ಬೆಂಗಳೂರು: ದೇಶದಲ್ಲಿ ಇದೀಗ ಕೊರೊನಾ ಸೋಂಕಿನ ಆತಂಕ ಒಂದೆಡೆಯಾದ್ರೆ ಸೋಂಕಿನಿಂದ ಗುಣಮುಖರಾದವ್ರಲ್ಲಿ ಕಂಡುಬರ್ತಿರೋ ಬ್ಲ್ಯಾಕ್ ಫಂಗಸ್​ನ ಆತಂಕ ಮತ್ತೊಂದೆಡೆಯಾಗಿದೆ. ಈ ಬ್ಲ್ಯಾಕ್​ ಫಂಗಸ್​ ಸೋಂಕಿನ ಕುರಿತು ಇಎನ್​ಟಿ ಸರ್ಜನ್ ಡಾ. ದೀಪಕ್ ಹಳದಿಪುರ್ ನ್ಯೂಸ್​ಫಸ್ಟ್​ ಜೊತೆಗೆ ಸವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಹಿಂದೆಯೂ ಇತ್ತು ಬ್ಲ್ಯಾಕ್ ಫಂಗಸ್ ಸೋಂಕು
ಮೊದಲನೆ ಅಲೆಯಲ್ಲಿ ನಾವು ಈ ಬ್ಲ್ಯಾಕ್ ಫಂಗಸ್ ಪ್ರಕರಣಗಳನ್ನು ನೋಡಿಲ್ಲ. ಇದನ್ನ ನೋಡ್ತಿರೋದು ಎರಡನೇ ಅಲೆಯಲ್ಲೇ. ಕಳೆದ 21 ದಿನಗಳಿಂದ ನಾನು ಈ ಕಾಯಿಲೆಯನ್ನ ನೋಡ್ತಿದ್ದೇನೆ. ಬ್ಲ್ಯಾಕ್ ಫಂಗಸ್ ಈ ಹಿಂದಿನಿಂದಲೂ ಇದೆ. ಈ ಹಿಂದೆ ವರ್ಷಕ್ಕೆ ಒಂದೆರಡು ಪ್ರಕರಣಗಳು ಕಂಡುಬರುತ್ತಿದ್ದವು. ಈಗ ಕೋವಿಡ್ ಹೆಚ್ಚಾದಮೇಲೆ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. 10ನೇ ದಿನದಿಂದ ಒಂದೂವರೆ ತಿಂಗಳೊಳಗೆ ಯಾವ ಸಮಯದಲ್ಲೂ ಈ ಫಂಗಸ್ ಕಂಡುಬರಬಹುದು. ಇಂದು ನಾನು ಎರಡು ಕೇಸ್​ ನೋಡಿದ್ದೇನೆ. ಅವರು ಯಾವುದೇ ಚಿಕಿತ್ಸೆ ತೆಗೆದುಕೊಂಡಿಲ್ಲ. ಮನೆಯಲ್ಲಿ ಇದ್ದರೂ ಬ್ಲ್ಯಾಕ್ ಫಂಗಸ್ ಕಂಡುಬಂದಿದೆ. ಇವತ್ತು ನೋಡಿದ ಕೇಸ್​ಗಳು ಮನೆಯಲ್ಲಿದ್ರೂ ಸಹ ಬಂದಿದೆ ಎಂದು ಡಾ. ದೀಪಕ್ ಹಳದಿಪುರ್ ಹೇಳಿದ್ದಾರೆ.

