‘ಕನ್ನಡತಿ’ ಧಾರಾವಾಹಿಗೆ ‘ಮುಂಗಾರು ಮಳೆ’ ಸಿನಿಮಾ ಟಚ್; ಹೊಸ ಅವತಾರದಲ್ಲಿ ಹರ್ಷ-ಭುವಿ | Kannadathi Serial Gets Mungarumale Movie Touch here is the video


ಹರ್ಷ ಹಾಗೂ ಭುವಿ ಮದುವೆಗೆ ಅನೇಕ ಅಡೆತಡೆಗಳು ಎದುರಾಗುವ ಸೂಚನೆ ಸಿಕ್ಕಿದೆ. ಹರ್ಷನ ತಾಯಿ ರತ್ನಮಾಲಾ ಆರೋಗ್ಯ ಕೆಟ್ಟಿರುವುದರಿಂದ ಅವರು ಯಾವ ಸಂದರ್ಭದಲ್ಲಿ ಬೇಕಿದ್ದರೂ ನಿಧನ ಹೊಂದಬಹುದು. ಇದು ಹರ್ಷನ ಚಿಂತೆಗೆ ಕಾರಣವಾಗಿದೆ.

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷನ ಪ್ರೀತಿಯನ್ನು ಭುವಿ ಯಾವಾಗ ಒಪ್ಪಿಕೊಳ್ಳುತ್ತಾಳೆ, ಇಬ್ಬರ ಮದುವೆ ಯಾವಾಗ ನೆರವೇರುತ್ತದೆ ಎಂಬಿತ್ಯಾದಿ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿದ್ದವು. ಈ ಎಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿಯೇ ಉತ್ತರ ಸಿಗುತ್ತಿದೆ. ಮೊದಲು ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಳು. ಆ ಬಳಿಕ ಇಬ್ಬರ ನಿಶ್ಚಿತಾರ್ಥ ನೆರವೇರಿತು. ಈ ಮಧ್ಯೆ ಭುವಿಯನ್ನು ಕೊಲ್ಲಲು ಪ್ರಯತ್ನಗಳು ಕೂಡ ನಡೆದವು. ಹಲವು ಅಡೆತಡೆಗಳನ್ನು ದಾಟಿ ಭುವಿ ಹಾಗೂ ಹರ್ಷ ಮದುವೆ ಆಗುತ್ತಿದ್ದಾರೆ. ಇಷ್ಟಕ್ಕೆ ನಿಂತಿಲ್ಲ. ಮುಂದೆಯೂ ಹಲವು ತೊಂದರೆಗಳು ಬರೋಕೆ ರೆಡಿ ಆಗಿವೆ. ಇದನ್ನು ಈ ಜೋಡಿ ಹೇಗೆ ಎದುರಿಸುತ್ತದೆ ಅನ್ನೋದು ಸದ್ಯದ ಕುತೂಹಲ. ಈ ಮಧ್ಯೆ, ‘ಕನ್ನಡತಿ’ ಧಾರಾವಾಹಿಗೆ ‘ಮುಂಗಾರು ಮಳೆ’ ಸಿನಿಮಾ (Mungaru Male Movie) ಟಚ್ ನೀಡಲಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರಲ್ಲಿ ಬರುವ ಒಂದು ದೃಶ್ಯವನ್ನು ಸ್ಫೂರ್ತಿಯಾಗಿಟ್ಟುಕೊಂಡು ‘ಕನ್ನಡತಿ’ಯಲ್ಲೂ ಒಂದು ದೃಶ್ಯವನ್ನು ಕಂಪೋಸ್ ಮಾಡಲಾಗಿದೆ.

ಭುವಿ ಹಾಗೂ ಹರ್ಷ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಭುವನಗಿರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಕಾರಿನಲ್ಲಿ ಹೋಗದೆ ಮೆಟ್ಟಿಲನ್ನು ಏರಿ ದೇವಸ್ಥಾನ ತಲುಪುವ ನಿರ್ಧಾರಕ್ಕೆ ಭುವಿ ಬಂದಳು. ಹರ್ಷನೂ ಇದಕ್ಕೆ ಸಾಥ್​ ಕೊಡೋಕೆ ಬಂದ. ಮೆಟ್ಟಿಲು ಆರಂಭವಾಗುವ ಜಾಗದಲ್ಲಿ ಈ ಜೋಡಿಗೆ ಹೂವು ಮಾರುವವಳೊಬ್ಬಳು ಎದುರಾದಳು. ‘ಹೆಂಡತಿ ಆಗುವವಳನ್ನು ಎತ್ತಿಕೊಂಡು ದೇವಸ್ಥಾನ ತಲುಪಿದರೆ ನೂರು ವರ್ಷ ಇಬ್ಬರೂ ಸುಖವಾಗಿ ಇರುತ್ತೀರಿ’ ಎಂದಳು. ಈ ಕಾರಣಕ್ಕೆ ಭುವಿಯನ್ನು ಹರ್ಷ ಎತ್ತಿಕೊಂಡೇ ಸಾಗಿದ್ದಾನೆ.

ಇದೇ ರೀತಿಯ ದೃಶ್ಯ ‘ಮುಂಗಾರು ಮಳೆ’ ಚಿತ್ರದಲ್ಲೂ ಇದೆ. ಅದರಿಂದಲೇ ಸ್ಫೂರ್ತಿ ಪಡೆದು ಈ ದೃಶ್ಯವನ್ನು ಕಂಪೋಸ್ ಮಾಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಗುಂಗಲ್ಲಿರುವ ಹರ್ಷ ಹಾಗೂ ಭುವಿ ಜೋಡಿಯ ಕಥೆಗೆ ‘ಮುಂಗಾರು ಮಳೆ’ ಸಿನಿಮಾದ ಟಚ್ ನೀಡಿರುವುದು ಫ್ಯಾನ್ಸ್​ಗೆ ಖುಷಿ ನೀಡಿದೆ. ಭುವಿಯ ಬಗ್ಗೆ ಹರ್ಷನಿಗೆ ಅಪಾರ ಪ್ರೀತಿ ಇದೆ. ಆದರೆ, ಹಿಂದೆಂದೂ ಭುವಿಯನ್ನು ಹರ್ಷ ಎತ್ತಿಕೊಂಡು ಹೋಗಿರಲಿಲ್ಲ. ಹರ್ಷ ಹಾಗೂ ಭುವಿಯ ಕಥೆ ಹೊಸ ರೀತಿಯಲ್ಲಿ ಸಾಗುತ್ತಿರುವುದು ವೀಕ್ಷಕರಿಗೆ ಇಷ್ಟವಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *