ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಡ್ಯಾಂಗೆ ಭಾರೀ ತೊಂದರೆಯಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಈ ಬೆನ್ನಲ್ಲೀಗ ಕೆಆರ್​ಎಸ್​ ಅಣೆಕಟ್ಟಿನ ಸಮೀಪ ಕಲ್ಲುಗಳು ಕುಸಿದಿವೆ. ಜಲಾಶಯದಿಂದ ಮೇಲ್ಭಾಗಕ್ಕೆ ತೆರಳಲು ಇರುವ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಇದೀಗ ಕೆಆರ್​ಎಸ್​ ಡ್ಯಾಂ ಸಮೀಪದಲ್ಲಿ ಕಲ್ಲು ಕುಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತಾಡಿದ ಸುಮಲತಾ ಅಂಬರೀಶ್​​ ಅವರು, ನಿನ್ನೆ ರಾತ್ರಿ ಸ್ಥಳೀಯರು ಕರೆ ಮಾಡಿ ಕೆಆರ್‌ಎಸ್ ಡ್ಯಾಂ ಗೋಡೆ ಕುಸಿದಿರುವ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಾನೇ ಖುದ್ದು ಅಧಿಕಾರಿಗೆ ಕರೆ ಮಾಡಿ ಮಾಹಿತಿ ಕೇಳಿದೆ.‌ ಆಗ ಅಧಿಕಾರಿಗಳು ಎರಡು-ಮೂರು ಕಲ್ಲು ಬಿದ್ದಿವೆ ಅಂತಾ ಮಾಹಿತಿ ನೀಡಿದರು ಎಂದು ತಿಳಿಸಿದರು.

ಡ್ಯಾಂ ಗೋಡೆ ಕುಸಿದಿರುವ ಬಗ್ಗೆ ಫೋಟೋ ಮತ್ತು ವಿಡಿಯೋಗಳ ಮಾಹಿತಿ‌ ಕೇಳಿದ್ದೇನೆ. ಹಾಗೆಯೇ ಸ್ಥಳದಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನಿನ್ನೆ ಸಂಜೆ 5:15 ಗಂಟೆ ಸುಮಾರಿಗೆ ಗೋಡೆ ಕುಸಿದಿದೆ ಎಂದು ಸ್ಥಳೀಯ ಅಧಿಕಾರಗಳಿಂದ ಮಾಹಿತಿ ಲಭ್ಯವಾಗಿದೆ ಎಂದರು.

ಇನ್ನು, ಮಂಡ್ಯದ ಡಿಸಿ ಜೊತೆಗೂ ಮಾತಾಡಿದ್ದೇನೆ. ಅದಕ್ಕೆ ಜಿಲ್ಲಾಧಿಕಾರಿ ಇದು ಹಳೆಯ ಗೋಡೆ ಎಂದಿದ್ದಾರೆ. ಅವರ ಪ್ರಕಾರ ರಾತ್ರಿ 9.30 ಸಮಯದಲ್ಲಿ ಈ ಘಟನೆ ನಡೆದಿದೆ. ಎಲ್ಲರೂ ಟೈಮ್​​ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಕೆಆರ್‌ಎಸ್ ಗೋಡೆ ಕುಸಿದಿರುವ ವಿಚಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ’ ಎಂದು ಕೆಂಡಮಂಡಲರಾದರು.

ಇದನ್ನೂ ಓದಿಕೆಆರ್‌ಎಸ್‌ ಡ್ಯಾಂ ಬಳಿಯ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲುಗಳ ಕುಸಿತ

ಕೆಆರ್‌ಎಸ್ ಡ್ಯಾಂ ಸದ್ಯಕ್ಕೆ ಸೇಫ್.‌ ಅದು ಹಾಗೆಯೇ ಇರಬೇಕು ಎನ್ನುವುದು ನಮ್ಮ ಬಯಕೆ. ಆದರೀಗ ಗೋಡೆ ಕುಸಿದಿರುವುದು ರೆಡ್ ಅಲರ್ಟ್ ಇದ್ದಂತೆ. ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ.‌ ಯಾರೊಬ್ಬರು ಗೋಡೆ ಕುಸಿತಕ್ಕೆ ಸರಿಯಾದ ಕಾರಣ ಹೇಳ್ತಿಲ್ಲ. ರಾಜ್ಯ ಸರ್ಕಾರ ಈಗ ಮೌನವಾಗಿ ಕೂರಲು ಸಾಧ್ಯವಿಲ್ಲ. ಸರ್ಕಾರ ಉತ್ತರ ನೀಡಬೇಕು.‌ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.

The post ಕನ್ನಂಬಾಡಿ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ; ಮಂಡ್ಯ ಸಂಸದೆ ಸುಮಲತಾ appeared first on News First Kannada.

Source: newsfirstlive.com

Source link