ಕನ್ನಡಕವಿಲ್ಲದೇ ನ್ಯೂಸ್ ಪೇಪರ್ ಓದಲು ಸೋತ ವರ; ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ

ಕನ್ನಡಕವಿಲ್ಲದೇ ನ್ಯೂಸ್ ಪೇಪರ್ ಓದಲು ಸೋತ ವರ; ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಜಮ್ಲಾಪುರ್ ಎಂಬಲ್ಲಿ ಮದುವೆಯೊಂದು ನಿಶ್ಚಯಗೊಂಡಿತ್ತು. ಆದ್ರೆ ಪತಿಯಾಗಬೇಕಿದ್ದವನು ಕನ್ನಡಕವಿಲ್ಲದೇ ಪತ್ರಿಕೆ ಓದಲು ಸಾಧ್ಯವಾಗದ ಹಿನ್ನೆಲೆ ವಧು ಆತನನ್ನು ವಿವಾಹವಾಗಲು ನಿರಾಕರಿಸಿದ್ದಾಳೆ. ಕೊನೆಗೆ ಮದುವೆ ಮುರಿದುಬಿದ್ದಿದೆ. ಅಷ್ಟೇ ಅಲ್ಲದೆ ವಧುವಿನ ಕುಟುಂಬದವರು ವರ ಹಾಗೂ ಆತನ ಕುಟುಂಬದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಅರ್ಚನಾ ಹೆಸರಿನ ವಧು ಶಿವಂ ಎಂಬುವನನ್ನ ವರಿಸಬೇಕಿತ್ತು. ಮದುವೆಯ ದಿನದವರೆಗೂ ಕುಟುಂಬದವರು ಶಿವಂಗೆ ಕಣ್ಣಿನ ದೋಷ ಇದ್ದುದನ್ನ ಮುಚ್ಚಿಟ್ಟಿದ್ದರಂತೆ. ಆದರೆ ಮದುವೆಯ ದಿನ ವರ ಕನ್ನಡಕ ಹಾಕಿಕೊಂಡು ಪ್ರತ್ಯಕ್ಷವಾಗಿದ್ದಾನೆ. ಇದರಿಂದ ಅನುಮಾನಗೊಂಡ ವಧುವಿನ ಕುಟುಂಬದವರು ವರನಿಗೆ ಕನ್ನಡಕ ತೆಗೆದು ನ್ಯೂಸ್ ಪೇಪರ್ ಒಂದನ್ನು ಓದುವಂತೆ ಹೇಳಿದ್ದಾರೆ.

ಈ ವೇಳೆ ವರನಿಗೆ ಕಣ್ಣಿನ ದೋಷವಿರುವುದು ಗೊತ್ತಾಗಿದೆ. ಇದರಿಂದಾಗಿ ವಧುವಿನ ಕುಟುಂಬದವರು ಮದುವೆ ನಿಲ್ಲಿಸಿದ್ದಾರೆ. ನಂತರ ಹೇಳಿಕೆ ನೀಡಿರುವ ವಧುವಿನ ತಂದೆ ಅರ್ಜುನ್ ಸಿಂಗ್.. ವರನಿಗೆ ಕಣ್ಣಿನ ತೊಂದರೆ ಇರುವುದು ಕೊನೆಯ ಕ್ಷಣದವರೆಗೂ ನನಗೆ ತಿಳಿದಿರಲಿಲ್ಲ. ನನ್ನ ಮಗಳು ಸತ್ಯಾಂಶ ತಿಳಿದು ಮದುವೆಗೆ ನಿರಾಕರಿಸಿದ್ದಾಳೆ ಎಂದಿದ್ದಾರೆ.

ಮುಂದುವರೆದು ವರದಕ್ಷಿಣೆಯಾಗಿ ವಧುವಿನ ಮನೆಯವರು ನೀಡಿದ ಹಣ, ಮೋಟಾರ್ ಸೈಕಲ್​ನ್ನು ಹಿಂದಿರುಗಿಸುವಂತೆ ವರನ ಕುಟುಂಬದವರಿಗೆ ಒತ್ತಾಯಿಸಿದ್ದಾರೆ. ಅಲ್ಲದೇ ಮದುವೆಗಾಗಿ ಖರ್ಚು ಮಾಡಿದ ಹಣವನ್ನೂ ವಾಪಸ್ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಔರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಾಗಿದೆ ಎನ್ನಲಾಗಿದೆ.

The post ಕನ್ನಡಕವಿಲ್ಲದೇ ನ್ಯೂಸ್ ಪೇಪರ್ ಓದಲು ಸೋತ ವರ; ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ appeared first on News First Kannada.

Source: newsfirstlive.com

Source link