ಕಮಲ-ಕಾಂಗ್ರೆಸ್ ನಡುವೆ ‘ಪೆಗಾಸಸ್’ ಫೈಟ್​- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಕಮಲ-ಕಾಂಗ್ರೆಸ್ ನಡುವೆ ‘ಪೆಗಾಸಸ್’ ಫೈಟ್​- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1.ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ


2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಮಧ್ಯಾಹ್ನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇಲಾಖೆಯ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಇನ್ನು ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ಪಡೆಯಬಹುದಾಗಿದೆ.

2. ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಿಎಂ


ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತು ಇಂದು‌ ವಿಧಾನಸೌಧದಲ್ಲಿ ಸಿಎಂ ಬಿಎಸ್​ವೈ ಪರಿಶೀಲನಾ ಸಭೆ ನಡೆಸಲಿದ್ದಾರೆ. 10 ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಯಲಿದ್ದು, ಬೆಳಗ್ಗೆ 11.30ಕ್ಕೆ ಸಮ್ಮೇಳನ ಸಭಾಂಗಣದಲ್ಲಿ ಪರಿಶೀಲನೆ ಸಿಎಂ ಸಭೆ ನಡೆಸಲಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತ್ರೆ ಯೋಜನೆ, ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮ, ರಾಷ್ಟ್ರೀಯ ಕುಡಿಯುವ ನೀರಿನ ಕಾರ್ಯಕ್ರಮ, ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮ ಸೇರಿದಂತೆ ಒಟ್ಟು ಹತ್ತು ಯೋಜನೆಗಳ ಪ್ರಗತಿ ಪರಿಶೀಲನೆ ಬಗ್ಗೆ ಸಿಎಂ ಬಿಎಸ್ ವೈ ಸಭೆ ನಡೆಸಲಿದ್ದಾರೆ.

3.ಮೇಕೆದಾಟು ಬಗ್ಗೆ ಸ್ಟಾಲಿನ್​ ಮಾತು


ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದೊಂದಿಗೆ ಯಾವುದೇ ಮಾತುಕತೆ ಇಲ್ಲ ಅಂತಾ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್‌ ಹೇಳಿದ್ದಾರೆ. ಮೇಕೆದಾಟು ವಿಚಾರವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನ ದೆಹಲಿಯಲ್ಲಿ ಭೇಟಿಮಾಡಿ ಬಳಿಕ ಮಾತನಾಡಿದ ಅವರು, ಕೇಂದ್ರದ ಆಶ್ವಾಸನೆಗಳ ಆಧಾರದ ಮೇಲೆ, ಕರ್ನಾಟಕವು ತನ್ನ ಉಪಕ್ರಮದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಯೋಜನೆ ಮುಂದುವರಿಸುವುದಿಲ್ಲ ಎಂಬ ಭರವಸೆ ನಮ್ಮ ಸರಕಾರಕ್ಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಆಯ್ಕೆಗಳ ಬಗ್ಗೆಯೂ ಪರಿಶೀಲಿಸಲಾಗುವುದು ಅಂತಾ ಎಂ ಕೆ. ಸ್ಟಾಲಿನ್ ಹೇಳಿದ್ದಾರೆ.

4.ಶಾಲೆ ಓಪನ್​ ಮಾಡಬಹುದೆಂದ ಗುಲೇರಿಯಾ


ಕೋವಿಡ್​ ನಿಂದಾಗಿ ಕಳೆದೊಂದುವರೆ ವರ್ಷದಿಂದ ಶಾಲೆಗಳು ಬಂದ್​ ಆಗಿದ್ದು, ಆನ್​ಲೈನ್​ ಕಲಿಕೆ ಮೂಲಕವೇ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ. ಮಕ್ಕಳ ಲಸಿಕೆಗಳು ಪ್ರಯೋಗ ಹಂತದಲ್ಲಿದ್ದು, ಮುಂದಿನ ತಿಂಗಳ ಅಂತ್ಯಕ್ಕೆ ಸಿಗಬಹುದು ಅಂತಾ ಕೇಂದ್ರ ಸರ್ಕಾರ ತಿಳಿಸಿದೆ. ಈ ನಡುವೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ಭಾರತದ ಮಕ್ಕಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಸೋಂಕು ಕಡಿಮೆ ಇರುವ ಕಡೆ ಕೋವಿಡ್ ನಿಯಮಾವಳಿ ಪಾಲಿಸಿ ಶಾಲೆ ತೆರೆಯಲು ಅನುಮತಿ ನೀಡಬಹುದು ಅಂತಾ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ.

