
ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು
ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ 500ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡಿದ್ದರೂ, ರೈತರಿಗೆ ಧೈರ್ಯ ತುಂಬಲು ಆಗಮಿಸಿಲ್ಲ.
ಚಿಕ್ಕಬಳ್ಳಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ (Rain) ಹಲವೆಡೆ ಬೆಳೆ ಸಂಪೂರ್ಣ ನಾಶವಾಗಿದ್ದು, ಪರಿಹಾರ ನೀಡುವಂತೆ ರೈತರು (Farmers) ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇನ್ನು ಧಾರಾಕಾರ ಮಳೆ ಸುರಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಿರುಗಿ ನೋಡಲಿಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ 500ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡಿದ್ದರೂ, ರೈತರಿಗೆ ಧೈರ್ಯ ತುಂಬಲು ಆಗಮಿಸಿಲ್ಲ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇದ್ದು ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಹಾನಿಯಾದ ಪ್ರದೇಶಗಳಿಗೆ ಸಚಿವರ ಭೇಟಿ:
ದಾವಣಗೆರೆ: 4 ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 4 ದಿನಗಳ ಕಾಲ ಸುರಿದ ಮಳೆಗೆ 197 ಮನೆಗಳಿಗೆ ಹಾನಿಯಾಗಿದೆ. 30 ಮನೆಗಳು ಸಂಪೂರ್ಣ ಕುಸಿದಿವೆ. ಮೂರು ಜಾನುವಾರುಗಳು ಸಾವನ್ನಪ್ಪಿದ್ದರೆ, ಒಂದು ಶಾಲೆ ಕುಸಿದು ಹೋಗಿದೆ. ಮಳೆಯಿಂದಾಗಿ 41 ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲೆಯಲ್ಲಿ ಒಟ್ಟು 2632.98 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.