ಬದುಕಿದ್ದಾಗ ಅಪ್ಪು ಮಾಡಿದ್ದ ಅದೆಷ್ಟೋ ಸಮಾಜಮುಖಿ ಕಾರ್ಯಗಳು ಜನರಿಗೆ ತಿಳಿಸಿದರಲಿಲ್ಲ. ಯಾಕಂದ್ರೆ ಅವರು ಪ್ರಚಾರಕ್ಕೋಸ್ಕರ ಈ ಕೆಲಸಗಳನ್ನ ಮಾಡಿರಲಿಲ್ಲ. ಈಗ ಅವರು ಮಾಡಿದ್ದ ಕೆಲಸಗಳಿಂದಾಗಿ ಅಪ್ಪು ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲಾ ಅಪ್ಪು ಅವರು ಸಾವಿನ ಸಂದರ್ಭದಲ್ಲೂ ನಡೆದಕೊಂಡ ರೀತಿಯಿಂದಾಗಿ ಈ ಸಮಾಜಕ್ಕೆ ಮತ್ತೊಂದು ಕೊಡುಗೆಯನ್ನ ನೀಡಿ ತೆರಳಿದ್ದಾರೆ.
ಮರಣದ ನಂತರ ನೇತ್ರವನ್ನು ದಾನ ಮಾಡಬೇಕು, ಆ ಮೂಲಕ ಅಂಧರ ಬಾಳಲ್ಲಿ ಬೆಳಕು ತರಬೇಕು ಅಂತ ವರನಟ ಡಾ.ರಾಜ್ ಕುಮಾರ್ ಜಾಗೃತಿ ಮೂಡಿಸುತ್ತಿದ್ದರು. ಅದರಂತೆ ಡಾ.ರಾಜ್ ನೇತ್ರವನ್ನು ದಾನ ಮಾಡಿದ್ದಾರೆ. ಅಂಧರಿಗೆ ಬೆಳಕಾಗಿದ್ದಾರೆ. ಅದರಿಂದ ಪ್ರೇರಣೆಗೊಂಡ ಅದೆಷ್ಟೋ ಜನ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ರು. ಈ ನಡುವೆ ಡಾ.ರಾಜ್ ಪುತ್ರ ಪುನೀತ್ ರಾಜ್‌ಕುಮಾರ್ ಅಕ್ಟೋಬರ್ 29 ರಂದು ಹೃದಯಸ್ತಂಬನದಿಂದ ನಿಧನರಾಗಿದ್ದಾರೆ. ಮರಣದ ನಂತರ ಅಪ್ಪು ನೇತ್ರದಾನ ಮಾಡಿ ನಾಲ್ವರಿಗೆ ಬೆಳಕು ನೀಡಿದ್ದಾರೆ.
ಅಪ್ಪು ನೇತ್ರದಾನದಿಂದ ಸ್ಫೂರ್ತಿ ಪಡೆದ ಫ್ಯಾನ್ಸ್
ನೇತ್ರದಾನಕ್ಕೆ ಸಾವಿರಾರು ಜನರಿಂದ ನೋಂದಣಿ
ಅಪ್ಪು ನಿಧನದಿಂದ ಇಡೀ ರಾಜ್ಯದಲ್ಲಿಯೇ ಕಳೆದ 11 ದಿನದಿಂದ ಸೂತಕದ ಛಾಯೆ ಆವರಿಸಿದೆ. ಇಂದಿಗೂ ಅಪ್ಪು ನಮ್ಮ ಜೊತೆಗಿಲ್ಲ ಅನ್ನೋದನ್ನು ನಂಬಲಾಗುತ್ತಿಲ್ಲ. ಅಭಿಮಾನಿಗಳ ಕೆನ್ನೆಯ ಮೇಲೆ ನೀರಿನ ಹನಿಗಳು ಜಾರುತ್ತಲೇ ಇವೆ. ಈ ನಡುವೆ ಅಪ್ಪು ನಿಧನದ ಬಳಿಕವೂ ನಾಲ್ವರಿಗೆ ಬೆಳಕು ನೀಡಿದ್ದು ಅಭಿಮಾನಿಗಳಲ್ಲಿ ತಾವೂ ನೇತ್ರದಾನ ಮಾಡಬೇಕು ಅನ್ನೋ ಭಾವನೆ ಬಂದಿದೆ. ಹೀಗಾಗಿ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ನೇತ್ರದಾನ ಶೇ.30 ರಷ್ಟು ಹೆಚ್ಚಳ
ನೇತ್ರದಾನಕ್ಕೆ ಮುಂದೆ ಬರ್ತಿದ್ದಾರೆ ಯುವಕರು
ಮರಣದ ನಂತರ ಪಾರ್ಥಿವ ಶರೀರದ ಜೊತೆ ವ್ಯಕ್ತಿಯ ಕಣ್ಣುಗಳು ಮಣ್ಣಾಗುತ್ತವೆ. ಆದ್ರೆ, ಅದೇ ಕಣ್ಣುಗಳನ್ನು ದಾನ ಮಾಡಿದ್ರೆ ಅಂಧರಿಗೆ ಬೆಳಕಾಗುತ್ತೆ. ಇದನ್ನು ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರಲ್ಲಿ ಇನ್ನೂ ಅರಿವು ಬಂದಿಲ್ಲ. ಹೀಗಾಗಿ ಅಗತ್ಯಕ್ಕೆ ಬೇಕಾದಷ್ಟು