ಕಮಲಕ್ಕೆ ತಳಮಳ.. ಕೈ ಗೆ ನಡುಕ; ಪ.ಬಂಗಾಳದ ಈ ಬಿರುಗಾಳಿ ಹುಟ್ಟಿಸಿರೋ ನಡುಕ ಎಂಥದ್ದು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ದೀದಿ ತನ್ನ ಪವರ್ ಏನು ಅನ್ನೋದನ್ನ ಕೇಂದ್ರ ಸರ್ಕಾರಕ್ಕೆ ಹಾಗೂ ಎದುರಾಳಿಗಳಿಗೆ ತೋರಿಸಿಕೊಟ್ಟಿದ್ರು. ಅಲ್ಲಿನ ಜನರ ಆಶೀರ್ವಾದ ಮಮತಾ ಬ್ಯಾನರ್ಜಿಯ ಮೇಲೆ ಪ್ರಬಲವಾಗಿತ್ತು. ಬಂಗಾಳದಲ್ಲಿ ಮಮತಾ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಆದ್ರೆ, ಇಷ್ಟೂ ದಿನ ತಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿದ್ದ ಅವರ ಪಕ್ಷ ಈಗ ಬೇರೆ ರಾಜ್ಯಗಳಲ್ಲಿ ರಾಜಕೀಯ ಪಗಡೆಯಾಡಲು ಸನ್ನದ್ಧವಾಗಿದೆ. ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ವೇದಿಕೆ ಸಿದ್ಧವಾಗಿದೆ..

ಇದೇ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳದ ಚುನಾವಣೆಯನ್ನು ದೇಶ ಎಂದಿಗೂ  ಮರೆಯಲು ಸಾಧ್ಯವೇ ಇಲ್ಲ. ಬಿಜೆಪಿ ನೀಡಿದ ಕಠಿಣಾತಿಕಠಿಣ ಸವಾಲನ್ನು ಮೆಟ್ಟಿ ನಿಂತು ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಆದ್ರೆ, ಅದೇನು ಕಡಿಮೆಯ ಸವಾಲು ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ಧುರೀಣರ ದಂಡೇ ಬಂಗಾಳದ ಮೇಲೆ ದಂಡೆತ್ತಿದ್ದು ಇನ್ನು ಕಣ್ಮುಂದೆಯೇ ಇದೆ. ಕೇಸರಿ ಪಾಳಯದ ಘಟಾನುಘಟಿಗಳು, ಅಷ್ಟೆಲ್ಲಾ ಸರ್ಕಸ್ ಮಾಡಿದ್ದು, ಮಮತಾ ಬ್ಯಾನರ್ಜಿ ಎಂಬ ಒಂದೇ ಒಂದು ದೈತ್ಯ ಶಕ್ತಿಯನ್ನ ಮಣಿಸಲು ಅನ್ನೋದು ಗೊತ್ತಿರೋ ವಿಚಾರ..

ಅದೆಷ್ಟೋ ತೃಣಮೂಲ ಶಾಸಕರನ್ನ, ಸಂಸದರನ್ನ, ಮುಖಂಡರನ್ನ ಚುನಾವಣೆಗೂ ಮುಂಚೆಯೇ  ಬಿಜೆಪಿಗೆ ಸೆಳೆದುಕೊಳ್ಳಲಾಗಿತ್ತು.  ಒಂದು ರೀತಿಯಲ್ಲಿ ಬಿಜೆಪಿ, ಟಿಎಂಸಿ ನಡುವೆ ಅಕ್ಷರಶಃ ಯುದ್ಧದ ವಾತಾವರಣವೇ ನಿರ್ಮಾಣವಾಗಿತ್ತು ಅಂದ್ರೆ ತಪ್ಪಾಗಲ್ಲ. ಮಮತಾ ಬ್ಯಾನರ್ಜಿ ಜೀವನಮಾದಲ್ಲಿಯೇ ಯಾವತ್ತೂ ಅಷ್ಟೊಂದು ಕಠಿಣ ಸವಾಲು ಎದುರಿಸಿಯೇ ಇರಲಿಲ್ಲವೇನೋ. ಅಷ್ಟೊಂದು ದೊಡ್ಡ ಸವಾಲನ್ನ ಬಿಜೆಪಿ ನೀಡಿತ್ತು. ಗೆಲುವು ಬಿಜೆಪಿಗಾ? ಟಿಎಂಸಿಗಾ? ಅನ್ನೋ ಚರ್ಚೆ ದೇಶಾದ್ಯಂತ ಜೋರಾಗಿತ್ತು. ಅಂತಿಮವಾಗಿ ಮೇ 2 ರಂದು ಫಲಿತಾಂಶ ಹೊರ ಬಂದಾಗ ಟಿಎಂಸಿ 292 ಸ್ಥಾನಗಳಲ್ಲಿ 213 ಸ್ಥಾನ ಗೆದ್ದು ವಿಜಯ ಪತಾಕೆ ಹಾರಿಸಿತ್ತು. ಆದ್ರೆ, ಅಂದು ಬಿಜೆಪಿ ನೀಡಿದ ಸವಾಲಿನಿಂದ ಮಮತಾ ಗಾಯಗೊಂಡ ಹುಲಿಯಂತಾಗಿದ್ದಾರೆ. ಅದು ಹೇಗಾದ್ರೂ ಮಾಡಿ ಕೇಂದ್ರದಲ್ಲಿ ಬಿಜೆಪಿಯನ್ನು ಕಿತ್ತು ಎಸೆಯಬೇಕು ಅಂತ ಪಣ ತೊಟ್ಟಿದ್ದಾರೆ. ಇದರ ಆರಂಭಿಕ ಹಂತವೇ ದೇಶಾದ್ಯಂತ ಟಿಎಂಸಿ ವಿಸ್ತರಣೆ.

ದೀದಿಯ ಟಿಎಂಸಿ ಟಾರ್ಗೆಟ್‌ ಏನು? ಅದು ಹೇಗೆ ಟಿಎಂಸಿ ವಿಸ್ತರಿಸುತ್ತಿದ್ದಾರೆ? ದೀದಿ ಎಸೆಯುತ್ತಿರೋ ಬೌನ್ಸರ್​ ಬಿಜೆಪಿಗೆ ಬಡಿಯುತ್ತಿದೆಯಾ? ಇಲ್ಲ ವೈಡ್‌ ಆಗ್ತಾ ಇದೆಯಾ?  ಇದೆಲ್ಲಾ ಪ್ರಶ್ನೆಗಳಿಗೂ ಉತ್ತರವನ್ನ ಸದ್ಯಕ್ಕೆ, ಹೇಳೋದಕ್ಕೆ ಆಗಲ್ಲ.. ಯಾಕಂದ್ರೆ, ದೀದಿಯ ಆಪರೇಷನ್ ಅಷ್ಟೊಂದು ಸೀಕ್ರೆಟ್​ ಆಗಿ ನಡೀತಿದೆ. ಬಟ್ ಬಹಿರಂಗವಾಗಿಯೇ ಮಮತಾರ ಸ್ಟ್ರ್ಯಾಟರ್ಜಿ ನೀಟಾಗಿ ಅರ್ಥವಾಗ್ತಿದೆ.

ಟಿಎಂಸಿ ಸೇರಿದ ಕಾಂಗ್ರೆಸ್ ಮಾಜಿ ಸಿಎಂ

ಈಶಾನ್ಯ ರಾಜ್ಯವಾಗಿರೋ ಮೇಘಾಲಯದಲ್ಲಿ ರಾಜಕೀಯ ಕ್ಷಿಪ್ರ ಕ್ರಾಂತಿಯೊಂದಾಗಿದೆ. 12 ಕಾಂಗ್ರೆಸ್‌ ಶಾಸಕರು ಟಿಎಂಸಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇದು ರಾತ್ರೋ ರಾತ್ರಿ ನಡೆದ ರಾಜಕೀಯ ಬೆಳವಣಿಗೆ, ಇದೀಗ ಮೇಘಾಲಯ ಕಾಂಗ್ರೆಸ್‌ನಲ್ಲಿ ಉಳಿದಿರೋದು 5 ಶಾಸಕರು ಮಾತ್ರ. ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕೂಡ ಟಿಎಂಸಿ ಸೇರ್ಪಡೆಯಾಗಿದ್ದು, ಅಲ್ಲಿ ಇನ್ಮೇಲೆ ಟಿಎಂಸಿ ಪಕ್ಷವೇ ಪ್ರತಿಪಕ್ಷವಾಗಲಿದೆ. ಈ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಮಮತಾ ಬ್ಯಾನರ್ಜಿ ಭರ್ಜರಿ ಏಟು ನೀಡಿದ್ದಾರೆ. ಭಿನ್ನಮತ ಶಮನ ಮಾಡಲು ವಿಫಲವಾದ ಕಾಂಗ್ರೆಸ್‌ ಬೆಲೆತೆರುವಂತಾಗಿದೆ.

