ಬೆಂಗಳೂರು: ‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ನಡೆದ ‘ರಾಣಾ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಸಂಯುಕ್ತ ಹೆಗ್ಡೆ ಮಾಧ್ಯಮಗಳೊಂದಿಗೆ ಮಾತನಾಡಿದರು. ನಂದಕಿಶೋರ್ ನಿರ್ದೇಶನದ ‘ರಾಣಾ’ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಗೆ ಸಂಯುಕ್ತ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಕನ್ನಡ ಚಿತ್ರಗಳ ಯಾಕೆಯಲ್ಲಿ ಸೆಲೆಕ್ಟಿವ್ ಆಗಿದ್ದೀರಿ ಎಂಬ ಪ್ರಶ್ನೆಗೆ ಸಂಯುಕ್ತ ಹೆಗ್ಡೆ ನಗುತ್ತಲೇ ಉತ್ತರಿಸಿ, ಅಸಮಾಧಾನ ಹೊರ ಹಾಕಿದರು.
ಸದ್ಯಕ್ಕೆ ನಾನು ಓದ್ತಾ ಇದೀನಿ, ನನ್ನ ತಂದೆ-ತಾಯಿಗೂ ಅನಾರೋಗ್ಯ ಇತ್ತು. ನಾನೇನೂ ಸೆಲೆಕ್ಟಿವ್ ಆಗಿಲ್ಲ. ಸದ್ಯಕ್ಕೆ 3 ತಮಿಳು ಚಿತ್ರಗಳಲ್ಲಿ ನಟಿಸಿದ್ದು, ಈ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಮಾಧ್ಯಮಗಳು ನನ್ನನ್ನು ಪ್ರಶ್ನೆ ಮಾಡುವಂತೆ ಬೇರೆ ಭಾಷೆಯ ನಟಿಯರನ್ನ ಹಾಕಿಕೊಳ್ಳೋ ನಿರ್ಮಾಪಕರನ್ನ ಪ್ರಶ್ನೆ ಮಾಡಬೇಕು. ಕನ್ನಡ ಚಿತ್ರಗಳಲ್ಲಿ ನಮ್ಮನ್ನ ಯಾಕೆ ಹಾಕಿಕೊಳಲ್ಲ? ಇದರಲ್ಲಿ ನಮ್ಮ ಕೈಯಲ್ಲಿ ಏನು ಇರೋದಿಲ್ಲ. ನೀವು ನಿರ್ದೇಶಕರನ್ನ, ನಿರ್ಮಾಪಕರನ್ನ ಕೇಳಿ. ಕನ್ನಡದಲ್ಲಿ ಅವಕಾಶಗಳು ಕಡಿಮೆ ಇದೆ. ಆದರೆ ಅವಕಾಶ ಸಿಕ್ಕರೆ ಖಂಡಿತ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀನಿ. ಕನ್ನಡ ನಮ್ಮ ಭಾಷೆ ಅದನ್ನು ಬಿಟ್ಟು ಹೊರಗಡೆ ಹೋಗೋ ಪ್ರಶ್ನೆ ಬರೋದಿಲ್ಲ ಎಂದರು.