ನೇತ್ರದಾನ ಆಗುತ್ತಿಲ್ಲ. ಎಲ್ಲಾ ಅಂಧರಿಗೂ ಬೆಳಕು ನೀಡಲು ಸಾಧ್ಯವಾಗುತ್ತಿಲ್ಲ. ಆದ್ರೆ, ಕಳೆದ ಒಂದೇ ವಾರದಲ್ಲಿ ರಾಜ್ಯದಲ್ಲಿ ಶೇಕಡಾ 30 ರಷ್ಟು ಜನ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿಯೂ ಹೆಚ್ಚಿನದಾಗಿ ಯುವಕರೇ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅಪ್ಪು. ಹೌದು ಅಪ್ಪು ನೇತ್ರದಾನ ರಾಜ್ಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.
ಬಳ್ಳಾರಿಯಲ್ಲಿ 1180 ಮಂದಿಯಿಂದ ನೇತ್ರದಾನ
ನೇತ್ರದಾನ ಮಾಡಿ ಅಂತ ಅಪ್ಪು ಜಾಗೃತಿ ಮೂಡಿಸಿದ್ರು. ತಮ್ಮ ನಿಧನದ ಬಳಿಕ ಅಪ್ಪು ಎರಡೂ ನೇತ್ರವನ್ನು ದಾನ ಮಾಡಿ ನಾಲ್ವರಿಗೆ ಬೆಳಕು ನೀಡಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ಬಳ್ಳಾರಿಯಲ್ಲಿ ಅಪ್ಪು ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ನಿಧನದ ಬಳಿಕ ಇದುವರೆಗೆ 1180 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ನಿಧನ ಹೊಂದಿದ ಇಬ್ಬರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು, ಅವುಗಳನ್ನು ಅಂಧರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಅಳವಡಿಸಲಾಗಿದೆ.
ಹುಬ್ಬಳ್ಳಿಯಲ್ಲಿ ದಾಖಲೆಯ ನೇತ್ರದಾನ ನೋಂದಣಿ
ಅಪ್ಪು ಅವರಂತೆ ಅಭಿಮಾನಿಗಳಿಂದ ನೇತ್ರದಾನ
ಅಪ್ಪು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿಯೂ ಇದ್ದಾರೆ. ಅಪ್ಪು ಚಿತ್ರ ಬಿಡುಗಡೆ ಅಂದ್ರೆ ರಾತ್ರಿಯೇ ಸಿನಿಮಾ ಥಿಯೇಟರ್‌ಗೆ ಬಂದು ಕಾಯ್ತಾ ಇದ್ರು. ಕುಟುಂಬ ಸಮೇತರಾಗಿ ಬಂದು ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ರು. ಇನ್ನು ಅಪ್ಪು ಚಿತ್ರದಲ್ಲಿ ಹೇಗೆ ಡ್ಯಾನ್ಸ್ ಮಾಡ್ತಾರೋ ಅದೇ ರೀತಿ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ರು. ಅಪ್ಪು ಸಭೆ ಸಮಾರಂಭದಲ್ಲಿ ಏನು ಹೇಳ್ತಾರೋ ಅದನ್ನು ಅಭಿಮಾನಿಗಳು ಪಾಲನೆ ಮಾಡುತ್ತಿದ್ರು. ಇದೀಗ ಅಪ್ಪು ಕಳೆದುಕೊಂಡ ದುಃಖದಲ್ಲಿರೋ ಅಭಿಮಾನಿಗಳು ನೇತ್ರದಾನಕ್ಕೆ ಮುಂದೆ ಬರ್ತಾ ಇದ್ದಾರೆ. ಹುಬ್ಬಳ್ಳಿಯ ಎಂ.