‘ಕನ್ನಡತಿ’ ಕಥೆಗೆ ಬಿಗ್ ಟ್ವಿಸ್ಟ್​: ಮಾಡದ ತಪ್ಪಿಗೆ ಅರೆಸ್ಟ್​ ಆದ ಭುವನೇಶ್ವರಿ | Kannadathi Serial Update Bhuvi Ranjani Raghavan Arrested In Kannadathi Serial


ರತ್ನಮಾಲಾ ಮನೆಯಲ್ಲಿ ನವರಾತ್ರಿ ಹಬ್ಬದ ಆಚರಣೆ ಜೋರಾಗಿದೆ. ಎಲ್ಲರೂ ಹಬ್ಬ ಆಚರಿಸುತ್ತಾ ಸಂಭ್ರಮದಲ್ಲಿ ತೇಲುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ಮನೆಗೆ ಪೊಲೀಸರ ಆಗಮನವಾಗಿದೆ.

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವನೇಶ್ವರಿ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಈ ಪಾತ್ರವನ್ನು ನಟಿ ರಂಜನಿ ರಾಘವನ್ ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಒದಗಿಸುತ್ತಿದ್ದಾರೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಪಾತ್ರ ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡಿದೆ. ಅವಳ ಮುಗ್ಧತೆ. ತಪ್ಪು ಮಾಡಿದವರಿಗೆ ಸೈಲೆಂಟ್ ಆಗಿ ತಮ್ಮ ಮಾತಿನ ಮೂಲಕವೇ ಖಡಕ್ ಆಗಿ ಉತ್ತರ ನೀಡೋದು ಹೀಗೆ ಅವರ ಪಾತ್ರದ ಅನೇಕ ಗುಣಗಳು ವೀಕ್ಷಕರಿಗೆ ಇಷ್ಟವಾಗಿದೆ. ಈ ಮಧ್ಯೆ ‘ಕನ್ನಡತಿ’ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಭುವನೇಶ್ವರಿ ಮಾಡದ ತಪ್ಪಿಗೆ ಅರೆಸ್ಟ್ ಆಗಿದ್ದಾಳೆ. ಇದರ ಹಿಂದೆ ಇರೋದು ಯಾರು ಎಂಬುದು ಸದ್ಯದ ಕುತೂಹಲ.

ರತ್ನಮಾಲಾ ಮನೆಯಲ್ಲಿ ನವರಾತ್ರಿ ಹಬ್ಬದ ಆಚರಣೆ ಜೋರಾಗಿದೆ. ಎಲ್ಲರೂ ಹಬ್ಬ ಆಚರಿಸುತ್ತಾ ಸಂಭ್ರಮದಲ್ಲಿ ತೇಲುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ಮನೆಗೆ ಪೊಲೀಸರ ಆಗಮನವಾಗಿದೆ. ಮನೆಯ ಹೊರಗೆ ನಿಂತಿದ್ದ ಪೊಲೀಸರನ್ನು ಕಂಡು ಭುವಿ ನೇರವಾಗಿ ಪೊಲೀಸರ ಬಳಿ ಬಂದು ಪ್ರಶ್ನೆ ಮಾಡಿದ್ದಾಳೆ. ‘ನೀವು ಇಲ್ಲಿಗೆ ಬಂದ ಕಾರಣ ಏನು? ಯಾಕೆ ಮನೆಯವರೆಗೆ ಬಂದಿದ್ದೀರಿ’ ಎಂದು ಪ್ರಶ್ನೆ ಮಾಡಿದ್ದಾಳೆ ಭುವಿ. ಆದರೆ, ಪೊಲೀಸರು ಇದಕ್ಕೆ ಉತ್ತರ ನೀಡಿಲ್ಲ. ಬದಲಿಗೆ ‘ಈ ಕಾರು ರತ್ನಮಾಲಾ ಅವರದ್ದಲ್ಲವೇ? ಎಲ್ಲಿದ್ದಾರೆ ಅವರು? ನೋಡಿ ಕಾರಿಗೆ ಸ್ಕ್ರ್ಯಾಚ್ ಆಗಿದೆ. ಮೊನ್ನೆ ರಾತ್ರಿ ಕಾರು ಚಲಾಯಿಸುತ್ತಿದ್ದುದು ಅವರೇ ತಾನೇ? ಅವರು ಪೊಲೀಸ್ ಠಾಣೆಗೆ ಬರಬೇಕು’ ಎಂದು ಪೊಲೀಸರು ಹೇಳುತ್ತಿದ್ದಂತೆ ಭುವಿ ಅಲರ್ಟ್​ ಆದಳು. ಎಲ್ಲೋ ತಪ್ಪು ನಡೆದಿದೆ ಎಂಬುದು ಅವಳಿಗೆ ಗೊತ್ತಾಗಿದೆ.

‘ಮೊನ್ನೆ ಕಾರು ತೆಗೆದುಕೊಂಡು ಹೋಗಿದ್ದು ರತ್ನಮಾಲಾ ಅಲ್ಲ. ಅವರಿಗೆ ಅನಾರೋಗ್ಯ ಕಾಡಿದೆ. ಹೀಗಾಗಿ ನಾನೇ ಕಾರು ಚಲಾಯಿಸಿಕೊಂಡು ಹೋಗಿದ್ದೆ’ ಎಂದು ಭುವಿ ಸ್ಪಷ್ಟನೆ ನೀಡಿದ್ದಾಳೆ. ಇದಾದ ಬೆನ್ನಲ್ಲೇ ಭುವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಣವನ್ನೂ ಹೇಳದೇ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಪೊಲೀಸರು.

ಸಾನಿಯಾ ಬಿದ್ದು ಗಾಯಮಾಡಿಕೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ರತ್ನಮಾಲಾ. ಆದರೆ, ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಶುರುವಾಗಿದೆ. ಹೀಗಾಗಿ ಸಾನಿಯಾಳನ್ನು ಆಸ್ಪತ್ರೆಯಲ್ಲೇ ಬಿಟ್ಟು ರತ್ನಮಾಲಾ ನೇರವಾಗಿ ಮನೆ ಬಂದಿದ್ದಾಳೆ. ಆದರೆ ಮನೆಗೆ ಬರುವಾಗ ಕಾರಿಗೆ ಅಪಘಾತವಾಗಿರಬಹುದು ಎಂಬುದು ವೀಕ್ಷಕರ ಊಹೆ. ಈ ಕಾರಣದಿಂದ ಪೊಲೀಸರು ರತ್ನಮಾಲಾಳನ್ನು ಹುಡುಕಿ ಬಂದಿದ್ದಾರೆ ಎನ್ನಲಾಗಿದೆ.

ರತ್ನಮಾಲಾಗೆ ಭುವಿಯ ಮೇಲೆ ಅಪಾರ ಪ್ರೀತಿ ಇದೆ. ಭುವಿಗೂ ಅಷ್ಟೇ, ರತ್ನಮಾಲಾಳನ್ನು ಕಂಡರೆ ಅಪಾರ ಗೌರವ. ರತ್ನಮಾಲಾಗೆ ಅನಾರೋಗ್ಯ ಕಾಡುತ್ತಿರುವುದರಿಂದ ಅವರನ್ನು ಬಂಧಿಸಿ ಕರೆದುಕೊಂಡು ಹೋದರೆ ಸಾಕಷ್ಟು ತೊಂದರೆ ಉಂಟಾಗಬಹುದು. ಈ ಕಾರಣದಿಂದ ತಾನೇ ತಪ್ಪು ಮಾಡಿರುವುದಾಗಿ ಭುವಿ ಒಪ್ಪಿಕೊಂಡಿದ್ದಾಳೆ.

TV9 Kannada


Leave a Reply

Your email address will not be published.