ಹುಣ್ಣು ಚಿಕ್ಕದಿರುವಾಗಲೇ ಅದಕ್ಕೆ ಮುಲಾಮು ಹಚ್ಚಿ, ಕಾಳಜಿಯಿಂದ ವಾಸಿ ಮಾಡಿಕೊಳ್ಳಬೇಕು. ಇಲ್ಲದಿದ್ರೆ ಅದು ದೊಡ್ಡದಾಗಿ ಜೀವಕ್ಕೆ ಆಪತ್ತು ತರುವುದು ಗ್ಯಾರಂಟಿ. ಈ ಮಾತು ಯಾಕೆ ಅಂದ್ರೆ, ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಿತಿ ಹಾಗೇ ಆಗಿದೆ. ಭಿನ್ನಮತ ಕಾಣಿಸಿಕೊಂಡಾಗ ಆರಂಭದಲ್ಲಿಯೇ ಅದನ್ನು ಚಿವುಟಿ ಹಾಕುವ ಕಲೆಯನ್ನು ಕಾಂಗ್ರೆಸ್‌ ಅಕ್ಷರಶಃ ಕಳೆದುಕೊಂಡಿದೆ. ಹಿಂದೊಮ್ಮೆ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಕಾಲದಲ್ಲಿ ಅಷ್ಟೇ ಏಕೆ ಮನಮೋಹನ್‌ ಸಿಂಗ್‌ ಪ್ರಧಾನ ಮಂತ್ರಿಯಾಗಿದ್ದಾಗ, ಸೋನಿಯಾ ಗಾಂಧಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ರು. ಆ ಸಂದರ್ಭದಲ್ಲಿ ಭಿನ್ನಮತ ಶಮನ ಮಾಡುವಲ್ಲಿ ಕಾಂಗ್ರೆಸ್‌ ಎಕ್ಸ್‌ಪರ್ಟ್​ ಆಗಿತ್ತು. ಆದ್ರೆ, ಇದೀಗ ಕಾಂಗ್ರೆಸ್‌ ಆ ತಂತ್ರಗಾರಿಕೆಯನ್ನು ಕಳೆದುಕೊಂಡಿದೆ. ಪರಿಣಾಮ ದೇಶದಲ್ಲಿ ಒಂದಾದರ ಮೇಲೊಂದು ರಾಜಕೀಯ ಕ್ರಾಂತಿಗಳು ನಡೆಯುತ್ತಲೇ ಇವೆ. ಇದೀಗ ಮೇಘಾಲಯದಲ್ಲಿ ಆಗಿರೋದು ಇಂತಹದ್ದೇ ಕ್ರಾಂತಿ.

