ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್(72) ನಿಧನ

ಬೆಂಗಳೂರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟ ಸತ್ಯಜಿತ್ ಇಂದು ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡ್ತಿದ್ದ ಅವರು, ಅಸಂಖ್ಯಾತ ಅಭಿಮಾನಿಗಳನ್ನ ಅಗಲಿದ್ದಾರೆ. ಖಡಕ್ ವಿಲನ್ ಪಾತ್ರಧಾರಿಯಾಗಿ ಮಿಂಚುತ್ತಿದ್ದ ಮೆಚ್ಚಿನ ನಟನ ನಿಧನದಿಂದ ಸ್ಯಾಂಡಲ್​ವುಡ್ ಶೋಕಸಾಗರದಲ್ಲಿ ಮುಳುಗಿದೆ.

ಸತ್ಯಜಿತ್… ಕನ್ನಡ ಚಿತ್ರರಂಗ ಎಂದಿಗೂ ಮರೆಯಲಾರದಂತಹ ಅದ್ಭುತ ನಟ. ತಮ್ಮ ಮನೋಜ್ಞ ಅಭಿನಯದಿಂದಲೇ ಅಸಂಖ್ಯಾತ ಅಭಿಮಾನಿಗಳ ಸಾಗರವನ್ನೇ ಹುಟ್ಟುಹಾಕಿದ್ದರು. ಆದ್ರೆ ಇಂದು 72ರ ವಯಸ್ಸಿನ ಸತ್ಯಜಿತ್ ಬಾಳ ಪಯಣ ಮುಗಿಸಿದ್ದಾರೆ.

ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸತ್ಯಜಿತ್, ಗ್ಯಾಂಗ್ರಿನ್ ಕಾರಣ ಒಂದು ಕಾಲನ್ನು ಕಳೆದುಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸತ್ಯಜಿತ್, ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 2 ಗಂಟೆಗೆ ವಿಧಿವಶರಾಗಿದ್ದಾರೆ.

ತೆರೆಮೇಲೆ ಖಡಕ್ ವಿಲನ್ ಪಾತ್ರದಲ್ಲಿ ಅಬ್ಬರಿದ್ದ ಸತ್ಯಜಿತ್ ಬಹುಬೇಡಿಕೆಯ ಪೋಷಕ ನಟನಾಗಿಯೂ ಬಣ್ಣಹಚ್ಚಿ ಸೈ ಎನಿಸಿಕೊಂಡು ಅಪಾರ ಜನಮನ್ನಣೆ ಗಳಿಸಿದ್ದರು. ಪುಟ್ನಂಜ, ಆಪ್ತಮಿತ್ರ, ಅಪ್ಪು, ಅಭಿ, ಯುದ್ಧಕಾಂಡ, ಪೊಲೀಸ್ ಸ್ಟೋರಿ, ಮಾಣಿಕ್ಯ, ಇಂದ್ರಜಿತ್, ಯುದ್ಧಕಾಂಡ ಸೇರಿದಂತೆ 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಆದ್ರೆ ಇಂದು ಸತ್ಯಜಿತ್ ಮರಳಿಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಬೆಳಗ್ಗೆ 8 ಗಂಟೆಯಿಂದ ಸತ್ಯಜಿತ್ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ 3 ಗಂಟೆಯ ನಂತರ ಹೆಗೆಡೆ ನಗರದ ಖಬರ್ ಸ್ಥಾನ್​ದಲ್ಲಿ ಸತ್ಯಜಿತ್​ರ ಅಂತ್ಯ ಸಂಸ್ಕಾರ ನಡೆಯಲಿದೆ.

ಒಟ್ನಲ್ಲಿ ಹಿರಿಯ ನಟನ ಅಗಲಿಕೆಯಿಂದ ಸ್ಯಾಂಡಲ್​​ವುಡ್ ಶೋಕ ಸಾಗರದಲ್ಲಿ ಮುಳುಗಿದ್ದು, ಕಂಬನಿ ಮಿಡಿದಿದೆ. ತನ್ನದೇ ಆದ ವಿಶಿಷ್ಠ ಶೈಲಿಯ ನಟನೆಯಿಂದ ಕೋಟ್ಯಾಂತರ ಕನ್ನಡಿಗರ ಮನಗೆದ್ದಿದ್ದ ಸತ್ಯಜಿತ್ ಇನ್ನು ಬರೀ ನೆನಪು ಮಾತ್ರ.

News First Live Kannada

Leave a comment

Your email address will not be published. Required fields are marked *