ಮಂಗಳೂರು: ಅರಬ್ಬೀ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವದಿಂದ, ನಿನ್ನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಸದ್ಯಕ್ಕೆ ಕರಾವಳಿಯಲ್ಲಿ ತೌಕ್ತೆ ಸೈಕ್ಲೋನ್ ಅಬ್ಬರ  ತಗ್ಗಿದ್ದು, ನಿನ್ನೆ ರಾತ್ರಿಯಿಂದ  ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ಜಡಿಮಳೆ ಸುರಿಯುತ್ತಿದೆ.

ಆದ್ರೆ ತೌಕ್ತೆ ಎಫೆಕ್ಟ್​​ನಿಂದ ಮಂಗಳೂರಿನ ಸಮುದ್ರ ತೀರಗಳಲ್ಲಿ ಕಡಲಕೊರೆತ ಮುಂದುವರೆದಿದೆ. ಮಂಗಳೂರು ಹೊರವಲಯದ ಉಳ್ಳಾಲ , ಸೋಮೇಶ್ವರ, ಕೈಕೊ, ಕೋಟೆಪುರ, ಸಸಿಹಿತ್ಲು, ಪಣಂಬೂರು ಪ್ರದೇಶದಲ್ಲಿ ಕಡಲ ಕೊರೆತ ಉಂಟಾಗ್ತಿದೆ.

ನಿನ್ನೆ ಸಂಜೆ ಮೀನುಗಾರಿಕಾ ಸಚಿವ ಅಂಗಾರ ಕಡಲ ಕೊರೆತ ಸಂಭವಿಸಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಕಡಲ ತಡಿಯಲ್ಲಿ ಅಪಾಯದಲ್ಲಿರುವ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಆಳ ಸಮುದ್ರದಲ್ಲಿ ಟಗ್ ಬೋಟ್ ಮಗುಚಿಬಿದ್ದ ಪರಿಣಾಮ ಕಾಣೆಯಾದ 5 ಮಂದಿಗಾಗಿ ಶೋಧ ಮುಂದುರೆದಿದೆ. ಎಂಆರ್​ಪಿಎಲ್ ಕಚ್ಚಾ ತೈಲ ಹಡಗಿನ ಪೈಪ್ ಲೈನ್ ನಿರ್ವಹಣೆ ಮಾಡುತ್ತಿದ್ದ ಟಗ್ ಬೋಟ್, ನಿನ್ನೆ ಮಂಗಳೂರು ಹೊರವಲಯದ ಸುರತ್ಕಲ್ನಿಂದ 17 ನಾಟೆಕಲ್ ಮೈಲಿ ದೂರದಲ್ಲಿ ಮಗುಚಿಬಿದ್ದಿತ್ತು.

ಮಂಗಳೂರಿನ ತೈಲ ಶುದ್ದೀಕರಣ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟಗ್ ಬೋಟ್ ಇದಾಗಿದ್ದು, ಎಂಆರ್​​ಪಿಎಲ್ ಗೆ ತೈಲ ಹೊತ್ತು ತರುವ ಹಡಗಿಗೆ ಆಳಸಮುದ್ರದಲ್ಲಿ ಪೈಪ್ ಜೋಡಿಸುವ ಕಾರ್ಯ ಮಾಡುತ್ತಿತ್ತು. ಚಂಡಮಾರುತದ ಎಚ್ಚರಿಕೆ ನೀಡಿದ್ದ ಹೊರತಾಗಿಯೂ ಈ ಬೋಟ್ ಆಳಸಮುದ್ರಕ್ಕೆ ತೆರಳಿತ್ತು. ಬೋಟ್​ನಲ್ಲಿದ್ದ 8 ಜನರ ಪೈಕಿ ಇಬ್ಬರು, ಟಗ್ ಮಗುಚಿದ ಬೆನ್ನಲ್ಲೇ ಟ್ಯೂಬ್​ನಲ್ಲಿ ಈಜಿ ಜೀವ ಉಳಿಸಿಕೊಂಡು ಉಡುಪಿ ಜಿಲ್ಲೆಯ ಮಟ್ಟು ಕೊಪ್ಲ ಪರಿಸರದಲ್ಲಿ ದಡ ಸೇರಿದ್ದರು. ನಾಪತ್ತೆಯಾಗಿದ್ದ 6 ಮಂದಿಯ ಪೈಕಿ ಒರ್ವನ ಮೃತದೇಹ ಪತ್ತೆಯಾಗಿದೆ. ಉಳಿದ 5 ಜನರಿಗಾಗಿ ಆಳಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

 

The post ಕರಾವಳಿಯಲ್ಲಿ ತಗ್ಗಿದ ತೌಕ್ತೆ ಅಬ್ಬರ, ನಾಪತ್ತೆಯಾದ ಐವರಿಗೆ ಮುಂದುವರಿದ ಶೋಧ appeared first on News First Kannada.

Source: newsfirstlive.com

Source link