ಬೆಂಗಳೂರು: ರಾಜ್ಯದಲ್ಲಿ ಜೂನ್ 14ಕ್ಕೂ ಮೊದಲೇ ಅನ್‍ಲಾಕ್ ಮಾಡುವುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸುಳಿವು ಕೊಟ್ಟಿದ್ದು ಹಂತ ಹಂತವಾಗಿ ವಾಣಿಜ್ಯ ಚಟುವಟಿಕೆಗಳು ಮತ್ತೆ ತೆರೆದುಕೊಳ್ಳಲಿದೆ.

ಜೂನ್ 7ರ ಲಾಕ್‍ಡೌನ್ ಅನ್ನು ಜೂನ್ 14ಕ್ಕೆ ಮೂರು ದಿನಗಳ ಹಿಂದೆಯಷ್ಟೇ ಸಿಎಂ ವಿಸ್ತರಿಸಿದ್ದರು. ಈಗ ದೆಹಲಿ ಮತ್ತು ನೆರೆಯ ಮಹಾರಾಷ್ಟ್ರಗಳು ನಿಧಾನವಾಗಿ ಅನ್‍ಲಾಕ್ ಆಗುತ್ತಿವೆ. ಜೊತೆಗೆ, ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ರೇಟ್ ಶೇ.10ಕ್ಕಿಂತ ಕೆಳಗಿಳಿದಿದೆ. ಈ ನಿಟ್ಟಿನಲ್ಲಿ, 4-5 ದಿನಗಳಲ್ಲಿ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ. ಕಡಿಮೆ ಸೋಂಕಿರುವ ಕಡೆ ಅನ್‍ಲಾಕ್ ಮಾಡುವ ಬಗ್ಗೆ ಸಮಾಲೋಚನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಅನ್‍ಲಾಕ್ ಸಂಬಂಧ ಸೋಮವಾರ ಮಧ್ಯಾಹ್ನ 2:30ಕ್ಕೆ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ಕರೆದಿದ್ದಾರೆ. ಜಿಲ್ಲಾವಾರು ಹಂತ ಹಂತವಾಗಿ ಅನ್‍ಲಾಕ್ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಆದರೆ ಆರೋಗ್ಯ ಸಚಿವ ಸುಧಾಕರ್ ಮಾತ್ರ, ದಿನಕ್ಕೆ 5 ಸಾವಿರಕ್ಕಿಂತ ಕಡಿಮೆ ಕೇಸ್ ಬಂದರಷ್ಟೇ ಅನ್‍ಲಾಕ್. ಜೂನ್ 14ರ ಬಳಿಕ ಅನ್‍ಲಾಕ್ ಬಗ್ಗೆ ಯೋಚನೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಇಬ್ಬರೂ ವರ್ಗಾವಣೆ- ಸರ್ಕಾರದಿಂದ ಆದೇಶ

ಸರ್ಕಾರದ ಪ್ಲಾನ್ ಏನು?
ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದರೆ ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಜಾಸ್ತಿಯಿದೆ. ಹೀಗಾಗಿ ಸರ್ಕಾರದ ಬಳಿ ಮೂರು ಅನ್‍ಲಾಕ್ ಪ್ಲಾನ್ ಇದೆ. ಬೆಂಗಳೂರಿಗೆ ಪ್ರತ್ಯೇಕವಾದ ಅನ್‍ಲಾಕ್ ಮಾಡಿದರೆ ಸೋಂಕು ಕಡಿಮೆ ಇರುವ ಜಿಲ್ಲೆಗಳಿಗೆ ಪ್ರತ್ಯೇಕ ಅನ್‍ಲಾಕ್ ಮಾಡಲು ಮುಂದಾಗಿದೆ. ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಷರತ್ತುಬದ್ಧ ಅನ್‍ಲಾಕ್ ಮಾಡುವ ಸಾಧ್ಯತೆಯಿದೆ.

