ಕನಕದಾಸರನ್ನ ಬಿಟ್ಟು ಈಗ ರಾಯಣ್ಣನನ್ನ ಹಿಡ್ಕೊಂಡಿದ್ದಾರೆ: ಜಾತಿ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ | Siddaramaiah Responds to Allegations on Caste Politics


ಕನಕದಾಸರನ್ನ ಬಿಟ್ಟು ಈಗ ರಾಯಣ್ಣನನ್ನ ಹಿಡ್ಕೊಂಡಿದ್ದಾರೆ: ಜಾತಿ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

ಮಂಡ್ಯ: ಕನಕದಾಸರನ್ನು ಬಿಟ್ಟು ಈಗ ಸಂಗೊಳ್ಳಿ ರಾಯಣ್ಣನನ್ನ ಹಿಡಿದುಕೊಂಡಿದ್ದಾರೆ. ರಾಯಣ್ಣನತ್ತ ಒಲವಿಗೆ ನನಗೆ ತಕರಾರಿಲ್ಲ, ಆದರೆ ಕನಕದಾಸರನ್ನು ಬಿಡಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಸಂಗೋಳ್ಳಿ ರಾಯಣ್ಣ ಅವರ ಜೀವನ ಚರಿತ್ರೆ ವಿವರಿಸಿದ ಸಿದ್ದರಾಮಯ್ಯ, ರಾಯಣ್ಣ ಓರ್ವ ಮಹಾನ್ ವ್ಯಕ್ತಿ ಎಂದರು.

ಮಂಡ್ಯದ ಕುರುಬರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಣ್ಣ ಹೆಸರಲ್ಲಿ ಸೈನಿಕ ಶಾಲೆಗೆ ₹ 260 ಕೋಟಿ ಕೊಟ್ಟಿದ್ದೆ. ಈ ಮೊದಲು ಕುರುಬರ ಮಠ ಎಲ್ಲಿತ್ತು? ಆ ಮಠವನ್ನು ಮಾಡಿದ್ದು ನಾನು. ಆದ್ರೀಗ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದಾರೆ ಎಂದು ವಿಷಾದಿಸಿದರು. ಮಂಡ್ಯ ಜಿಲ್ಲೆಯ ಜನರು ಯಾರ ಮಾತನ್ನೂ ಕೇಳಬಾರದು. ಅವರು ಸುಮ್ಮನೆ ಬುರುಡೆ ಬಿಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಂದರೆ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷವನ್ನೇ ಗೆಲ್ಲಿಸಬೇಕು ಎಂದು ಕೈ ಮುಗಿದು ವಿನಂತಿಸಿದರು.

ಬಿಜೆಪಿಯವರಂಥ ಕೊಳಕರು, ಜಾತಿವಾದಿಗಳು ಬೇರೆ ಇಲ್ಲ. ನನ್ನ ಆಯಸ್ಸು ಇನ್ನೂ ಎಷ್ಟಿದೆ ಎಂದು ಗೊತ್ತಿಲ್ಲ. ನನ್ನ ಪ್ರತಿಕೃತಿ ದಹನ ಮಾಡಿದರೆ ನಾನೇನು ಸುಟ್ಟು ಹೋಗುವುದಿಲ್ಲ. ಎಲ್ಲರೂ ಒಟ್ಟಾಗಿ ಬಾಳೋದನ್ನು ಕಲಿಯಬೇಕು. ಒಬ್ಬ ಮನುಷ್ಯ ಮತ್ತೊಬ್ಬನನ್ನು ಪ್ರೀತಿಸುವುದು, ಬೇರೆಯವರಿಗೆ ಕೆಡುಕು ಬಯಸದೇ ಇರುವುದೇ ಧರ್ಮ ಎಂದರು.