ಎನ್ ಜೋಶಿ ಆಸ್ಪತ್ರೆಯಲ್ಲಿ ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ನೋಂದಣಿಯಾಗಿದೆ. ಈ ಆಸ್ಪತ್ರೆಗೆ ಪ್ರತಿ ನಿತ್ಯ 500ಕ್ಕೂ ಹೆಚ್ಚಿನ ಕರೆಗಳು ಬರ್ತಾ ಇವೆ. ಪ್ರತಿ ನಿತ್ಯ 30ಕ್ಕೂ ಹೆಚ್ಚಿನ ಜನ ಆಸ್ಪತ್ರೆಗೆ ಬಂದು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಲ್ಲಿ ನಿತ್ಯ ಸಾವಿರ ಮಂದಿ ನೋಂದಣಿ
ನಾಲ್ಕು ದಿನದಲ್ಲಿ 28 ಕಣ್ಣು ದಾನ
ನೇತ್ರದಾನ ಮಾಡಿ, ಅಂಧರಿಗೆ ಬೆಳಕು ನೀಡಿ ಅಂತ ಎಷ್ಟೇ ಜಾಗೃತಿ ಮೂಡಿಸುತ್ತಿದ್ರೂ ಜನ ಮಾತ್ರ ನೇತ್ರದಾನಕ್ಕೆ ಬರ್ತಾ ಇರಲಿಲ್ಲ. ಬೆಂಗಳೂರಲ್ಲಿ ವಾರಕ್ಕೆ 100 ಮಂದಿಯ ನೋಂದಣಿ ಕಾರ್ಯವೂ ನಡೆಯುತ್ತಿರಲಿಲ್ಲ. ಆದ್ರೆ, ಅಪ್ಪು ನೇತ್ರದಾನ ಮಾಡಿರೋದನ್ನು ಪ್ರೇರಣೆ ಪಡೆದು ಬೆಂಗಳೂರು ನಗರದಲ್ಲಿ ನಿತ್ಯ 500 ರಿಂದ 1 ಸಾವಿರ ಮಂದಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ದಿನ ನಿತ್ಯ ಈ ಸಂಖ್ಯೆ ಏರುತ್ತಲೇ ಇದೆ. ಕಳೆದ ನಾಲ್ಕು ದಿನದಲ್ಲಿ ಮೃತಪಟ್ಟ 14 ಮಂದಿಯ 28 ಕಣ್ಣುಗಳನ್ನು ದಾನವಾಗಿ ಪಡೆಯಲಾಗಿದೆ. ಅವುಗಳನ್ನು ಅಂಧರಿಗೆ ಅಳವಡಿಸುವ ಕೆಲಸವೂ ಆಗಿದೆ. ಈ ಹಿಂದೆ ತಿಂಗಳಿಗೆ ಒಂದು ಕಣ್ಣು ದಾನವಾಗಿ ಪಡೆಯುವುದು ಕಷ್ಟ ಇತ್ತು ಅಂತ ಸ್ವತಃ ವೈದ್ಯರೇ ತಿಳಿಸಿದ್ದಾರೆ.
ಒಂದೇ ಗ್ರಾಮದಲ್ಲಿ 60 ಮಂದಿಯಿಂದ ನೇತ್ರ ದಾನ
ಮಾದರಿಯಾದ ದಾವಣಗೆರೆಯ ಚಟ್ಟೋಬನಹಳ್ಳಿ
ಅಪ್ಪು ನೇತ್ರದಾನ ಮಾಡಿರೋದು ಅಭಿಮಾನಿಗಳಲ್ಲಿ ಸ್ಫೂರ್ತಿಯಾಗಿದೆ. ಹೀಗಾಗಿ ಪ್ರತಿ ಹಳ್ಳಿಯಲ್ಲಿಯೂ ಅಭಿಮಾನಿಗಳು ಶೋಕದಲ್ಲಿಯೇ ನೇತ್ರದಾನಕ್ಕೆ ಮುಂದೆ ಬರ್ತಾ ಇದ್ದಾರೆ. ಅದೇ ರೀತಿ ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡ ಜನ ಇಡೀ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಇದು 110 ಮನೆಗಳಿರೋ ಚಿಕ್ಕ ಗ್ರಾಮ. ಇಲ್ಲಿ ಇರುವುದು ಬಂಜಾರ ಸಮುದಾಯವರು. ಅಪ್ಪುಗೆ ಅಪಾರ ಅಭಿಮಾನಿಗಳಾಗಿರೋ ಇಲ್ಲಿಯ ಯುವಕರು ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡು ಗೌರವ ಸಲ್ಲಿಸಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಯುವಕರು ನೋಂದಣಿ ಮಾಡಿಸಿಕೊಂಡು, ನಾವು ಅಪ್ಪುಗೆ ಈ ಮೂಲಕ ಗೌರವ ಸಲ್ಲಿಸುತ್ತೇವೆ ಅಂತ ದುಃಖದಲ್ಲಿಯೇ ಹೇಳಿದ್ದಾರೆ.
