ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ: ಇಲ್ಲಿ ಲಂಚ ತಿಂದ್ರೆ ಅಪರಾಧವಲ್ಲ, ಅದನ್ನು ಬಾಯಿಂದ ಹೇಳಿದರೆ ಅಪರಾಧ -ಮಾಜಿ ಸಿಎಂ ಸಿದ್ಧರಾಮಯ್ಯ | New law enacted in Karnataka: Bribery is not a crime here, mouthing it is a crime Ex CM Siddaramaiah


ಕೈ ಕಾರ್ಯಕರ್ತರ ಬಂಧನ ಹಿನ್ನೆಲೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ಸಿದ್ದರಾಮಯ್ಯ ಕರೆ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರ ಬಂಧಿಸಿದ್ದಕ್ಕೆ ಸಿದ್ದರಾಮಯ್ಯ ಗರಂ ಆಗಿದ್ದು, ಈ ರೀತಿ ಕಾರ್ಯಕರ್ತರನ್ನು ಬಂಧಿಸುವುದು ಸರಿಯಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ: ಇಲ್ಲಿ ಲಂಚ ತಿಂದ್ರೆ ಅಪರಾಧವಲ್ಲ, ಅದನ್ನು ಬಾಯಿಂದ ಹೇಳಿದರೆ ಅಪರಾಧ -ಮಾಜಿ ಸಿಎಂ ಸಿದ್ಧರಾಮಯ್ಯ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ. ಲಂಚ ತಿಂದಿದ್ದನ್ನು ಹೇಳಿದರೆ ಅಪರಾಧ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷದ ಕಾರ್ಯಕರ್ತರ ಬಂಧನ ಖಂಡಿಸಿ ಟ್ವೀಟ್ ಮಾಡಿದ್ದಾರೆ. ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ. ಎಷ್ಟು ಜನರನ್ನ ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲುಕಟ್ಟಿಸ್ತಿರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ಬಂಡೆದಿದ್ದಾರೆ, ಎಚ್ಚರ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.        ಬಿಜೆಪಿ ಲಂಚಗುಳಿತನ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್​ ಅಂಟಿಸುತ್ತೇನೆ. ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ ಎಂದು ಸಿದ್ದರಾಮಯ್ಯ ಸವಾಲಾಕಿದರು. ನನ್ನ ಮತ್ತು ಡಿ.ಕೆ.ಶಿವಕುಮಾರ್​ ಬಗ್ಗೆ ಪೋಸ್ಟರ್​ ಅಂಟಿಸಿದ್ದರಲ್ಲಾ. ಅದರ ಬಗ್ಗೆ ಸಿಎಂ ಬೊಮ್ಮಾಯಿ ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ. ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರವಾಗಿದೆ ಎಂದು ಹೇಳಿದರು.

ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ರಾಜಕೀಯ ವ್ಯವಸ್ಥೆಯಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಇದನ್ನು ಕೀಳುಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತೆ. ಮುಖ್ಯಮಂತ್ರಿಗಳೇ ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿದ್ರಿ. ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ ಎಂದು ಟ್ವಿಟರ್​ನಲ್ಲಿ ಸಿಎಂ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.

ಪೊಲೀಸ್ ಆಯಕ್ತ ಪ್ರತಾಪ್ ರೆಡ್ಡಿಗೆ ಸಿದ್ದರಾಮಯ್ಯ ತಾಕೀತು

ಕೈ ಕಾರ್ಯಕರ್ತರ ಬಂಧನ ಹಿನ್ನೆಲೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ಸಿದ್ದರಾಮಯ್ಯ ಕರೆ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರ ಬಂಧಿಸಿದ್ದಕ್ಕೆ ಸಿದ್ದರಾಮಯ್ಯ ಗರಂ ಆಗಿದ್ದು, ಈ ರೀತಿ ಕಾರ್ಯಕರ್ತರನ್ನು ಬಂಧಿಸುವುದು ಸರಿಯಲ್ಲ. ನನ್ನ ವಿರುದ್ಧವೂ ಕೆಟ್ಟದಾಗಿ ಬರೆದಿದ್ದಾರೆ ಯಾಕೆ ಬಂಧಿಸಿಲ್ಲ? ರಾಜಕೀಯದಲ್ಲಿ ಇಂತಹ ಆರೋಪ ಮಾಡುವುದು ಸಹಜ. ನೀವು ಹೀಗೆ ಮಾಡಿದ್ರೆ ನಾಳೆ ನಾನೇ ಪೋಸ್ಟರ್ ಅಂಟಿಸುತ್ತೇನೆ. ನಾಳೆ ಶಾಸಕರು ಸರ್ಕಾರಿ ಕಚೇರಿಗೆ ಪೋಸ್ಟರ್ ಅಂಟಿಸುತ್ತೇವೆ. ನಮ್ಮನ್ನು ಬಂಧಿಸಿ ನೋಡೋಣ. ಕೂಡಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡಿ ಎಂದು ಪೊಲೀಸ್ ಆಯಕ್ತ ಪ್ರತಾಪ್ ರೆಡ್ಡಿಗೆ ಸಿದ್ದರಾಮಯ್ಯ ತಾಕೀತು ಮಾಡಿದರು.