ಅನ್‍ಲಾಕ್ ಹೇಗೆ?
ಬೆಂಗಳೂರಲ್ಲಿ ಶೇ.3, ರಾಜ್ಯದಲ್ಲಿ ಶೇ.6ಕ್ಕೆ ಪಾಸಿಟಿವಿಟಿ ಇಳಿದರೆ ಅನ್‍ಲಾಕ್ ಆಗಲಿದೆ. ಸದ್ಯ ಬೆಂಗಳೂರಿನಲ್ಲಿ ಶೇ.4.96, ಕೆಲ ಜಿಲ್ಲೆಗಳಲ್ಲಿ ಶೇ.39ರಷ್ಟು ಪಾಸಿಟಿವಿಟಿ ರೇಟ್ ಇದೆ. ನಾಲ್ಕೈದು ದಿನಗಳಲ್ಲಿ ಪಾಸಿಟಿವಿಟಿ ರೇಟ್ ಮತ್ತಷ್ಟು ಇಳಿಯುವ ಸಾಧ್ಯತೆಯಿದ್ದು ಪ್ರತಿ ಹಂತಕ್ಕೂ 3 ವಾರಗಳ ಅಂತರದಲ್ಲಿ 3 ಹಂತಗಳ ಅನ್‍ಲಾಕ್‍ಗೆ ತಜ್ಞರ ಸಲಹೆ ನೀಡಿದ್ದಾರೆ. ಸಕ್ರಿಯ ಕೇಸ್, ಕ್ವಾರಂಟೈನ್ ಡೇಟಾ ನೋಡಿ ಅನ್‍ಲಾಕ್ ಶುರು ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಯಾವ ಹಂತದಲ್ಲಿ ಏನು?
ಹಂತ 1: ದಿನಸಿ ಅಂಗಡಿ, ಕೈಗಾರಿಕೆಗಳು, ಗಾರ್ಮೆಂಟ್ಸ್, ಫ್ಯಾಕ್ಟರಿಗಳು ಓಪನ್
ಹಂತ 2: ಹೋಟೆಲ್, ಆಟೋ, ಕ್ಯಾಬ್ ಸಂಚಾರ. ಪಾಸಿಟಿವಿಟಿ ರೇಟ್ ಆಧರಿಸಿ ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರ
ಹಂತ 3: ಬಾರ್ ರೆಸ್ಟೋರೆಂಟ್, ಕ್ಲಬ್‍ಗೆ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ

ಕಡಿಮೆ ಸೋಂಕು:
ರಾಜ್ಯದಲ್ಲಿ ಸೋಂಕಿನ ಪ್ರಮಾಣ ತಗ್ಗುತ್ತಿದ್ದು ಪಾಸಿಟಿವಿಟಿ ರೇಟ್ ಶೇ.9.69ಕ್ಕೆ ಇಳಿದೆ. ಏಪ್ರಿಲ್ 15ರ ಬಳಿಕ ನಿನ್ನೆಗೆ(ಶನಿವಾರ) ಇದು ಶೇ.10ಕ್ಕೆ ಇಳಿದಿದೆ. ಬಹುತೇಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಗಣನೀಯವಾಗಿ ಇಳಿಕೆ ಆಗುತ್ತಿದೆ.   ಬೀದರ್ ಶೇ.1, ಕಲಬುರಗಿ ಶೇ.3, ಬೆಂಗಳೂರಿನಲ್ಲಿ ಶೇ.4.95 ಪಾಸಿಟಿವಿಟಿ ರೇಟ್ ಇದೆ.

The post ಕರ್ನಾಟಕದಲ್ಲಿ ಮೂರು ರೀತಿಯಲ್ಲಿ ಅನ್‍ಲಾಕ್ – ಸರ್ಕಾರದ ಪ್ಲಾನ್ ಏನು? appeared first on Public TV.

Source: publictv.in

Source link