ಉಡುಪಿ: ಅದು ಸದ್ದೇ ಮಾಡದ ಸ್ಪೆಷಲ್ ಬೈಕ್. ಹೊಗೆಯಂತೂ ಉಗುಳೋದೇ ಇಲ್ಲ. ಪೆಟ್ರೋಲ್ ಅಂತೂ ಬೇಡವೇ ಬೇಡ. ಕೇವಲ ಸೌರಶಕ್ತಿಯಿಂದ ಓಡುವ ವಿನೂತನ ಬೈಕ್ ಕಳೆದೆರಡು ತಿಂಗಳಿನಿಂದ ಸದ್ದು ಮಾಡದೇ ಕುದುರೆ ಮುಖದ ದಟ್ಟ ಕಾನನದ ಮಧ್ಯೆ ಓಡಾಡುತ್ತಿದೆ. ಕಲ್ಲು ಮುಳ್ಳಿನ ದಾರಿಯಲ್ಲಿ, ಉಬ್ಬು-ತಗ್ಗು ರಸ್ತೆಗಳ ನಡುವೆ ಸರಾಗವಾಗಿ ಸಂಚರಿಸಲಿದೆ.
ಕುದುರೆಮುಖ ಪಶ್ಚಿಮ ಘಟ್ಟದ ದಟ್ಟ ಕಾನನ. ಗಿರಿ ಶಿಖರಗಳಿಂದ ಕೂಡಿದ ಸುಂದರ ಪ್ರಕೃತಿ. ಈ ಕಾಡಿನ ಕಲ್ಲು ಮುಳ್ಳಿನ ಮಧ್ಯೆ ನಡೆಯೋದೆ ಕಷ್ಟ, ಹೀಗಿದ್ರೂ, ಈ ಕಾಡಿನಲ್ಲಿ ಸ್ಪೆಷಲ್ ಬೈಕೊಂದು ಕಳೆದ ಎರಡು ತಿಂಗಳಿನಿಂದ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ. ಹೌದು…ಇದು ಸುರತ್ಕಲ್ನ ಎನ್ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ತಂಡ ರೆಡಿಮಾಡಿದ ಸೋಲಾರ್ ಬೈಕ್. ಈ ಬೈಕ್ ಹೆಸರು ‘ವಿಧ್ ಯುಗ್ 4.0 ಇ’.. ಹಾಗಾದ್ರೆ ಈ ಬೈಕ್ನ ವಿಶೇಷತೆಯೇನು ಅಂತ ನೋಡೋದಾದ್ರೆ?
‘ವಿಧ್ ಯುಗ್’ ಬೈಕ್ನ ವಿಶೇಷತೆ
- ಬೈಕ್ಗೆ ಪೆಟ್ರೋಲ್ ಹಾಗೂ ಡೀಸೆಲ್ ಅಗತ್ಯವಿಲ್ಲ
- ಸೋಲಾರ್ ಶಕ್ತಿಯಿಂದ ಓಡಾಡುತ್ತದೆ ಈ ಬೈಕ್
- ‘ವಿಧ್ ಯುಗ್’ ಬೈಕ್ಗೆ ಸ್ಕ್ರೋಕ್ ಇಂಜಿನ್ ಇಲ್ಲ
- ಕೆಟ್ಟ ಮಾಲಿನ್ಯವೂ ಇಲ್ಲ, ಹೊಗೆಯನ್ನೂ ಉಗುಳಲ್ಲ
- ಗಂಟೆ ಜಾರ್ಜ್ ಮಾಡಿದರೆ 70 ಕಿ.ಮೀ ಮೈಲೇಜ್
- 80 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು
ಈ ವಿನೂತನ ಬೈಕ್ಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಯಾಕಂದ್ರೆ ಇದು ಸೋಲಾರ್ ಶಕ್ತಿಯಿಂದ ಓಡಾಡುತ್ತದೆ. ಈ ಬೈಕ್ಗೆ ಸ್ಕ್ರೋಕ್ ಇಂಜಿನ್ ಇಲ್ಲ. ಹೀಗಾಗಿ ಕಾಡು ಪ್ರಾಣಿಗಳಿಗೆ ಕಿರಿಕಿರಿಯಾಗುವ ಸದ್ದು ಮಾಡುವುದಿಲ್ಲ. ಅಲ್ಲದೆ ಕೆಟ್ಟ ಮಾಲಿನ್ಯವೂ ಇಲ್ಲ, ಹೊಗೆಯನ್ನೂ ಉಗುಳಲ್ಲ. ಈ ಬೈಕ್ಗೆ 3 ಗಂಟೆ ಜಾರ್ಜ್ ಮಾಡಿದ್ರೆ 70 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಅಲ್ಲದೆ 80 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಇನ್ನೂ ಇದನ್ನು ತಯಾರಿಸಲು 1.50 ಲಕ್ಷ ಖರ್ಚಾಗಿದೆಯಂತೆ. ಈ ಬೈಕ್ನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಳಸುತ್ತಿದ್ದಾರೆ. ಕುದುರೆಮುಖ ಅಭಯಾರಣ್ಯದ ಕಲ್ಲು ಮುಳ್ಳಿನ ದಾರಿಯಲ್ಲಿ, ಉಬ್ಬು-ತಗ್ಗು ರಸ್ತೆಗಳ ನಡುವೆ ಈ ಬೈಕ್ ಸರಾಗವಾಗಿ ಸಂಚರಿಸಲಿದೆ.
ಬ್ಯಾಟರಿ ಚಾರ್ಜ್ ಮಾಡೋಕೆ ಮೂರು ಚಾರ್ಜರ್ ಯುನಿಟ್ ಇದೆ. ಮೊಬೈಲ್, ವಾಕಿಟಾಕಿ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿದೆ. ಅಲ್ಲದೆ ದಾಖಲೆ ಪತ್ರ ಇಡೋದಕ್ಕೆ ವಾಟರ್ ಪ್ರೂಫ್ ಬಾಕ್ಸ್ ಕೂಡಯಿದೆ. ಬೈಕ್ ಹಿಂಬದಿಯ ಎರಡು ಕಡೆಗಳಲ್ಲಿ ನೀರಿನ ಟ್ಯಾಂಕ್ಗಳನ್ನು ಇಡಬಹುದಾಗಿದೆ. ಅಗತ್ಯವಿದ್ದಾಗ ಹೆಡ್ ಲೈಟ್ ಅನ್ನು, ಟಾರ್ಚ್ ಲೈಟ್ ನಂತೆ ಬಳಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ.
ಅರಣ್ಯ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಬೈಕ್ ಓಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟನಲ್ಲಿ ಕರ್ಕಶ ಶಬ್ದ ಮಾಡಿಕೊಂಡು, ಕಾಡು ಪ್ರಾಣಿಗಳಿಗೆ ಕಿರಿಕಿರಿಯಾಗುವ ಮಾಡುತ್ತ ಓಡಾಡುವ ಬೈಕ್ ಮಧ್ಯೆ ‘ವಿಧ್ ಯುಗ್’ ಬೈಕ್ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೈಕ್ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒದಗಿಸುವ ಬಗ್ಗೆ ಯೋಚನೆ ನಡೆಯುತ್ತಿದೆ.
ವಿಶೇಷ ವರದಿ: ದಿನೇಶ್, ನ್ಯೂಸ್ ಫಸ್ಟ್, ಉಡುಪಿ