‘ಕನ್ನಡಕ್ಕೆ ಡಬ್​ ಮಾಡಲ್ಲ, ಕನ್ನಡಿಗರು ತೆಲುಗಿನಲ್ಲೇ ನೋಡ್ತಾರೆ’; ಟಾಲಿವುಡ್​​ ನಟ ನಾನಿ ಹೇಳಿಕೆಗೆ ಕರುನಾಡು ಗರಂ | Ante Sundaraniki Telugu movie actor Nani gives clarification after hurting sentiments of Kannadigas


‘ಕನ್ನಡಕ್ಕೆ ಡಬ್​ ಮಾಡಲ್ಲ, ಕನ್ನಡಿಗರು ತೆಲುಗಿನಲ್ಲೇ ನೋಡ್ತಾರೆ’; ಟಾಲಿವುಡ್​​ ನಟ ನಾನಿ ಹೇಳಿಕೆಗೆ ಕರುನಾಡು ಗರಂ

ನಾನಿ

ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆಯವರಿಗೆ ಇರುವ ಭಾವನೆಯೇ ಬೇರೆ. ಇಲ್ಲಿನ ಮಾರುಕಟ್ಟೆ ಚಿಕ್ಕದು ಎಂಬ ಮಾತನ್ನು ಕೆಲವರು ಈಗಲೂ ಹೇಳುತ್ತಾರೆ. ಅಂಥವರಿಗೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಉತ್ತರ ನೀಡಿದೆ. ಆ ನಂತರವೂ ಕೆಲವರು ಕನ್ನಡ ಸಿನಿಪ್ರೇಕ್ಷಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಟಾಲಿವುಡ್ನಟ ನಾನಿ  (Actor Nani) ಅವರು ಈಗ ಅಂಥದ್ದೊಂದು ಹೇಳಿಕೆ ನೀಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿರುವ ಅವರು ಈಗ ಕನ್ನಡಿಗರ (Kannadigas) ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಅನೇಕ ನೆಟ್ಟಿಗರು ಗರಂ ಆಗಿದ್ದಾರೆ. ಜನರಿಂದ ವಿರೋಧ ತೀವ್ರವಾಗುತ್ತಿದ್ದಂತೆಯೇ ನಾನಿ ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅವರು ಮಾತನಾಡಿದ್ದು ಏನು? ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ನಾನಿ ನಟನೆಯ ‘ಅಂಟೆ ಸುಂದರಾನಿಕಿ’ (Ante Sundaraniki) ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಯಾಕೆ ಡಬ್​ ಮಾಡಿಲ್ಲ ಎಂದು ಕೇಳಿದ್ದಕ್ಕೆ ನಾನಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ರಿಲೀಸ್​ ಆಗುವ ಟ್ರೆಂಡ್​ ಈಗ ಜೋರಾಗಿದೆ. ಅದರಂತೆ ನಾನಿ ಅವರ ‘ಅಂಟೆ ಸುಂದರಾನಿಕಿ’ ಸಿನಿಮಾ ಕೂಡ ತೆಲುಗಿನ ಜತೆಗೆ ಮಲಯಾಳಂ ಮತ್ತು ತಮಿಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಆದರೆ ಕನ್ನಡಕ್ಕೆ ಡಬ್​ ಮಾಡಿಲ್ಲ. ಯಾಕೆ ಎಂದು ಕೇಳಿದ್ದಕ್ಕೆ ನಾನಿ ಅವರು ಎಡವಟ್ಟಿನ ಮಾತನಾಡಿದ್ದಾರೆ.

‘ಬಹುತೇಕ ಎಲ್ಲ ಕನ್ನಡಿಗರಿಗೆ ತೆಲುಗು ಅರ್ಥ ಆಗುತ್ತದೆ. ಅವರು ತೆಲುಗಿನಲ್ಲಿಯೇ ಸಿನಿಮಾ ನೋಡಲು ಇಷ್ಟಪಡುತ್ತಾರೆ. ಹಾಗಾಗಿ ನಮ್ಮ ಚಿತ್ರವನ್ನು ಕೂಡ ಕನ್ನಡಿಗರು ತೆಲುಗಿನಲ್ಲೇ ನೋಡುತ್ತಾರೆ’ ಎಂದು ಈ ಸಿನಿಮಾದ ಟೀಸರ್​ ಲಾಂಚ್​ ವೇಳೆ ನಾನಿ ಹೇಳಿದ್ದಾರೆ. ಈ ಮಾತಿಗೆ ನೆಟ್ಟಿಗರಿಂದ ಸಖತ್​ ವಿರೋಧ ವ್ಯಕ್ತವಾಗಿದೆ. ಕನ್ನಡಕ್ಕೆ ಡಬ್​ ಮಾಡಿದರೆ ಮಾತ್ರ ಸಿನಿಮಾ ನೋಡುತ್ತೇವೆ. ಇಲ್ಲದಿದ್ದರೆ ನೋಡುವುದಿಲ್ಲ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ‘ನಮಗೆ ತೆಲುಗು ಅರ್ಥ ಆಗುವುದಿಲ್ಲ. ತೆಲುಗಿನಲ್ಲಿ ಸಿನಿಮಾ ನೋಡಲು ನಾವು ಇಷ್ಟಪಡುವುದಿಲ್ಲ’ ಎಂದು ಹಲವರು ನೇರವಾಗಿ ಕನ್ನಡದಲ್ಲಿಯೇ ಕಮೆಂಟ್​ ಮಾಡಿದ್ದಾರೆ.

ಕನ್ನಡಿಗರು ಈ ಪರಿ ಗರಂ ಆಗಿದ್ದನ್ನು ಕಂಡು ನಾನಿ ಕ್ಷಮೆ ಕೇಳಿದ್ದಾರೆ. ‘ಡಬ್ಬಿಂಗ್​ ಇಲ್ಲದೇ ಇರುವಾಗಲೂ ಕೂಡ ಕನ್ನಡದ ಅನೇಕ ಕುಟುಂಬಗಳು ನಮ್ಮ ತೆಲುಗು ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಎಂಬುದು ನನ್ನ ಮಾತಿನ ಅರ್ಥವಾಗಿತ್ತು. ಸುದ್ದಿಗೋಷ್ಠಿಯಲ್ಲಿ ನಾನು ಆ ಕುರಿತು ಮಾತ್ರ ಹೇಳಿದ್ದು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅದು ಬೇರೆ ಸ್ವರೂಪ ಪಡೆದಿದೆ. ಸರಿಯಾಗಿ ಹೇಳಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ಕನ್ನಡ ಸಿನಿಮಾಗಳು ಗಡಿ ಮೀರಿ ಸಾಧನೆ ಮಾಡುತ್ತಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ನಾನಿ ಟ್ವೀಟ್​ ಮಾಡಿದ್ದಾರೆ.

‘ಅಂಟೆ ಸುಂದರಾನಿಕಿ’ ಸಿನಿಮಾ ಜೂ.10ರಂದು ಬಿಡುಗಡೆ ಆಗಲಿದೆ. ರಿಲೀಸ್​ ಸಂದರ್ಭದಲ್ಲಿ ಕನ್ನಡಿಗರಿಂದ ಮತ್ತೆ ವಿರೋಧ ವ್ಯಕ್ತವಾದರೂ ಅಚ್ಚರಿ ಏನಿಲ್ಲ. ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

TV9 Kannada


Leave a Reply

Your email address will not be published.