ಮೇಘಾಲಯದಲ್ಲಿ ಆಗಿರೋದು ಅಷ್ಟೆ, 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 60 ಸ್ಥಾನದಲ್ಲಿ 21 ಸೀಟ್‌ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆದ್ರೆ, 19 ಸೀಟ್‌ ಗೆದ್ದು ಎರಡನೇ ಅತಿ ದೊಡ್ಡ ಪಾರ್ಟಿಯಾಗಿದ್ದ ಎನ್‌ಪಿಪಿ, ಕೇವಲ 2 ಸ್ಥಾನ ಗೆದ್ದ ಬಿಜೆಪಿ ಸೇರಿ ಅಧಿಕಾರಕ್ಕೇರಿದ್ವು. ಆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸರ್ಕಾರ ರಚನೆಯ ಅವಕಾಶವಿದ್ರೂ ಕಾಂಗ್ರೆಸ್‌ ಆಸಕ್ತಿ ತೋರಿಸಲಿಲ್ಲ. ಇದು ಸಹಜವಾಗಿ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾಗೆ ಹೈಕಮಾಂಡ್‌ ಮೇಲೆ ಸಿಟ್ಟು ತರಿಸಿತ್ತು. ಇನ್ನು, ಸೆಪ್ಟೆಂಬರ್‌ನಲ್ಲಿ ಮೇಘಾಲಯದ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ವಿನ್ಸೆಂಟ್‌ ಪಾಲ್​​​ರನ್ನ ನೇಮಕ ಮಾಡಲಾಗಿತ್ತು. ಈ ವಿಚಾರದಲ್ಲಿ ಮುಕುಲ್‌ ಸಂಗ್ಮಾ ವಿರೋಧವಿತ್ತು. ತನ್ನನ್ನು ಒಂದು ಮಾತೂ ಕೇಳದೇ ಅಧ್ಯಕ್ಷ ಸ್ಥಾನದ ಆಯ್ಕೆ ಆಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಕಾಂಗ್ರೆಸ್‌ ಮುಖಂಡರ ಭಿನ್ನಮತ ಶಮನಗೊಳಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಭಿನ್ನಮತಿಯರಿಗೆ ಮಮತಾ ಬ್ಯಾನರ್ಜಿ ಕಾಳು ಹಾಕಿದ್ದಾರೆ.

ತೊಡೆ ತಟ್ಟಿ ಪಶ್ಚಿಮ ಬಂಗಾಳದಲ್ಲಿ ಯಾವಾಗ ದೀದಿ ವಿಜಯ ಸಾಧಿಸಿದ್ಲೋ ಅಂದಿನಿಂದ ಶುರುವಾಯ್ತು, ದೀದಿಯ ದೇಶಯಾತ್ರೆ.  ಬೇರೆ ಬೇರೆ ರಾಜ್ಯಗಳ ಮೇಲೂ ಈಗ ದೀದಿಯ ಕಣ್ಣು ಬಿದ್ದಿದೆ.  ಕೇವಲ ಪಶ್ಚಿಮ ಬಂಗಾಳದಲ್ಲಿ ಇದ್ರೆ ಮಾತ್ರ ಸಾಲದು, ಬೇರೆ ಬೇರೆ ರಾಜ್ಯದಲ್ಲಿಯೂ ಟಿಎಂಸಿ ಬೆಳೆಸಬೇಕು. ಆ ಮೂಲಕ ದೇಶದಲ್ಲಿ ಟಿಎಂಸಿಯನ್ನು ಸಿಂಗಲ್‌ ಲಾರ್ಜೆಸ್ಟ್‌ ಪಾರ್ಟಿಯಾಗಿ ಮಾಡಬೇಕು ಅಂತ ಮಮತಾ ಪ್ಲಾನ್‌ ಮಾಡ್ತಾರೆ. ಇದೇ ಉದ್ದೇಶಕ್ಕೆ ಚಿಕ್ಕಪುಟ್ಟ ರಾಜ್ಯಗಳ ಮೇಲೆ ದೃಷ್ಟಿ ಹರಿಸಿದ್ದಾರೆ. ಬಿಜೆಪಿ ಎದುರಿಸಲು ಯಾರೇ ಪಕ್ಷ ಸೇರಿದ್ರೂ ಸ್ವಾಗತ ಅಂತ ಘೋಷಣೆ ಮಾಡಿದ್ದಾರೆ. ಇದರ ಪ್ರಾರಂಭಿಕ ಹಂತವೇ ಮೇಘಾಲಯದ ಬಿಗ್‌ ಆಪರೇಷನ್‌. ಹೌದು, ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಅಸಮಾಧಾನಿತರು ಕೇಂದ್ರದಲ್ಲಿ ಅಧಿಕಾರದಲ್ಲಿರೋ ಬಿಜೆಪಿಗೆ ಜಂಪ್ ಮಾಡ್ತಾರೆ. ಆದ್ರೆ, ಮೇಘಾಲಯದಲ್ಲಿ ಹಾಗಾಗಲು ದೀದಿ ಬಿಟ್ಟಿಲ್ಲ. ಕಾಂಗ್ರೆಸ್‌ನಲ್ಲಿರೋ ಮಾಜಿ ಮುಖ್ಯಮಂತ್ರಿ ಸೇರಿದಂತೆ 12 ಮಂದಿ ಅಸಮಾಧಾನಿತರನ್ನು ಟಿಎಂಸಿಗೆ ಸೆಳೆದುಕೊಂಡಿದ್ದಾರೆ. 2018ರಲ್ಲಿ ಮೇಘಾಲಯದ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿಯೂ ಸ್ಪರ್ಧಿಸಿದ್ದ ಟಿಎಂಸಿ ರಾತ್ರಿ ಬೆಳಗಾಗೊದ್ರಲ್ಲಿ ಪ್ರತಿಪಕ್ಷವಾಗಿ ಬೆಳೆದು ಬಿಟ್ಟಿದೆ.