100 ಪರ್ಸೆಂಟ್ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕ ಬಿಡುಗಡೆ

ಕಾಂಗ್ರೆಸ್​ನ ಪೇಸಿಎಂ ಅಭಿಯಾನಕ್ಕೆ ರಾಜ್ಯ ಬಿಜೆಪಿ ಕೌಂಟರ್ ನೀಡಿದ್ದು, 100 ಪರ್ಸೆಂಟ್ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕವನ್ನು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಬಿಡುಗಡೆ ಮಾಡಿದರು. ಸುಮಾರು 28 ಪುಟಗಳ ಭ್ರಷ್ಟಾಚಾರ ಆರೋಪದ ಪುಸ್ತಕ ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯ ಅವಧಿಯಲ್ಲಿನ ಹಗರಣಗಳ ವಿವರವನ್ನು ಪುಸ್ತಕ ಒಳಗೊಂಡಿದೆ. ಬಳಿಕ ಮಾತನಾಡಿದ ನಳೀನ್ ಕುಮಾರ್ ಕಟೀಲ್​​, ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಪುಸ್ತಕ ಬಿಡುಗಡೆ ಮಾಡಿದ್ದೇನೆ. ಪೇ ಸಿಎಂ ಎಂದು ಆರೋಪ ಮಾಡಿ ರಾಜ್ಯಕ್ಕೆ ಅವಮಾನ ಮಾಡಿದ್ದೀರಿ. ಪೇ ಸಿಎಂ ಅಂದರೆ ಪೇ ಕಾಂಗ್ರೆಸ್ ಮೇಡಂ ಅಂತಾ ಎಂದು ಕಟೀಲ್ ಹೇಳಿದ್ದು, ಕಾಂಗ್ರೆಸ್ ಕ್ಯಾಂಪೇನ್​ಗೆ ರಾಜ್ಯ ಬಿಜೆಪಿ ಹೊಸ ವ್ಯಾಖ್ಯಾನ ನೀಡಿದೆ.

ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್

ಕಾಂಗ್ರೆಸ್ ಕಾಲದಲ್ಲಿ ಹಲವು ಹಗರಣಗಳನ್ನು ಮುಚ್ಚಿಡಲಾಯ್ತು. ಅವರ ಕಾಲದ ಹಗರಣಗಳ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಲಿದೆ. ನಮ್ಮ ಸರ್ಕಾರದ ಅಭಿವೃದ್ಧಿ ನೋಡಿ ಸುಳ್ಳು ಆರೋಪಗಳನ್ನು ಕಾಂಗ್ರೆಸ್ ಮಾಡ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೆಂಪಯ್ಯ ಮೂಲಕ‌ ಅಧಿಕಾರ ನಡೆಸಿದ್ರು. ಮೂರು ಕೆಂಪಯ್ಯ ಮೂಲಕ ಸಿದ್ದರಾಮಯ್ಯ ರಾಜಕಾರಣ ಮಾಡ್ತಿದ್ದಾರೆ. 40% ಕಮೀಷನ್ ಆರೋಪಕ್ಕೆ ಕಾಂಗ್ರೆಸ್ ದಾಖಲೆ ಕೊಡಲಿ. ಕಾಂಗ್ರೆಸ್​ನವರು ದಾಖಲೆ ಕೊಡದೇ ಮಾತಾಡ್ತಿದ್ದಾರೆ. ಉಗ್ರವಾದವನ್ನು ಪೋಷಣೆ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್​ನ ಪಾದಯಾತ್ರೆ ರಾಜಕಾರಣ ಬಹಿರಂಗವಾಗಿದೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ಹೇಳಿದರು.

ದೇಶ ವಿಭಜನೆ ಮಾಡಿದ ಶಾಪ‌ ಕಾಂಗ್ರೆಸ್​ಗೆ ಇದೆ. ಜಾತಿ ಜಾತಿಗಳನ್ನು ಒಡೆದು ಹಾಕಿದ ಶಾಪ ಕಾಂಗ್ರೆಸ್​ಗೆ ಇದೆ. ಕಾಂಗ್ರೆಸ್ ತನ್ನ ಪಾಪ ಕಳೆಯಲು ಭಾರತ್ ಜೋಡೋ ಯಾತ್ರೆ ಮಾಡ್ತಿದೆ. ಮುಖ್ಯವಾಗಿ ಕಾಂಗ್ರೆಸ್ ಜೋಡೋ ಆಗಬೇಕು. ಪೇಸಿಎಂ ಅಂತ ನಿನ್ನೆಯಿಂದ ಶುರುಮಾಡಿದಾರೆ. ಹಿಂದೆಲ್ಲಾ ಸಚಿವರ ವಿರುದ್ಧ ಆರೋಪ ಮಾಡ್ತಿದ್ರು. ಆದ್ರೆ ಅವರ ಆರೋಪಗಳಿಗೆ ದಾಖಲೆ ಇಲ್ಲ. ಪೇಸಿಎಂ ಪೋಸ್ಟರ್ ಮಾಡಿದ ಏಜೆನ್ಸಿ ವಿರುದ್ಧ ಕೇಸ್ ಹಾಕುತ್ತೇವೆ. ಏಜೆಂಟರ ಮೂಲಕ ಕೇಸ್ ಹಾಕಿಸುತ್ತೇವೆ. ರೀಡೂ‌ ಕೇಸ್ ಬಗ್ಗೆ ಇನ್ನೂ ದಾಖಲೆ ಕಲೆ ಹಾಕ್ತಿದ್ದೇವೆ. ದಾಖಲೆ ಸಂಗ್ರಹಿಸಿ ಕೋರ್ಟ್​ನಲ್ಲಿ ಪ್ರಶ್ನೆ ಮಾಡುತ್ತೇವೆ. ರೀಡೂ ಕೇಸ್ ವಿರುದ್ಧ ಕೋರ್ಟ್ ನಲ್ಲಿ ಕಾನೂನು ಸಮರ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.