ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಕಮಲ ಪಾಳಯ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ತಿದೆ. 2023ಕ್ಕೆ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿರೋ ಬಿಜೆಪಿ ಪಡೆ ಅದಕ್ಕಾಗಿಯೇ ವೇದಿಕೆ ಸಿದ್ಧ ಮಾಡಿಕೊಳ್ತಿದೆ. ವರ್ಷಾರಂಭದಲ್ಲೇ ಪಕ್ಷದಲ್ಲಿ ಬದಲಾವಣೆ ಪರ್ವ ಆರಂಭಿಸಲು ಸಜ್ಜಾಗಿದ್ದು, ಮಾಸ್ಟರ್ನ ಪ್ಲಾನ್ ರೂಪಿಸಿದೆ.
ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷವಷ್ಟೇ ಬಾಕಿ ಇದೆ. ಈಗಿನಿಂದಲೇ ಎಲ್ಲಾ ರಾಜಕೀಯ ಪಕ್ಷಗಳು ಗದ್ದುಗೆ ಏರಲು ರಣತಂತ್ರಗಳನ್ನ ಹೆಣೆಯುತ್ತಿವೆ. ಇತ್ತ ರಾಜ್ಯ ಬಿಜೆಪಿ 2023ರ ಚುನಾವಣೆಗಾಗಿ ಪಕ್ಷದೊಳಗೆ ಮೇಜರ್ ಸರ್ಜರಿಗೆ ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಪಕ್ಷದ ಸಾರಥಿಯನ್ನೇ ಬದಲಿಸಲು ಮುಂದಾಗಿದೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ಗೆ ಕೊಕ್
ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಸ್ಥಾನ ಕಲ್ಪಿಸಲು ಕಮಲ ಪಾಳಯ ತಂತ್ರ
2023ರ ವಿಧಾನಸಭಾ ಚುನಾವಣೆ ಹಿನ್ನೆಲೆ, ರಾಜ್ಯ ಕಮಲ ಪಾಳಯದಲ್ಲಿ ಈಗಿನಿಂದಲೇ ಹೊಸ ಕಂಪನ ಶುರುವಾಗ್ತಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ಗೆ ಕೊಕ್ ಕೊಡಲು ವರಿಷ್ಠರು ಚಿಂತನೆ ನಡೆಸಿದ್ದಾರಂತೆ. ಆ ಸ್ಥಾನಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿಯನ್ನ ನೇಮಕ ಮಾಡೋ ಸಾಧ್ಯತೆ ಇದೆ.
ಸಾರಥಿ ಬದಲಾವಣೆ ಯಾಕೆ?
ಕಾರಣ 1 : ಕಟೀಲ್ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡ್ತಿಲ್ಲ
ಕಾರಣ 2 : ಸಿ.ಟಿ.ರವಿ, ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯದವರು
ಕಾರಣ 3 : ನಳಿನ್ ಕಟೀಲ್ ಪ್ರತಿನಿಧಿಸುವ ಬಂಟ ಸಮುದಾಯ ಚಿಕ್ಕದು
ಕಾರಣ 4 : ರಾಜ್ಯದಲ್ಲಿ ಬಂಟ ಸಮುದಾಯಕ್ಕಿಂತ ಒಕ್ಕಲಿಗ ಮತ ಹೆಚ್ಚು
ಕಾರಣ 5 : ಲಿಂಗಾಯತ ಸಮುದಾಯದ ಬೊಮ್ಮಾಯಿಗೆ ಸಿಎಂ ಸ್ಥಾನ
ಕಾರಣ 6 : ಕೈ-ದಳ ಮಧ್ಯೆ ಹಂಚಿಹೋಗ್ತಿರುವ ಒಕ್ಕಲಿಗರ ಮತಗಳು
ಕಾರಣ 7 : ಇತ್ತೀಚೆಗೆ ಬಿಜೆಪಿ ಪರ ಒಕ್ಕಲಿಗ ಸಮುದಾಯದ ಒಲವು
ಸಿ.ಟಿ ರವಿಗೆ ಶಾಸಕರಾಗಿ, ಸಚಿವರಾಗಿಯೂ, ಪಕ್ಷ ಸಂಘಟನೆ ಮಾಡಿ ಅನುಭವವಿದೆ. ಜೊತೆಗೆ ಒಕ್ಕಲಿಗ ಸಮುದಾಯದವರಾಗಿರೋದ್ರಿಂದ ಬಿಜೆಪಿ ಸಾರಥಿಯಾಗಿಸಲು ಪ್ಲಾನ್ ಮಾಡ್ತಿದೆ. ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಮತಗಳೇ ನಿರ್ಣಾಯಕ. ಈ ಹಿನ್ನೆಲೆ ಈಗಾಗಲೇ ಲಿಂಗಾಯತ ನಾಯಕರಾಗಿರೋ ಬೊಮ್ಮಾಯಿಗೆ ಸಿಎಂ ಪಟ್ಟ ಕೊಟ್ಟಿರೋ ಕೇಸರಿ ಪಡೆ, ಅಧ್ಯಕ್ಷ ಸ್ಥಾನವನ್ನ ಸಿ.ಟಿ ರವಿ ಹೆಗಲಿಗೇರಿಸಿ ಎರಡು ಸಮುದಾಯದ ಮತದಾರರನ್ನ ಸೆಳೆಯಲು ಮುಂದಾಗ್ತಿದೆ.
ವಿಶೇಷ ಬರಹ: ಮದುಸೂಧನ್