ಇನ್ನು, ಈಶಾನ್ಯ ರಾಜ್ಯವೇ ಆಗಿರೋ ತ್ರಿಪುರದಲ್ಲಿಯೂ ಟಿಎಂಸಿ ಅಬ್ಬರಿಸುತ್ತಿದೆ. ಕಳೆದ ಬಾರಿ 24 ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಒಂದು ಸೀಟ್‌ ಗೆಲ್ಲಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಆದ್ರೆ, ಈಗ ಪರಿಸ್ಥಿತಿ ಹಾಗಿಲ್ಲ. ಅಲ್ಲಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಎಂಸಿ ಗೆಲುವಿನ ರುಚಿ ನೋಡಿದೆ. ಅಷ್ಟೇ ಅಲ್ಲ, 2023 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಟಾರ್ಗೆಟ್‌ ಆಗಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ.

ಗೋವಾದಲ್ಲೂ ಮಮತಾ ಬ್ಯಾನರ್ಜಿ ರಣತಂತ್ರ
ಪಂಜಾಬ್‌ ಚುನಾವಣೆಯಲ್ಲೂ ಸ್ಪರ್ಧಿಸಲು ಪ್ಲಾನ್‌

ನಾವ್ ಮೊದಲೇ ಹೇಳಿದಂತೆ, ದೀದಿ ಪಕ್ಕಾ ಪೆಟ್ಟು ತಿಂದ ಹುಲಿಯಂತಾಗಿ ಬಿಟ್ಟಿದ್ದಾರೆ.   ಪಶ್ಚಿಮ ಬಂಗಾಳದ ಹೊರಗೂ ಟಿಎಂಸಿ ಬೆಳೆಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿ ಗೋವಾಗೆ ಭೇಟಿ ನೀಡಿದ್ರು, ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಅನೇಕ ಮುಖಂಡರನ್ನು ಟಿಎಂಸಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅದೇ ರೀತಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್‌ ಚುನಾವಣೆಗೂ ತಂತ್ರ ಹೆಣೆದಿದ್ದಾರೆ. ಟಿಎಮ್‌ಸಿ ಇಂದ ಹೆಚ್ಚಿನ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುವುದು ಮಮತಾ ತಂತ್ರವಾಗಿದೆ. ಆದ್ರೆ, ಅದು ಅಷ್ಟು ಸುಲಭನಾ ಅನ್ನೋ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಬಿಜೆಪಿಯನ್ನು ಪ್ರಬಲ ಟಾರ್ಗೆಟ್ ಮಾಡಿರುವ ದೀದಿ
ಮಮತಾರ ರಣತಂತ್ರದಿಂದ ಕಾಂಗ್ರೆಸ್​​​ಗೆ ಭಾರೀ ಪೆಟ್ಟು

ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ದೀದಿ ವಿಶ್ರಮಿಸುತ್ತಿಲ್ಲ.. ಬೇರೆ ಬೇರೆ ರಾಜ್ಯಗಳ  ಪ್ರವಾಸದಲ್ಲಿ ಮಮತಾ ಸಖತ್ ಬ್ಯುಸಿಯಾಗಿದ್ದಾರೆ. ಬೇರೆ ಪಕ್ಷದಲ್ಲಿರೋ ಅಸಮಾಧಾನಿತರನ್ನ ಟಿಎಂಸಿಗೆ ಕರೆದುಕೊಳ್ತಿದ್ದಾರೆ. ಆದ್ರೆ, ಇಲ್ಲೇ ಇರೋದು ಮಜಾ. ದೀದಿ ಟಾರ್ಗೆಟ್‌ ಮಾಡಿರೋದು ಬಿಜೆಪಿಯನ್ನೇ ಆದ್ರೂ ಅದರ ಏಟು ಅನುಭವಿಸ್ತಿರೋದು ಕಾಂಗ್ರೆಸ್. ಇತ್ತೀಚೆಗೆ ಟಿಎಂಸಿ ಸೇರಿದ ಬಹುತೇಕ ಮುಖಂಡರು ಕಾಂಗ್ರೆಸ್‌ನ ಹಾಲಿ, ಮಾಜಿ ಶಾಸಕರೇ ಆಗಿದ್ದಾರೆ. ಮೇಘಾಲದಲ್ಲಿಯೂ ಆಗಿದ್ದು ಅಷ್ಟೇ, ಟಿಎಂಸಿ ಸೇರಿದ 12 ಶಾಸಕರು ಕಾಂಗ್ರೆಸ್‌ನವರಾಗಿದ್ದಾರೆ.

ದೀದಿ ಹಿಂದೆ ಇದ್ದಾನೆ ಚುನಾವಣಾ ರಣತಂತ್ರಗಾರ
ಬಿಜೆಪಿ ಪಲ್ಟಿ ಹೊಡೆಸಲು ತಂತ್ರಗಾರಿಕೆ ರೆಡಿ ಆಯ್ತಾ?

 ಯಸ್.. ನಿಮಗೆ ದೇಶದ ರಾಜಕಾರಣದ ಮೇಲೆ ಆಸಕ್ತಿ ಇದ್ರೆ, ಇಷ್ಟೊತ್ತಿಗಾಗಲೇ ಪ್ರಶಾಂತ್ ಕಿಶೋರ್ ಯಾರು ಅನ್ನೋದು ಗೊತ್ತಾಗಿ ಹೋಗಿರುತ್ತೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಆಂಧ್ರ ಮುಖ್ಯಮಂತ್ರಿ ಜಗಮೋಹನ್‌ ರೆಡ್ಡಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಚುನಾವಣಾ ತಂತ್ರ ರೂಪಿಸಿಕೊಟ್ಟವರು. ಚುನಾವಣೆಗೆ ರಣತಂತ್ರ ಹೆಣೆಯುವಲ್ಲಿ ಪ್ರಶಾಂಕ್‌ ಕಿಶೋರ್‌ ಚತುರ ಅಂತಲೇ ಖ್ಯಾತಿ. ಸೋಲಿಗಿಂತ ಗೆಲುವನ್ನು ಹೆಚ್ಚಾಗಿ ಕಂಡವರು. ಇದೀಗ ಟಿಎಂಸಿ ಸ್ಟ್ರ್ಯಾಟಜಿ ಹಿಂದೆಯೂ ಕಿಶೋರ್‌ ಹೆಸರು ಕೇಳಿ ಬರ್ತಾ ಇದೆ. ಮೇಘಾಲಯದಲ್ಲಿ ಕಾಂಗ್ರೆಸ್‌ನಿಂದ ಅಸಮಾಧಾನಿತರಾದ 12 ಶಾಸಕರನ್ನು ಟಿಎಂಸಿಗೆ ಸೇಳೆಯಲು ಪ್ರಶಾಂತ್‌ ಕಿಶೋರ್‌ ಕಾರಣ ಎನ್ನಲಾಗುತ್ತಿದೆ.

ಟಾರ್ಗೆಟ್‌ 2024 ದೀದಿಗೆ ಸುಲಭ ಸಾಧ್ಯನಾ?
ಚುನಾವಣೆಗೂ ಮುನ್ನ ಕಾಂಗ್ರೆಸ್‌ ಜೊತೆ ಸೇರುತ್ತಾ ಟಿಎಂಸಿ?

