ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕ ತೆರೆಯಲು ಎಲಾನ್ ಮಸ್ಕ್​ಗೆ ಮುರುಗೇಶ್ ನಿರಾಣಿ ಆಹ್ವಾನ | Karnataka Industry Minister Murugesh Nirani Invites Elon Musk to Karnataka to Set Up Factory


ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕ ತೆರೆಯಲು ಎಲಾನ್ ಮಸ್ಕ್​ಗೆ ಮುರುಗೇಶ್ ನಿರಾಣಿ ಆಹ್ವಾನ

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಉದ್ಯಮಿ ಎಲಾನ್ ಮಸ್ಕ್

ಬೆಂಗಳೂರು: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಆರಂಭಿಸಲು ಅಮೆರಿಕದ ಖ್ಯಾತ ಉದ್ಯಮಿ, ಸ್ಪೇಸ್​-ಎಕ್ಸ್​ ಮಾಲೀಕ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ (Elon Musk) ಅವರಿಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ (Murugesh Nirani) ಆಹ್ವಾನ ನೀಡಿದ್ದಾರೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳಿವೆ. 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್ (Electrict Vehicle) ಸ್ಟಾರ್ಟ್​ಅಪ್​ಗಳಿವೆ. ಹೀಗಾಗಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ತೆರೆಯಲು ಕರ್ನಾಟಕವೇ (Karnataka) ಸೂಕ್ತ ಸ್ಥಳ ಎಂದು ಮುರುಗೇಶ್ ನಿರಾಣಿ ಟ್ವೀಟ್ ಮೂಲಕ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಆಹ್ವಾನ ನೀಡಿದ್ದಾರೆ.

ಎಲಾನ್​ ಮಸ್ಕ್​ಗೆ ಆಮಂತ್ರಣ ನೀಡಿದ್ದ ಮಹಾರಾಷ್ಟ್ರ, ತೆಲಂಗಾಣ
ಎಲಾನ್ ಮಸ್ಕ್ ಅವರನ್ನು ಮಹಾರಾಷ್ಟ್ರದ ನೀರಾವರಿ ಸಚಿವ ಮತ್ತು ಎನ್​ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಇತ್ತೀಚೆಗೆ ತಮ್ಮ ರಾಜ್ಯಕ್ಕೆ ಸ್ವಾಗತಿಸಿದ್ದರು. ‘ಮಹಾರಾಷ್ಟ್ರವು ಭಾರತದ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಿಮ್ಮ ಕಂಪನಿ ಸ್ಥಾಪನೆಯಾಗಲು ನಿಮಗೆ ಬೇಕಿರುವ ಎಲ್ಲ ಬಗೆಯ ನೆರವನ್ನು ಮಹಾರಾಷ್ಟ್ರದಿಂದ ನಾವು ಕೊಡುತ್ತೇವೆ. ನಿಮ್ಮ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಬೇಕೆಂದು ಕೋರುತ್ತೇವೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಹೂಡಿಕೆ ಮಾಡಲು ಮಹಾರಾಷ್ಟ್ರ ಅತ್ಯುತ್ತಮ ಸ್ಥಳ ಎನಿಸಿದೆ ಎಂದು ಸಚಿವರು ಟ್ವೀಟ್​ನಲ್ಲಿ ವಿವರಿಸಿದ್ದರು. ನಿನ್ನೆಯಷ್ಟೇ (ಜ.15) ತೆಲಂಗಾಣ ಸರ್ಕಾರ ಎಲಾನ್ ಮಸ್ಕ್​ಗೆ ಇದೇ ರೀತಿಯ ಸ್ವಾಗತ ಕೋರಿತ್ತು.

‘ನಿಮ್ಮ ಕಾರ್ ಭಾರತದಲ್ಲಿ ಯಾವಾಗ ಸಿಗುತ್ತದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಅವರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಮಸ್ಕ್, ‘ಭಾರತದಲ್ಲಿ ಸರ್ಕಾರದ ನಿಯಮಗಳ ಅಡೆತಡೆ ಎದುರಿಸುತ್ತಿದ್ದೇನೆ’ ಎಂದು ಜನವರಿ 13ರಂದು ಉತ್ತರಿಸಿದ್ದರು. ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮಸ್ಕ್ ನಿರ್ಧಾರಕ್ಕೆ ಪೂರಕವಾಗಿ ಸ್ಪಂದಿಸಿದ್ದ ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್, ‘ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಸ್ಕ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ’ ಎಂದಿದ್ದರು.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕದ ಆರಂಭಿಸುವುದಾಗಿ ಎಲಾನ್ ಮಸ್ಕ್ 2020ರಲ್ಲಿ ಘೋಷಿಸಿದ್ದರು. ಇದಕ್ಕಾಗಿ ಟೆಸ್ಲಾ ಕಂಪನಿಯ ಅಧೀನದಲ್ಲಿ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು.

TV9 Kannada


Leave a Reply

Your email address will not be published. Required fields are marked *