ಮೈಸೂರು: ಕಪಿಲಾ ನದಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮುಡಿಕಟ್ಟೆ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ 17 ವರ್ಷದ ಅಪ್ರಾಪ್ತೆ ಹಾಗೂ ಸೋಮವಾರಪೇಟೆ ಮೂಲದ ಅಭಿ (19) ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಮನೆಯವರಿಗೆ ವಿಷಯ ಗೊತ್ತಾಗಿ ಇಬ್ಬರನ್ನ ದೂರ ಮಾಡಿದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಯುವತಿ ಚಾಮರಾಜನಗರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಯುವಕ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಇಬ್ಬರಿಗೆ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ. ಈ ವಿಚಾರ ಬಾಲಕಿ ಪೋಷಕರಿಗೆ ವಿಚಾರ ತಿಳಿದು ವಿರೋಧ ವ್ಯಕ್ತಪಡಿಸಿ ಆತನಿಂದ ದೂರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಇಬ್ಬರೂ ಮುಡಿಕಟ್ಟೆ ಬಳಿ ಬಂದು ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಯತ್ನ ಮಾಡಿದ್ದು, ಸ್ಥಳದಲ್ಲಿದ್ದ ತೆಪ್ಪ ನಡೆಸುವ ಅಂಬಿಗರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.