ಅದು, ಹೇಗೆ ರಾಜಕೀಯವಾಗಿ ಲೆಕ್ಕಾಚಾರ ಹಾಕಿದ್ರೂ ದೇಶದಲ್ಲಿ ಟಿಎಂಸಿ ಬೆಳವಣಿಗೆ ಅಷ್ಟು ಸುಲಭವಿಲ್ಲ. ಪಶ್ಚಿಮ ಮಂಗಾಳ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ಟಿಎಂಸಿ ನೆಲೆ ನಿಂತಿಲ್ಲ. ಇನ್ನು ಬಿಜೆಪಿ ವೋಟ್‌ ಬ್ಯಾಂಕ್‌ ಇತರೆ ಪಕ್ಷಗಳ ವೋಟ್‌ ಬ್ಯಾಂಕ್‌ಗೂ ಭಿನ್ನತೆ ಇದೆ. ಕಾಂಗ್ರೆಸ್‌, ಎಡಪಕ್ಷ, ತೃತಿಯರಂಗದ ಪಕ್ಷಗಳ ವೋಟ್‌ ಬ್ಯಾಂಕ್‌ಗಳನ್ನೇ ಟಿಎಂಸಿ ಸೆಳೆಯಬಹುದೇ ಹೊರತು ಬಿಜೆಪಿ ವೋಟ್‌ ಬ್ಯಾಂಕ್‌ ಸೆಳೆಯುವುದು ಕಷ್ಟ. ಅದರಲ್ಲಿಯೂ ಪಕ್ಕಾ ಹಿಂದುತ್ವದ ವೋಟ್‌ ಬ್ಯಾಂಕ್‌ಗಳು ಬಿಜೆಪಿ ಫಿಕ್ಸ್‌. ಹೀಗಾಗಿರುವಾಗಿ ಟಿಎಂಸಿ ಬೇರೆ ರಾಜ್ಯಕ್ಕೆ ನುಗ್ಗಿ ಅಲ್ಲಿಯ ಕಾಂಗ್ರೆಸ್‌, ತೃತಿಯರಂಗದ ಪಕ್ಷಗಳ ವೋಟ್‌ ಬ್ಯಾಂಕ್‌ ಒಡೆದು ಬಿಜೆಪಿಗೆ ಇನ್ನಷ್ಟು ಲಾಭ ಮಾಡಿಕೊಡುವ ಸಾಧ್ಯತೆಯೂ ಇದೆ. ಹೀಗಿರುವಾಗ ದೀದಿ ಬಿಜೆಪಿಯನ್ನು ಹೇಗೆ ಟಾರ್ಗೆಟ್‌ ಮಾಡಿಕೊಂಡು 2024ರ ಚುನಾವಣೆಯಲ್ಲಿ ಸೋಲಿಸುತ್ತಾರೆ ಅನ್ನೋದು ಪ್ರಶ್ನೆಯಾಗಿದೆ.