ಅಪ್ಪು ತೋರಿಸಿದ ದಾರಿಯಲ್ಲೇ ನಡೆಯೋಣ
ನೇತ್ರದಾನಕ್ಕೆ ‘ನ್ಯೂಸ್ ಫಸ್ಟ್’ನಿಂದಲೂ ಅಭಿಯಾನ
ಅಪ್ಪು ನಿಧನ ನಮ್ಮೆಲ್ಲರಲ್ಲಿ ಬೇಸರ ತರಿಸಿದೆ. ಇಡೀ ರಾಜ್ಯದಲ್ಲಿಯೇ ಒಂದು ರೀತಿಯಲ್ಲಿ ಸೂತಕದ ಛಾಯೆ ಮೂಡಿಸಿದೆ. ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದು ವಿಧಿಯಾಟ. ಆದ್ರೆ, ಅವರು ತೋರಿಸಿದ ದಾರಿ ಮಾತ್ರ ತಲಾತಲಾಂತರಕ್ಕೂ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದು. ತುಂಬಾ ವಿನಯವಂತನಾಗಿರೋ ಅಪ್ಪು ಕೊನೆಯಲ್ಲಿ ನೇತ್ರದಾನ ಮಾಡಿ ನಾಲ್ವರು ಅಂಧರಿಗೆ ಬೆಳಕು ನೀಡಿದ್ದಾರೆ. ಅದೇ ರೀತಿಯಲ್ಲಿ ನಾವೆಲ್ಲ ಅಪ್ಪು ತೋರಿಸಿದ ಮಾರ್ಗದಲ್ಲಿ ನಡೆಯಬೇಕು. ಎಲ್ಲರೂ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಮೂಲಕ ಅಪ್ಪುಗೆ ಗೌರವ ಸಲ್ಲಿಸಬೇಕು. ಇದನ್ನು ನ್ಯೂಸ್ ಫಸ್ಟ್ ನಿಂದಲೂ ಅಭಿಯಾನ ಮಾಡುತ್ತಿದ್ದೇವೆ.
ನೇತ್ರದಾನದಿಂದ ಅಂಧಕಾರದಲ್ಲಿದ್ದವರಿಗೆ ಬೆಳಕು
ಅದೆಷ್ಟೋ ಜನ ಕಣ್ಣನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ಸಾಗಿಸುತ್ತಾ ಇರುತ್ತಾರೆ. ಜಗತ್ತನ್ನು ನೋಡುವ ಆಸೆ ಅವರಿಗೆ ಇದ್ರೂ ನೋಡಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಮರಣ ಹೊಂದಿದವರ ಕಣ್ಣುಗಳು ಮಣ್ಣಲ್ಲಿ ಮಣ್ಣಾಗುತ್ತಿವೆ. ಕಣ್ಣನ್ನು ಮಣ್ಣಾಗಲು ಬಿಡದೇ ಅದನ್ನು ದಾನ ಮಾಡಿದ್ರೆ ಅಂಧಕಾರದಲ್ಲಿದ್ದವರಿಗೆ ಬೆಳಕು ನೀಡಲು ಸಾಧ್ಯ. ನಮ್ಮ ಪ್ರೀತಿಯ ಅಪ್ಪು ತೋರಿಸಿರುವ ಮಾರ್ಗ ಇದನ್ನೇ ಅಲ್ವಾ?
ಅಪ್ಪು ಹಲವಾರು ಸಾಮಾಜಿಕ ಕಾರ್ಯದ ಮೂಲಕ ಕನ್ನಡಿಗರ ಮನಸ್ಸಲ್ಲಿ ಭದ್ರವಾಗಿ ನೆಲೆ ನಿಂತಿದ್ದಾರೆ. ಅವರು ತೋರಿದ ಮಾರ್ಗದಂತೆ ನೇತ್ರ ದಾನಕ್ಕೆ ನೋಂದಣಿ ಮಾಡಿಕೊಳ್ಳಿ, ಆ ಮೂಲಕ ಅವರಿಗೆ ಗೌರವ ಸಲ್ಲಿಸೋಣ. ಇದು ನ್ಯೂಸ್ ಫಸ್ಟ್ ಕಳಕಳಿ ಕೂಡ ಹೌದು.