ಕುವೆಂಪು ವಿರಚಿತ ನಾಡಗೀತೆಯ ಸಾಲುಗಳು ಹಾಗೂ ಬಸವಣ್ಣನವರ ದಯೆಯೇ ಧರ್ಮದ ಮೂಲವಯ್ಯ ವಚನ ಹಾಡಿದ ಸಿದ್ದರಾಮಯ್ಯ, ಎಲ್ಲರೂ ಒಟ್ಟಾಗಿ ಬಾಳುವುದನ್ನು ಕಲಿಯಬೇಕು ಎಂದರು. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಮುಂದೆ ನಮ್ಮದೇ ಸರ್ಕಾರ ಬರುತ್ತಾ? ಇಲ್ವಾ ಎಂದು ಜನರನ್ನು ಪ್ರಶ್ನಿಸಿದರು. ಸೇರಿದ್ದ ಜನರು ಮುಂದೆ ಕಾಂಗ್ರೆಸ್ ಸರ್ಕಾರವೇ ಬರುತ್ತೆ ಎಂದು ಕೂಗಿದರು.

ರಾಜ್ಯದಲ್ಲಿ ಮುಂದೆ ನಮ್ಮ ಸರ್ಕಾರವೇ ಬರುವ ಗಾಳಿ ಬೀಸಲಾರಂಭಿಸಿದೆ. ಎಲ್ಲಾ ಜಾತಿಯ ಬಡವರಿಗೂ ನ್ಯಾಯ ಸಿಗಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಸಮಾಜದಲ್ಲಿ ಅವಕಾಶಗಳಿಂದ ವಂಚಿತರಾಗಿದ್ದ ಜನರ ಪರವಾಗಿ ಕೆಲಸ ಮಾಡುತ್ತಿದ್ದೆ. ಈಗಿನ ಸರ್ಕಾರವು ನಾನು ಜಾರಿಗೆ ತಂದಿದ್ದ ಎಲ್ಲ ಕಾರ್ಯಕ್ರಮಗಳನ್ನೂ ನಿಲ್ಲಿಸಿದೆ. ಸಿದ್ದರಾಮಯ್ಯ ಜಾತಿ ಮಾಡ್ತಿದ್ದಾರೆ ಎಂದು ವಿನಾಕಾರಣ ದೂರುತ್ತಾರೆ. ಇತಿಹಾಸ ಪುರುಷರ ಜಯಂತಿ ಆಚರಣೆ ಜಾರಿಗೆ ತಂದಿದ್ದೇ ನಾನು ಎಂದು ನೆನಪಿಸಿಕೊಂಡರು.

ಜಾತಿ ರಾಜಕಾರಣ ಮಾಡುವವರೇ ಇವರು, ಆದರೆ ನನ್ನನ್ನು ಜಾತಿಕಾರಣ ಮಾಡುತ್ತೇನೆ ಎಂದು ದೂರುತ್ತಾರೆ. ನಾನು ಮುಖ್ಯಮಂತ್ರಿ ಆದೆ ಎನ್ನುವ ಹೊಟ್ಟೆ ಉರಿಯಿಂದ ಹಾಗೆ ಹೇಳ್ತಿದ್ದಾರೆ. ನಾನು ಸಿಂದಗಿಯಲ್ಲಿ ಉಪ ಚುನಾವಣೆಗೆ ಹೋಗಿದ್ದ ಸಂದರ್ಭದಲ್ಲಿ ಎಡಗೈ ಸಮಾವೇಶ ನಡೆಯುತ್ತಿತ್ತು. ಅಲ್ಲಿ ನಾನು ಕೆಲವರ ಹೆಸರು ಪ್ರಸ್ತಾಪಿಸಿ ಹೇಳಿದ್ದೆ ಆದ್ರೆ ನನ್ನ ಜಾತಿ ವಾದಿ ಅಂತ ಕತೆ ಕಟ್ಟಿದರು ಎಂದು ವಿಷಾದಿಸಿದರು.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್​ನಿಂದ ಪಾದಯಾತ್ರೆ: ಸಿದ್ದರಾಮಯ್ಯ ಮಾಹಿತಿ
ಇದನ್ನೂ ಓದಿ: ದಲಿತ ನಾಯಕರ ಬಗ್ಗೆ ಸಿದ್ದರಾಮಯ್ಯಗೆ ಅಸಮಾಧಾನ: ಸಿಟಿ ರವಿ ಟೀಕೆ

TV9 Kannada


Leave a Reply

Your email address will not be published. Required fields are marked *