ಸುಬ್ರಮಣಿಯನ್‌ ಸ್ವಾಮಿಯಿಂದಲೂ ದೀದಿಗೆ ಬಹುಪರಾಕ್‌
ಅಚ್ಚರಿ ಮೂಡಿಸಿದ ಬಿಜೆಪಿ ಹಿರಿಯ ಸಂಸದನ ನಡೆ

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಸಾಲು ಸಾಲು ಶಾಸಕರು ಬಿಜೆಪಿಗೆ ವಲಸೆ ಹೋಗಿದ್ರು. ಆದ್ರೆ, ಚುನಾವಣೆಯ ನಂತರ ದೀದಿ ಅವರಲ್ಲಿ ಬಹುತೇಕ ಮಂದಿಯನ್ನು ಟಿಎಂಸಿಗೆ ಎಳೆದುಕೊಂಡು ಬಿಟ್ಟಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನೋದು ದೀದಿ ತಂತ್ರ. ಒಮ್ಮೆ ಬಿಜೆಪಿ ಹೋದವರನ್ನು ಅಲ್ಲಿಯೇ ಬಿಟ್ರೆ ಮುಂದೆ ಪಶ್ಚಿಮ ಬಂಗಾಳದಲ್ಲಿ ವಲಸಿಗರಿಂದ ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆದು ಬಿಡುತ್ತದೆ ಅನ್ನೋ ಅರಿವು ದೀದಿಗಿತ್ತು. ಹೀಗಾಗಿ ಪುನಃ ಅವರನ್ನು ಮಾತ್ರಪಕ್ಷಕ್ಕೆ ಸೇರಿಸಿಕೊಂಡಿದ್ದಾಳೆ. ಇದರ ಜೊತೆಗೆ ಬಿಜೆಪಿಯ ದೊಡ್ಡ ದೊಡ್ಡ ಮುಖಂಡರಿಗೂ ದೀದಿ ಗಾಳ ಹಾಕಿರೋ ಸಾಧ್ಯತೆ ಇದೆ. ಇತ್ತೀಚೆಗೆ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ದೀದಿಗೆ ಬಹುಪರಾಕ್‌ ಹೇಳಿರೋದೇ ಇದಕ್ಕೆ ಸಾಕ್ಷಿ. ಕೇಂದ್ರ ಸರ್ಕಾರವನ್ನು ತಿವಿಯುತ್ತಲೇ ಇರೋ ಸ್ವಾಮಿ ಇತ್ತೀಚೆದೆ ದೆಹಲಿಯಲ್ಲಿ ದೀದಿ ಭೇಟಿ ಮಾಡಿದ್ರು. ಈ ಸಂದರ್ಭದಲ್ಲಿ ತಾವು ದೀದಿ ಜೊತೆಗಿರುವುದಾಗಿ, ದೀದಿ ಉತ್ತಮ ಆಡಳಿತ ನೀಡುತಿರೋದಾಗಿ ಸ್ವಾಮಿ ಬಹುಪರಾಕ್‌ ಹೇಳಿದ್ದಾರೆ.

ಇದನ್ನೆಲ್ಲಾ ನೋಡ್ತಿದ್ರೆ ದೀದಿ ಒಂದಲ್ಲ ಒಂದು ದಿನ ಟಿಎಂಸಿ ಮ್ಯಾಜಿಕ್‌ ಮಾಡುವ ಮತ್ತೊಂದು ಸಾಧ್ಯತೆ ಇದೆ. ಅದೇನಂದ್ರೆ, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌, ತೃತೀಯ ರಂಗದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯುವುದು. ಜೊತೆಗೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದು. ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸುವುದು. ಆ ಮೂಲಕ ಮೋದಿ, ಶಾ ಜೋಡಿಗೆ ಆಘಾತ ನೀಡುವುದು. ಆದ್ರೆ, ಚುನಾವಣಾ ಪೂರ್ವ ಮೈತ್ರಿ ಅಷ್ಚು ಸುಲಭದಲ್ಲ. ಇನ್ನು ಬಿಜೆಪಿ ಕೂಡ ಪ್ರತಿತಂತ್ರ ಹೆಣೆದೇ ಇರುತ್ತದಾ?

ರಾಜಕೀಯದಲ್ಲಿ ಯಾವೂದು ಅಸಾಧ್ಯವಲ್ಲ. ಹಾಗಂತ ಮಮತಾ ಟಾರ್ಗೆಟ್‌ 2024 ಸುಲಭವೂ ಅಲ್ಲ. ಪೆಟ್ಟು ತಿಂದ ಹುಲಿಯಂತೆ ಕೆರಳಿರೋ ಮಮತಾ ಅದು ಹೇಗೆ ದೇಶದಲ್ಲಿ ದೊಡ್ಡ ಶಕ್ತಿಯಾಗಿ ಟಿಎಂಸಿ ಬೆಳೆಸುತ್ತಾರೆ. ಅವರ ರಣತಂತ್ರ ನಿಜಕ್ಕೂ ಕಾರ್ಯರೂಪಕ್ಕೆ ಬರುತ್ತಾ ಅನ್ನೋದೇ ಈಗಿರೋ ದೊಡ್ಡ ಪ್ರಶ್ನೆ

 

News First Live Kannada

Leave a comment

Your email address will not be published. Required fields are marked *