ಕತ್ರಿನಾ-ವಿಕ್ಕಿ ಮದುವೆ ಕದ್ದು ನೋಡಲು ಡ್ರೋನ್ ಬಳಸಿದರೆ ಕಾದಿದೆ ಶಿಕ್ಷೆ; ಶೂಟ್​ ಮಾಡಲು ನಿರ್ಧಾರ​ | Katrina Kaif Vicky Kaushal wedding: Drones around marriage venue will be shot down


ಕತ್ರಿನಾ-ವಿಕ್ಕಿ ಮದುವೆ ಕದ್ದು ನೋಡಲು ಡ್ರೋನ್ ಬಳಸಿದರೆ ಕಾದಿದೆ ಶಿಕ್ಷೆ; ಶೂಟ್​ ಮಾಡಲು ನಿರ್ಧಾರ​

ಕತ್ರಿನಾ ಕೈಫ್, ವಿಕ್ಕಿ ಕೌಶಲ್

ಕತ್ರಿನಾ ಕೈಫ್​ (, Katrina Kaif) ಮತ್ತು ವಿಕ್ಕಿ ಕೌಶಲ್​ (Vicky Kaushal) ಶೀಘ್ರವೇ ಹಸೆಮಣೆ ಏರಲಿದ್ದಾರೆ. ಸೆಲೆಬ್ರಿಟಿಗಳ ಮದುವೆ ಎಂದರೆ ಎಲ್ಲರಿಗೂ ಕುತೂಹಲ. ಅದ್ದೂರಿ ವಿವಾಹದ ವಿವರಗಳನ್ನು ತಿಳಿಯಲು ಅಭಿಮಾನಿಗಳು ಪ್ರತಿಕ್ಷಣ ಹಪಹಪಿಸುತ್ತಾರೆ. ಆಮಂತ್ರಣ ಪತ್ರಿಕೆ ಹೇಗಿದೆ? ಮದುವೆಯಲ್ಲಿ ಜೋಡಿಯ ಡ್ರೆಸ್​ ಹೇಗಿರಲಿದೆ? ಮಂಟಪವನ್ನು ಹೇಗೆ ಡೆಕೋರೇಟ್​ ಮಾಡಲಾಗಿದೆ? ಯಾವೆಲ್ಲ ಅಡುಗೆಗಳನ್ನು ಮಾಡಿಸಲಾಗಿದೆ? ಬಂದಿರುವ ಅತಿಥಿಗಳು ಯಾರು? ಯಾವ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ? ಹೀಗೆ ಹತ್ತಾರು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಾ ಇರುತ್ತದೆ. ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮದುವೆ (Katrina Kaif Vicky Kaushal Wedding) ಬಗ್ಗೆಯೂ ಜನರಿಗೆ ಈ ರೀತಿಯ ಕೌತುಕ ಇದೆ. ಆದರೆ ಯಾವುದೇ ಗುಟ್ಟು ಬಿಟ್ಟುಕೊಡದೇ ಮದುವೆ ನಡೆಸಲು ನಿರ್ಧರಿಸಲಾಗಿದೆ. ಹಾಗಾಗಿ ಕೆಲವರು ಡ್ರೋನ್​ (Drone) ಮೂಲಕ ವಿವಾಹ ಸಂಭ್ರಮವನ್ನು ಕದ್ದು ನೋಡಲು ಸ್ಕೆಚ್​ ಹಾಕಿರಬಹುದು. ಅಂಥವರಿಗೆ ತಕ್ಕ ಶಿಕ್ಷೆ ಆಗಲಿದೆ.

ತಮ್ಮ ಮದುವೆಗೆ ಬರುವ ಅತಿಥಿಗಳು ಮೊಬೈಲ್​ ಫೋನ್​ ತರುವಂತಿಲ್ಲ ಎಂದು ಈಗಾಗಲೇ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಫೋಟೋಗಳು ಲೀಕ್​ ಆಗಬಾರದು ಎಂಬುದು ಈ ಜೋಡಿಯ ಉದ್ದೇಶ. ಅದೇ ರೀತಿ, ಮದುವೆ ನಡೆಯುವ ಹೋಟೆಲ್​ ಸುತ್ತಮುತ್ತ ಯಾವುದೇ ಡ್ರೋನ್​ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್​ ಕಂಡುಬಂದರೆ ಅದನ್ನು ಶೂಟ್​ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ವರದಿ ಆಗಿದೆ.

ಚಿತ್ರರಂಗದಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರಿಗೆ ಸಿಕ್ಕಾಪಟ್ಟೆ ಸ್ನೇಹಿತರಿದ್ದಾರೆ. ಅನೇಕರಿಗೆ ಈಗಾಗಲೇ ಆಮಂತ್ರಣ ನೀಡಲಾಗಿದೆ. ಡಿ.9ರಂದು ರಾಜಸ್ಥಾನದ ಖಾಸಗಿ ಹೋಟೆಲ್​ನಲ್ಲಿ ಮದುವೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ಕರಣ್​ ಜೋಹರ್​, ಅಲಿ ಅಬ್ಬಾಸ್​ ಜಫರ್​, ಕಬೀರ್​ ಖಾನ್​, ರೋಹಿತ್​ ಶೆಟ್ಟಿ, ಸಿದ್ದಾರ್ಥ್​ ಮಲ್ಹೋತ್ರಾ, ಕಿಯಾರಾ ಅಡ್ವಾನಿ, ನತಾಶಾ ದಲಾಲ್, ವರುಣ್​ ಧವನ್​​ ಮುಂತಾದವರು ಮದುವೆಗೆ ಬರುವ ನಿರೀಕ್ಷೆ ಇದೆ.

ದೇಶದಲ್ಲಿ ಈಗ ಒಮಿಕ್ರಾನ್​ ಕಾಟ ಶುರುವಾಗಿದೆ. ಹಾಗಾಗಿ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಮದುವೆ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳಿಗೆ ಬರುವ ಅತಿಥಿಗಳ ಸಂಖ್ಯೆ ಮೇಲೆ ಸರ್ಕಾರ ನಿರ್ಬಂಧ ಹೇರಿದರೆ ಕತ್ರಿನಾ-ವಿಕ್ಕಿ ವಿವಾಹ ಮಂಕಾಗಲಿದೆ. ಆ ಚಿಂತೆಯಲ್ಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮದುವೆ ನಡೆಯುವ ದಿನಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

TV9 Kannada


Leave a Reply

Your email address will not be published. Required fields are marked *