5. ಕಮಲ-ಕಾಂಗ್ರೆಸ್ ನಡುವೆ ‘ಪೆಗಾಸಸ್’ ಫೈಟ್​
ಪೆಗಾಸಸ್‌ ಗೂಢಚರ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗೂಢಚರ್ಯೆ ನಡೆಸಿದೆ ಅಂತಾ ಕೆಲ ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಇದರಲ್ಲಿ, ಆಡಳಿತ ಪಕ್ಷ ಅಥವಾ ಮೋದಿ ಸರ್ಕಾರದ ಪಾತ್ರವಿದೆ ಎಂದು ಹೇಳುವುದಕ್ಕೆ ಒಂದು ಸಣ್ಣ ಸಾಕ್ಷಿಯೂ ಇಲ್ಲ ಎಂದು ಬಿಜೆಪಿ ಹೇಳಿದೆ. ಭಾರತೀಯ ಜಾಸೂಸ್​ ಪಾರ್ಟಿ ಎಂಬ ಪ್ರತಿಪಕ್ಷದವರ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂಥಾ ಪಿತೂರಿಗಳ ಮೂಲಕ ಭಾರತದ ಅಭಿವೃದ್ಧಿ ಪಥವನ್ನು ಹಳಿ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.

6.ಮುಂಬೈ ಪೊಲೀಸರಿಂದ ರಾಜ್ ಕುಂದ್ರಾ ಅರೆಸ್ಟ್


ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಆರೋಪದಡಿ ಉದ್ಯಮಿ ರಾಜ್ ಕುಂದ್ರಾರನ್ನ ತಡರಾತ್ರಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳ ತಯಾರಿ ಬಗ್ಗೆ 2021ರ ಫೆಬ್ರುವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್​ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಈ ವೇಳೆ ಪ್ರಕರಣದಲ್ಲಿ ರಾಜ್ ಕುಂದ್ರಾರ ಪಾತ್ರವೂ ಇರೋದು ಬೆಳಕಿಗೆ ಬಂದಿದೆ. ಹೀಗಾಗಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಇದೀಗ ರಾಜ್ ಕುಂದ್ರಾರನ್ನ ಅರೆಸ್ಟ್​ ಮಾಡಿದ್ದಾರೆ.

7. ತಿರುಪತಿಗೆ 6.5 ಕೆಜಿಯ ಚಿನ್ನದ ಖಡ್ಗ ಅರ್ಪಣೆ


ಹೈದ್ರಾಬಾದ್​ನ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಖಡ್ಗ ನೀಡಿದ್ದಾರೆ. ಎಂ.ಶ್ರೀನಿವಾಸ್​ ದಂಪತಿ 6.5 ಕೆಜಿ ಚಿನ್ನದ ಖಡ್ಗವನ್ನು ತಿರುಪತಿ ಆಡಳಿತ ಮಂಡಳಿಗೆ ನೀಡಿದ್ದಾರೆ. ಅದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ ಎಂದು ಹೇಳಲಾಗ್ತಿದೆ. ಕಳೆದ ವರ್ಷವೇ ಈ ದಂಪತಿ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಕಾಣಿಕೆ ನೀಡಬೇಕು ಅಂತಾ ಹರಕೆ ಹೊತ್ತುಕೊಂಡಿದ್ದರಂತೆ. ಆದರೆ ಕೊರೊನಾ ಕಾರಣದಿಂದ ದೇವರಿಗೆ ಕಾಣಿಕೆ ಸಮರ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದೀಗ 6.5 ಕೆಜಿ ತೂಕದ ಚಿನ್ನದ ಖಡ್ಗ ದೇಗುಲಕ್ಕೆ ನೀಡುವ ಮೂಲಕ ತಮ್ಮ ಕಾಣಿಕೆ ತೀರಿಸಿದ್ದಾರೆ.

