ಕಮರ್ಷಿಯಲ್ ಕೋಲ್ ಬ್ಲಾಕ್ಸ್ ಹರಾಜಿನಿಂದ ಕಲ್ಲಿದ್ದಲು ಕೊರತೆ ನಿವಾರಣೆ: ಪ್ರಲ್ಹಾದ್ ಜೋಶಿ ಕಾರ್ಯ ಶ್ಲಾಘಿಸಿದ ನಿರ್ಮಲಾ ಸೀತಾರಾಮನ್ – Coal shortage to be tackled by auction of commercial coal blocks Nirmala Sitharaman lauds Pralhad Joshi’s work National news in kannada


ಕೇಂದ್ರ ಸರ್ಕಾರ ಇಂದು 6ನೇ ಹಂತದ ಕಲ್ಲಿದ್ದಲು ಹರಾಜು ಪ್ರಕ್ರಿಯೆ ಪ್ರಾರಂಭಿಸಿದ್ದು, 6ನೇ ಹಂತದ 133 ಬ್ಲಾಕ್ಸ್ ಹಾಗೂ 5 ನೇ ಹಂತದ ಸೆಕೆಂಡ್ ಅಟೆಮ್ಟ್ ನ 8 ಬ್ಲಾಕ್ಸ್ ಗಳನ್ನ ಖಾಸಗಿ ವಲಯಕ್ಕೆ ಹರಾಜಿಗಿಡಲಾಯಿತು.

ದೆಹಲಿ: ಕೇಂದ್ರ ಸರ್ಕಾರ ಇಂದು 6ನೇ ಹಂತದ ಕಲ್ಲಿದ್ದಲು ಹರಾಜು ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಾಲನೆ ನೀಡಿದರು. 6 ನೇ ಹಂತದ 133 ಬ್ಲಾಕ್ಸ್ ಹಾಗೂ 5 ನೇ ಹಂತದ ಸೆಕೆಂಡ್ ಅಟೆಮ್ಟ್ ನ 8 ಬ್ಲಾಕ್ಸ್​ಗಳನ್ನ ಖಾಸಗಿ ವಲಯಕ್ಕೆ ಹರಾಜಿಗಿಡಲಾಯಿತು. ಇಂದು ಒಟ್ಟು 67 ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್​ಗಳ ಹರಾಜಾಗಿವೆ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಇದೇ ವೇಳೆ ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರವನ್ನ ಖಾಸಗಿ ಕ್ಷೇತ್ರಕ್ಕೆ ಅನ್​ಲಾಕ್ ಮಾಡುವ ಈ ನಿರ್ಧಾರ ಒಂದು ಮೈಲಿಗಲ್ಲು ಎಂದು ಹೇಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಲ್ಹಾದ್ ಜೋಶಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್ ಹರಾಜು ಪ್ರಕ್ರಿಯೆ ವೇಗವಾಗಿ ನೆರವೇರಿಸುವಲ್ಲಿ ಪ್ರಲ್ಹಾದ್ ಜೋಶಿ ಅವರ ಕಾರ್ಯ ಶ್ಲಾಘನೀಯ. ಭಾರತ ಅತಿ ಹೆಚ್ಚು ಕಲ್ಲಿದ್ದಲು ಹೊಂದಿದ್ದರೂ ಹಿಂದಿನ ಸರ್ಕಾರಗಳ ನೀತಿಯಿಂದ ನಮ್ಮ ಸಾಮರ್ಥ್ಯಕ್ಕೆ ತಕ್ಕ ಕಲ್ಲಿದ್ದಲು ಉತ್ಪಾದನೆ ಆಗುತ್ತಿರಲಿಲ್ಲ. ಆದರೆ ಕಮರ್ಷಿಯಲ್ ಕಲ್ಲಿದ್ದಲು ಹರಾಜಿನ ಮೂಲಕ ಕೋಲ್ ಪ್ರೊಡಕ್ಷನ್ ಹೆಚ್ಚಿಸುವತ್ತ ಪ್ರಲ್ಹಾದ್ ಜೋಶಿ ಹೆಜ್ಜೆಯಿಟ್ಟಿದ್ದಾರೆ ಎಂದರು.