ಪ್ರಾರಂಭದಲ್ಲೇ ಚಿಕಿತ್ಸೆ ತೆಗೆದುಕೊಂಡ್ರೆ ಪರಿಣಾಮ ಕಡಿಮೆ
ನಾನು ಒಟ್ಟು 59 ಬ್ಲ್ಯಾಕ್ ಫಂಗಸ್ ಕೇಸ್ ನೋಡಿದ್ದೇನೆ, 43 ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. ಬೇಗ ಇದನ್ನ ಮಾಡಿಸ್ಕೊಂಡ್ರೆ 100ರಲ್ಲಿ 40 ಕೇಸ್​ಗಳು ಸಣ್ಣ ಸರ್ಜರಿಯಲ್ಲಿ ಆಗುತ್ತೆ. ಉಳಿದವ್ರಿಗೆ ಬಾಯಲ್ಲಿ ಪ್ಯಾಲಟ್ ತೆಗೆಯಬೇಕಾಗ್ತದೆ. 20 ಪರ್ಸೆಂಟ್ ಜನರಲ್ಲಿ 1 ಕಣ್ಣನ್ನು ತೆಗೆಯಬೇಕಾಗುತ್ತದೆ. ಬೇಗ ಜನರು ಆಸ್ಪತ್ರೆಗೆ ಬಂದ್ರೆ ಇದರಿಂದ ದೊಡ್ಡ ಮಟ್ಟದ ಸಮಸ್ಯೆಗಳು ಆಗೋದಿಲ್ಲ. ಒಂದು ಒಂದೂವರೆ ತಿಂಗಳಲ್ಲಿ ನಾವು ಇದನ್ನ ಗೆಲ್ತೀವಿ ಎಂದು ದೀಪಕ್ ತಿಳಿಸಿದ್ರು.

ಚಿಕಿತ್ಸೆಯ ಖರ್ಚು ಭಾರೀ ದುಬಾರಿ..
ಇದಕ್ಕೆ ನಾವು ಆ್ಯಂಫೊಸೆರಟಿನ್ ಬಿ ಅನ್ನೋ ಚುಚ್ಚುಮದ್ದು ಬಳಸ್ತೇವೆ. ಪ್ರತಿದಿನಕ್ಕೆ ಏನಿಲ್ಲ ಅಂದ್ರೂ ₹35 ರಿಂದ ₹54 ಸಾವಿರ ಒಂದೇ ಚುಚ್ಚುಮದ್ದಿನ ಖರ್ಚು ಬರುತ್ತೆ. 10 ರಿಂದ 14 ದಿವಸ ಇದನ್ನ ಕೊಡಬೇಕಾಗುತ್ತೆ. ಒಬ್ಬ ರೋಗಿಗೆ ಈ ಚುಚ್ಚುಮದ್ದಿಗೆ ₹5 ರಿಂದ ₹7 ಲಕ್ಷ  ಖರ್ಚು ತಗುಲುತ್ತೆ. ಇವರು ಆಗಲೇ 1-1.5 ಲಕ್ಷ ರೂಪಾಯಿಯನ್ನ ಕೋವಿಡ್ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಜನರು ಸರ್ಕಾರಗಳಿಗೆ ಒತ್ತಡ ಹಾಕಿ ಔಷಧಿಯ ಬೆಲೆಯನ್ನ ಕಡಿಮೆ ಮಾಡುವಂತೆ ಕೇಳಿ. ವಿಜ್ಞಾನಿಗಳು ಇದಕ್ಕೂ ಬೇಗ ಪರಿಹಾರ ಕಂಡುಹಿಡಿಯುತ್ತಾರೆ ಅನ್ನೋ ನಿರೀಕ್ಷೆಯಿದೆ ಎಂದಿದ್ದಾರೆ.