8. ಹೂವಿನ ಚಿತ್ರ ಬಿಡಿಸಿದ ನಾಯಿ


ಸಾಕು ನಾಯಿಯೊಂದು ಪೈಂಟ್ ‌ಬ್ರಷ್ ಬಳಸಿ ಹೂವಿನ ಚಿತ್ರ ಬಿಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗಿದೆ. ಆಸ್ಟ್ರೇಲಿಯನ್ ಶೆಫರ್ಡ್ ಈ ರೀತಿಯಾಗಿ ಹೂವಿನ ಚಿತ್ರವನ್ನ ಬಿಡಿಸಿದ್ದು, ಈ ವಿಡಿಯೋವನ್ನ ಹ್ಯಾಂಡಲ್ ಮೇರಿ ಎನ್ನುವವರು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ 1 ಮಿಲಿಯನ್​​ ವೀವ್ಸ್​​​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

9. ಹೆಚ್ಚಾಯ್ತು ಹುಟ್ಟುಹಬ್ಬದ ಸಂಭ್ರಮ


ರೆಸ್ಟೋರೆಂಟ್‌ನ ಟೇಬಲ್‌ ಒಂದರಲ್ಲಿ ಒಂಟಿಯಾಗಿ ಕೇಕ್ ಮುಂದೆ ಕುಳಿತ ಮಹಿಳೆಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಸೆಲೆಬ್ರೇಟ್ ಮಾಡೋದಕ್ಕೆ ಯಾರೂ ಇಲ್ಲದ ಕಾರಣ ತಮಗೆ ತಾವೇ ವಿಶ್​ ಹೇಳಿಕೊಳ್ತಿದ್ದರು. ಹೀಗೆ ಒಂಟಿಯಾಗಿ ಕೇಕ್ ಕತ್ತರಿಸಲು ಹೊರಟಿದ್ದ ಮಹಿಳೆಯನ್ನ ರೆಸ್ಟೋರೆಂಟ್‌ನ ಸಿಬ್ಬಂದಿ ಗಮನಿಸಿದ್ದಾರೆ, ಕೂಡಲೇ ಆಕೆಯನ್ನ ಸುತ್ತುವರಿದು ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ್ದಾರೆ. ಒಬ್ಬಂಟಿ ಮಹಿಳೆಯ ಹುಟ್ಟುಹಬ್ಬಕ್ಕೆ ಜೊತೆಯಾಗಿ ಸಂಭ್ರಮವನ್ನ ದುಪ್ಪಟ್ಟಾಗಿಸಿದ್ದಾರೆ. ಇದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದ ಮಹಿಳೆಯನ್ನ ಭಾವುಕರನ್ನಾಗಿಸಿತ್ತು.

10. ಸರಣಿ ವಶಕ್ಕೆ ಧವನ್ ಬಳಗದ ಸಿದ್ಧತೆ

ಕೊಲೊಂಬೊದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಇಂದು 2ನೇ ಪಂದ್ಯ ಆಡಲಿದೆ. ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಶ್ರೀಲಂಕಾವನ್ನು ಮಣಿಸಿರುವ ಭಾರತ ತಂಡ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ, ಇಂದಿನ ಪಂದ್ಯ ಗೆದ್ದು ಸರಣಿ ಗೆಲ್ಲುವ ತವಕದಲ್ಲಿದೆ. ಫಸ್ಟ್​ ಮ್ಯಾಚ್​ನಲ್ಲಿ ಇಶಾನ್‌ ಕಿಶನ್​, ಪೃಥ್ವಿ ಶಾ ಮತ್ತು ಸೂರ್ಯಕುಮಾರ್‌ ಉತ್ತಮ ಆಟ ಪ್ರದರ್ಶಿಸಿರೋದು ತಂಡದ ಬಲ ಹೆಚ್ಚಿಸಿದೆ. ವೇಗಿ ಭುವನೇಶ್ವರ ಕುಮಾರ್ ಹೆಚ್ಚು ರನ್ ಬಿಟ್ಟುಕೊಟ್ಟಿರುವುದರಿಂದ ಲಯಕ್ಕೆ ಮರಳಬೇಕಾಗಿದೆ.

The post ಕಮಲ-ಕಾಂಗ್ರೆಸ್ ನಡುವೆ ‘ಪೆಗಾಸಸ್’ ಫೈಟ್​- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link