ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದ ಕುಟುಂಬದವರು; ಹೇಳಿದ್ದು ಒಂದೇ ಮಾತು | Katrina Kaif Vicky Kaushal Marriage: Katrina brother Sebastian Laurent Michel says so happy


ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದ ಕುಟುಂಬದವರು; ಹೇಳಿದ್ದು ಒಂದೇ ಮಾತು

ಕತ್ರಿನಾ ಕೈಫ್, ವಿಕ್ಕಿ ಕೌಶಲ್

ಹಿಂದಿ ಚಿತ್ರರಂಗದ ಸೆಲೆಬ್ರಿಟಿ ಕಪಲ್​ ಆದಂತಹ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್ (Katrina Kaif)​ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇವರಿಬ್ಬರ ಮದುವೆ (Katrina Kaif Vicky Kaushal Wedding) ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮದುವೆ ಮುಹೂರ್ತದ ಸಮಯ ಹತ್ತಿರ ಆಗಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​​ ಹೋಟೆಲ್​ನಲ್ಲಿ ಈ ಅದ್ದೂರಿ ವಿವಾಹ ಸಮಾರಂಭ ನೆರವೇರಲಿದೆ. ಡಿ.6ರ ಸಂಜೆಯೇ ವಿಕ್ಕಿ ಕೌಶಲ್​ (Vicky Kaushal) ಮತ್ತು ಕತ್ರಿನಾ ಕೈಫ್​ ಈ ಸ್ಥಳಕ್ಕೆ ತಲುಪಿದ್ದಾರೆ. ಎರಡೂ ಕಡೆಯ ಕುಟುಂಬಸ್ಥರು  ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ವಿದೇಶದಿಂದ ಬಂದಿರುವ ಕತ್ರಿನಾ ಕುಟುಂಬದ ಸದಸ್ಯರು ಇದೇ ಮೊದಲ ಬಾರಿಗೆ ಈ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕತ್ರಿನಾ ಕೈಫ್​ ಮೂಲತಃ ಬ್ರಿಟನ್​ನವರು. ಜೀವನ ಕಟ್ಟಿಕೊಂಡಿದ್ದು ಇಂಡಿಯಾದಲ್ಲಿ. ಮದುವೆಗೆ ಅವರ ಕುಟುಂಬದ ಸದಸ್ಯರೆಲ್ಲ ಬ್ರಿಟನ್​ನಿಂದ ಆಗಮಿಸಿದ್ದಾರೆ. ಕತ್ರಿನಾ ಸಹೋದರಿ ಇಸಾಬೆಲ್​ ಕೈಫ್​, ಸಹೋದರ ಸೆಬಾಸ್ಟಿಯನ್​ ಮೈಕೆಲ್​ ಕೂಡ ಬಂದಿದ್ದಾರೆ. ಜೈಪುರ ವಿಮಾನ ನಿಲ್ದಾಣದಲ್ಲಿ ಸೋಮವಾರ (ಡಿ.6) ಕಾಣಿಸಿಕೊಂಡ ಅವರನ್ನು ಮಾತನಾಡಿಸಲು ಪಾಪರಾಜಿಗಳು ಪ್ರಯತ್ನ ಮಾಡಿದ್ದಾರೆ. ಕತ್ರಿನಾ ಮದುವೆ ಬಗ್ಗೆ ಏನು ಅನಿಸುತ್ತದೆ ಎಂದು ಕೇಳಿದ್ದಕ್ಕೆ ‘ಬಹಳ ಸಂತೋಷ’ ಅಂತ ಒಂದೇ ಮಾತಿನಲ್ಲಿ ಉತ್ತರ ನೀಡಿ ಅವರು ಮುಂದೆ ಸಾಗಿದ್ದಾರೆ.

ಮದುವೆ ಕುರಿತಾದ ಯಾವುದೇ ಮಾಹಿತಿ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ವಿವಾಹ ನಡೆಯುವ ಸ್ಥಳಕ್ಕೆ ಆಗಮಿಸುವ ಅತಿಥಿಗಳು ಮೊಬೈಲ್​ ತರುವಂತಿಲ್ಲ. ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯುವಂತಿಲ್ಲ. ಮದುವೆ ಎಲ್ಲಿ ನಡೆಯುತ್ತಿದೆ ಎಂಬ ವಿಳಾಸವನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ. ಹೀಗೆ ಅತಿಥಿಗಳಿಗೆ ಹತ್ತಾರು ಷರತ್ತುಗಳನ್ನು ವಿಧಿಸಲಾಗಿದೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಮಂಟಪದ ಬಗ್ಗೆ ಅಚ್ಚರಿಯ ಮಾಹಿತಿ ಹರಡಿದೆ. ಜಗಮಗಿಸುವ ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ವಿಶೇಷ ಏನೆಂದರೆ, ಮದುಮಗ ವಿಕ್ಕಿ ಕೌಶಲ್​ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್​ ಎಂಟ್ರಿ ನೀಡಲಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿದ ಬಳಿಕ ಸ್ಟಾರ್ ಜೋಡಿಯ ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.

ಮದುವೆ ನಡೆಯುವ ಹೋಟೆಲ್​ ಸುತ್ತಮುತ್ತ ಯಾವುದೇ ಡ್ರೋನ್​ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್​ ಕಂಡುಬಂದರೆ ಅದನ್ನು ಶೂಟ್​ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ವರದಿ ಆಗಿದೆ.

TV9 Kannada


Leave a Reply

Your email address will not be published. Required fields are marked *