ಬ್ಲ್ಯಾಕ್​ ಫಂಗಸ್​ ಯಾರಿಗೆ ಹೆಚ್ಚಾಗಿ ಬರುತ್ತೆ..? ಗುಣಲಕ್ಷಣಗಳೆನು..?
ಇದ್ರಲ್ಲಿ ಮುಖ್ಯಲಕ್ಷಣ ಅಂದ್ರೆ ಕೊರೊನಾದಿಂದ ಚೇತರಿಕೊಳ್ತಿರೋ ರೋಗಿಗೆ ಮುಖದ ಒಂದು ಭಾಗದಲ್ಲಿ ಭಯಂಕರ ನೋವು ಕಾಣಿಸಿಕೊಳ್ಳುತ್ತೆ. ನಿದ್ದೆಯೂ ಬಾರದಂಥ ನೋವು ಕಾಣಿಸಿಕೊಳ್ಳುತ್ತೆ. ಮುಖದ ಉರಿಯೂತ, ಕಣ್ಣಿನ ಉರಿಯೂತ, ಕಣ್ಣಿನ ಗುಡ್ಡೆ ಮುಂದು ಬರೋದು.. ಇಂಥ ಲಕ್ಷಣಗಳನ್ನ ನೋಡಿದ್ದೇವೆ. ಮಧುಮೇಹ ಇಲ್ಲದ ರೋಗಿಗಳಲ್ಲಿ ಅದೃಷ್ಟವಶಾತ್ ಇಲ್ಲಿವರೆಗೆ ಈ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಯಾರೂ ಹೆದರೋ ಅವಶ್ಯಕತೆ ಇಲ್ಲ. ಇದಿನ್ನೂ ಕಮ್ಮಿ ಪ್ರಮಾಣದಲ್ಲಿದೆ. ಜನಸಂಖ್ಯೆ ತುಂಬಾ ದೊಡ್ಡದಿರೋದ್ರಿಂದ ಎರಡನೇ ಅಲೆಯಲ್ಲಿ ಎಲ್ಲರೂ ಸೋಂಕಿಗೆ ತುತ್ತಾಗಿರೋದ್ರಿಂದ ಇದು ತುಂಬಾ ಜಾಸ್ತಿ ಆಗಿದೆ ಅನ್ನೋ ಭಯ ಜನರಲ್ಲಿ ಹುಟ್ಟಿಕೊಳ್ಳುತ್ತೆ.

ಕೊರೊನಾ ಮಧ್ಯೆ ನಮಗೆ ಮಧುಮೇಹದ ನಿಯಂತ್ರಣದ ಬಗ್ಗೆ ಗಮನ ಬರ್ಲಿಲ್ಲ. ಈಗ ಮ್ಯೂಕರ್ ಮೈಕೋಸಿಸ್/ಕಪ್ಪು ಫಂಗಲ್ ಇನ್​ಫೆಕ್ಷನ್ ಬರ್ತಿರೋದು ಸುಮಾರು ವರ್ಷಗಳಿಂದ ಮಧುಮೇಹಕ್ಕೆ ಒಳಗಾಗಿರೋರಲ್ಲಿ. ಲ್ಯಾಬ್​ನಲ್ಲಿ ಸಕ್ಕರೆ ಅಂಶ ಚೆಕ್ ಮಾಡಿಸಿಕೊಳ್ಳಿ. ಸೋಂಕು ಮತ್ತು ಮಧುಮೇಹದ ತೀವ್ರತೆಗೆ ಚಿಕಿತ್ಸೆ ಮಾಡುವ ಮಧ್ಯೆ ಈ ಮ್ಯೂಕರ್ ಮೈಕೋಸಿಸ್ ಆಗ್ತಿದೆ. ಇದರ ಲಕ್ಷಣಗಳನ್ನ ತಿಳ್ಕೊಂಡು ನುರಿತ ವೈದ್ಯರ ಬಳಿ ಹೋದ್ರೆ ಇದಕ್ಕೆ ಸಾಕಷ್ಟು ಪರಿಹಾರವಿದೆ. ಇವತ್ತು ಬೆಳಿಗ್ಗೆ ನಾನು ಇಬ್ಬರು ರೋಗಿಗಳನ್ನ ನೋಡಿದೆ, ಅವರು ಮನೆಯಲ್ಲೇ ಚಿಕಿತ್ಸೆ ತಗೊಂಡಿದ್ದಾರೆ, ಆಮ್ಲಜನಕವನ್ನೂ ತೆಗೆದುಕೊಂಡಿಲ್ಲ. ಅವರಿಗೂ ಫಂಗಸ್ ಸೋಂಕು ಬಂದಿದೆ ಎಂದು ವೈದ್ಯ ದೀಪಕ್ ಮಾಹಿತಿ ನೀಡಿದ್ರು.

The post ಕಪ್ಪು ಫಂಗಸ್​ಗೆ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದರೆ ಪರಿಣಾಮ ಕಡಿಮೆ – ವೈದ್ಯರ ಕಿವಿಮಾತು appeared first on News First Kannada.

Source: newsfirstlive.com

Source link