ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಹಾಹಾಕಾರ ಹೆಚ್ಚಾಗಿದೆ. ಇದರ ನಡುವೆ ಸರ್ಕಾರದ ಗೊಂದಲದಿಂದ ಜನ ವ್ಯಾಕ್ಸಿನ್‍ಗಾಗಿ ಅಲೆಯುವಂತಾಗಿದೆ. ಆದರೆ ಸರ್ಕಾರ ಮಾತ್ರ ವ್ಯಾಕ್ಸಿನ್ ಕೊರತೆಯನ್ನು ಒಪ್ಪಿಕೊಳ್ತಾನೇ ಇಲ್ಲ. ರಾಜ್ಯದಲ್ಲಿ ಇಷ್ಟರವರೆಗೆ ಬೆಡ್ ಪ್ರಾಬ್ಲಂ, ಆಕ್ಸಿಜನ್ ಪ್ರಾಬ್ಲಂ, ವೆಂಟಿಲೇಟರ್ ಪ್ರಾಬ್ಲಂ ಇತ್ತು. ಈಗ ಅದ್ಕೆ ವ್ಯಾಕ್ಸಿನ್ ಸಮಸ್ಯೆ ಕೂಡ ಸೇರಿದೆ.

ಹೌದು. ರಾಜ್ಯದಲ್ಲಿ ದಿನೇದಿನೇ ಲಸಿಕೆ ಹಾಹಾಕಾರ ಹೆಚ್ಚಾಗ್ತಿದೆ. ಎಲ್ಲೆಡೆ ನೋ ಸ್ಟಾಕ್ ಅನ್ನೋ ಬೋರ್ಡ್ ರಾರಾಜಿಸ್ತಿದೆ. ಮೊನ್ನೆ ಮೊನ್ನೆಯಷ್ಟೇ ಲಸಿಕೆ ಸ್ಟಾಕ್ ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡೋ ಅಭಿಯಾನವನ್ನು ಸರ್ಕಾರ ಆರಂಭಿಸಿತ್ತು. ಸರ್ಕಾರದ ಈ ಯಡವಟ್ಟಿಗೆ ಜನ ಅಲೆದಾಡುವಂತಾಗಿದೆ.

ವ್ಯಾಕ್ಸಿನ್‍ಗಾಗಿ ಬೊಬ್ಬೆ ಹೊಡೀಬೇಡಿ ಅಂತ ಸಿಎಂ ಹೇಳಿದ ಬಳಿಕ ಡಿಸಿಎಂ ಅಶ್ವಥ್ ನಾರಾಯಣ್ ಸಮರ್ಥನೆಗಿಳಿದಿದ್ದಾರೆ. ರಾಜ್ಯದಲ್ಲಿ ವ್ಯಾಕ್ಸಿನ್‍ಗಾಗಿ ಇಷ್ಟೆಲ್ಲಾ ಜನ ಪರದಾಡ್ತಾ ಇದ್ರೂ ಲಸಿಕೆ ಯಾವುದೇ ಕೊರತೆ ಇಲ್ಲ ಅಂತಾ ಹೇಳಿದ್ದಾರೆ. ಆದರೆ ಲಸಿಕೆ ಕೊರತೆ ಇರೋದನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. ಲಸಿಕೆ ಲಸಿಕೆ ಪೂರೈಕೆಯಲ್ಲಿ ಕೆಲ ವ್ಯತ್ಯಯ ಆಗಿದೆ. ಏಕಾಏಕಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ ಎಂದಿದ್ದಾರೆ.

ಕೊರೊನಾ ಲಸಿಕೆ ಕೊರತೆ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಂದರೆ ಕೊಡ್ತೇವೆ. ಬರದಿದ್ದರೆ ಏನ್ ಮಾಡೋಣ, 3 ಕೋಟಿ ಲಸಿಕೆಗೆ ಆರ್ಡರ್ ಮಾಡಿದ್ದೇವೆ. ಯಾವಾಗ ಬರುತ್ತೆ ಅಂತ ಗೊತ್ತಿಲ್ಲ ಅಂತ ಸಿಎಸ್ ರವಿಕುಮಾರ್ ಹೇಳಿದ್ದಾರೆ. ಜೊತೆಗೆ ನಮ್ಮ ಕೈಯಲ್ಲಿ ಏನೆಲ್ಲಾ ಆಗುತ್ತೋ ಎಲ್ಲಾ ಪ್ರಯತ್ನ ಮಾಡ್ತಿದ್ದೀವಿ. ಈಗ ಇರುವಷ್ಟು ಕೊಡ್ತಿದ್ದೇವೆ, ಎಲ್ಲವೂ ಉತ್ಪಾದನೆ ಮೇಲೆ ಅವಲಂಬಿತವಾಗಿದೆ ಎಂಬ ಸತ್ಯವನ್ನು ಇದ್ದಂಗೆಯೇ ಜನರ ಮುಂದಿಟ್ಟಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಲಸಿಕೆ ಹಾಹಾಕಾರ ಎದ್ದಿದೆ. ವ್ಯಾಕ್ಸಿನ್ ಇದೆ, ಎಲ್ಲರಿಗೂ ಕೊಡ್ತೀವಿ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಅಂತಾ ಸರ್ಕಾರದ ಪ್ರತಿನಿಧಿಗಳು ಹೇಳ್ತಿದ್ದಾರೆ. ಆದರೆ ವಾಸ್ತವ ಸ್ಥಿತಿಯಲ್ಲಿ ಜನ ಅಲೆದಾಡುವಂತಾಗಿದೆ.

The post ಕರ್ನಾಟಕದಲ್ಲಿ ಹೆಚ್ಚಾದ ವ್ಯಾಕ್ಸಿನ್ ಹಾಹಾಕಾರ- ಲಸಿಕೆ ಬಗ್ಗೆ ಸುಳ್ಳು ಹೇಳ್ತಿದ್ಯಾ ಸರ್ಕಾರ..? appeared first on Public TV.

Source: publictv.in

Source link