ಯುಪಿಎ-2 ಸರ್ಕಾರವಿದ್ದಾಗ ಸಿಎಜಿಆರ್​ನಲ್ಲಿ ಕಲ್ಲಿದ್ದಲು ಆಮದು ಶೇ 23 ರಷ್ಟಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಬಳಿಕ ಪ್ರಸ್ತುತ ಸಿಎಜಿಆರ್​ನಲ್ಲಿ ಕಲ್ಲಿದ್ದಲು ಆಮದು ಶೇ 2ಕ್ಕೆ ಇಳಿಸಲಾಗಿದೆ. ಇದರಲ್ಲಿ ಪ್ರಲ್ಹಾದ್ ಜೋಶಿ ಹಾಗೂ ಕಲ್ಲಿದ್ದಲು ಸಚಿವಾಲಯ ಸಾಕಷ್ಟು ಶ್ರಮವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತ ಹೊರದೇಶಗಳಿಗೆ ರಫ್ತು ಮಾಡುವಷ್ಟು ಕಲ್ಲಿದ್ದಲು ಹೊಂದಿದ್ದರೂ ಹಿಂದಿನ ಸರ್ಕಾರಗಳ ನೀತಿ ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಕಲ್ಲಿದ್ದಲು ಕ್ಷೇತ್ರವನ್ನ ಖಾಸಗಿ ಕ್ಷೇತ್ರಕ್ಕೆ ಅನ್​ಲಾಕ್ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಮಾರ್ಗದರ್ಶನ ಮಾಡಿದರು ಎಂದರು.

ಕಮರ್ಷಿಯಲ್ ಕಲ್ಲಿದ್ದಲು ಹರಾಜಿನಿಂದ ದೇಶದ 11 ರಾಜ್ಯಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ವಿಶೇಷವಾಗಿ ಕಲ್ಲಿದ್ದಲು ಗ್ಯಾಸಿಫಿಕೇಶನ್​ನತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕಲ್ಲಿದ್ದಲಿನಿಂದ ಗ್ಯಾಸ್ ತಯಾರಿಕೆಯನ್ನ ಭಾರತ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ವಿತ್ತ ಸಚಿವರು ಹೇಳಿದರು.

ಈ ವೇಳೆ ಮಾತನಾಡಿದ ಪ್ರಲ್ಹಾದ್ ಜೋಶಿ, ಕಮರ್ಷಿಯಲ್ ಕಲ್ಲಿದ್ದಲು ಹರಾಜಿನಿಂದ ಪ್ರಸಕ್ತ ಸಾಲಿನಲ್ಲಿ ಖಾಸಗಿ ವಲಯದಿಂದ 5 ಮಿಲಿಯನ್ ಮೆಟ್ರಿಕ್ ಟನ್​ನಷ್ಟು ಕಲ್ಲಿದ್ದಲು ಉತ್ಪಾದನೆಯಾಗಲಿದೆ. ಮುಂದಿನ ಸಾಲಿನಲ್ಲಿ 10 ರಿಂದ 15 ಮಿಲಿಯನ್ ಮೆಟ್ರಿಕ್ ಟನ್​ನಷ್ಟು ಕಮರ್ಷಿಯಲ್ ಕಲ್ಲಿದ್ದಲು ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದರು.

ನಮಗೆ 12 ಮಿಲಿಯನ್ ಮೆಟ್ರಿಕ್ ಟನ್ ಕಲ್ಲಿದ್ದಲು ಕೊರತೆಯಿತ್ತು. ಇದೀಗ ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ಸ್​ಗಳಿಂದ ಈ ಕೊರತೆ ನಿವಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೋಲ್ ಗ್ಯಾಸಿಫಿಕೇಶನ್ ಪ್ರಾಜೆಕ್ಟ್​ಗೆ ಹಣಕಾಸು ಸಚಿವಾಲಯ 6 ಸಾವಿರ ಕೋಟಿ ಅನುದಾನ ಮೀಸಲಿರಿಸಿದ್ದಕ್ಕೆ ಪ್ರಲ್ಹಾದ್ ಜೋಶಿಯವರು ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸಿದರು.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.