ಬೆಂಗಳೂರು: ಕನ್ನಿಂಗ್ಯಾಮ್ ರಸ್ತೆಯ ಫೋರ್ಟಿಸ್​ ಆಸ್ಪತ್ರೆಯಲ್ಲಿ ನಿನ್ನೆ ಆಕ್ಸಿಜನ್ ಕೊರತೆ ಉಂಟಾಗುವ ಆತಂಕ ಎದುರಾಗಿತ್ತು. ಈ ಹಿನ್ನೆಲೆ ಆಸ್ಪತ್ರೆಯ ಸಿಬ್ಬಂದಿ ಐಜಿಪಿ ಹರಿಶೇಖರನ್ ಅವರಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದು, ಅದರ ಬೆನ್ನಲ್ಲೇ ಹರಿಶೇಖರನ್ ಸೂಕ್ತ ಸಮಯಕ್ಕೆ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ.

ನಿನ್ನೆ ಹರಿಶೇಖರನ್ ಅವರಿಗೆ ಫೋನ್ ಮಾಡಿದ ಸಿಬ್ಬಂದಿ, ಮಧ್ಯರಾತ್ರಿ 12:30ಕ್ಕೆ ಆಕ್ಸಿಜನ್  ಅಂತ್ಯವಾಗಲಿದೆ ಎಂದು ತಿಳಿಸಿದ್ರು. ಹೀಗಾಗಿ ಐಜಿಪಿ ತಕ್ಷಣ ಯೂನಿವರ್ಸಲ್ ಆಕ್ಸಿಜನ್ ಕಂಪನಿಯಿಂದ 10 ಆಕ್ಸಿಜನ್ ಮೆಗಾ ಸಿಲಿಂಡರ್ ಹಾಗೂ ಒಂದು ಸಾವಿರ ಲೀಟರ್ನ 1 ಟ್ಯಾಂಕರ್ ಆಕ್ಸಿಜನ್ ವ್ಯವಸ್ಥೆ‌ ಮಾಡಿದ್ದಾರೆ.

ಈ ಕುರಿತು ನ್ಯೂಸ್​ಫಸ್ಟ್ ಜೊತೆ ಮಾತನಾಡಿದ ಹರಿಶೇಖರನ್, ಸಂಜೆ ವೇಳೆಗೆ ವಿಷಯ ತಿಳಿಯಿತು. ಫೋರ್ಟಿಸ್​ನಲ್ಲಿ 100 ಬೆಡ್​ಗಳ ವ್ಯವಸ್ಥೆ ಇದೆ. ಸುಮಾರು 70 ಕೋವಿಡ್ ರೋಗಿಗಳಿದ್ದಾರೆ, 25 ರೋಗಿಗಳಿಗೆ ಆಕ್ಸಿಜನ್ ಸಪೋರ್ಟ್ ಬೇಕಿದೆ. ತಕ್ಷಣ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ 2 ದಿನ ಆಕ್ಸಿಜನ್ಗೆ ತೊಂದರೆಯಿಲ್ಲ ಎಂದರು.

ಸುಮಾರು 8 ಆಸ್ಪತ್ರೆಗಳು ನನ್ನ ಅಧೀನದಲ್ಲಿವೆ. ಎಲ್ಲಾ ಆಸ್ಪತ್ರೆಗಳಿಗೆ ಒಂದೊಂದು ಪೊಲೀಸ್ ಆಫಿಸರ್ ಮೇಲುಸ್ತುವಾರಿ ನೀಡಲಾಗಿದೆ. ಮೊದಲೇ ಎಲ್ಲಾ ಆಕ್ಸಿಜನ್ ಬೇಡಿಕೆ ಬಗ್ಗೆ ಗುರುತಿಸಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಆಕ್ಸಿಜನ್ ಪೂರೈಕೆಗೆ ನಾವು ಬದ್ಧ. ತಮಿಳುನಾಡಿನ ಗಡಿ ಭಾಗದಲ್ಲಿ‌ ಆಕ್ಸಿಜನ್ ಪೂರೈಕಾ ಕಂಪನಿಗಳಿವೆ. ಆ ಕಂಪನಿಗಳ ಜೊತೆಗೂ ಮಾತುಕತೆ ನಡೆಸಿದ್ದೇನೆ. ಆಕ್ಸಿಜನ್ ಪೂರೈಕೆ ವಾಹನಗಳನ್ನ ತಡೆಯಬಾರದು ಎಂದು ಮಾತುಕತೆ ನಡೆಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಪೂರೈಕೆಗೆ ನಾವು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ
ಎಂದು ಹರಿಶೇಖರನ್ ತಿಳಿಸಿದ್ರು.

The post ಕಣ್ಣೀರಿಟ್ಟ ಸಿಬ್ಬಂದಿ; ಐಜಿಪಿ ಹರಿಶೇಖರನ್​​ರಿಂದ ಫೋರ್ಟಿಸ್​​ ಆಸ್ಪತ್ರೆಗೆ ಆಕ್ಸಿಜನ್ ವ್ಯವಸ್ಥೆ appeared first on News First Kannada.

Source: newsfirstlive.com

Source link