ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಹೆಚ್ಚು‘ವರಿ’ಯಾದ ಅಭ್ಯರ್ಥಿಗಳು, ಎಲ್ಲರೂ ಕಣದಲ್ಲಿದ್ದಾರೆ! ಮುಂದೇನು? | Biennial Rajya Sabha Elections from Karnataka legislature JDS and Congress field extra candidate battle intensifies


ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಹೆಚ್ಚು‘ವರಿ’ಯಾದ ಅಭ್ಯರ್ಥಿಗಳು, ಎಲ್ಲರೂ ಕಣದಲ್ಲಿದ್ದಾರೆ! ಮುಂದೇನು?

ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಹೆಚ್ಚು‘ವರಿ’ಯಾದ ಅಭ್ಯರ್ಥಿಗಳು, ಎಲ್ಲರೂ ಕಣದಲ್ಲಿದ್ದಾರೆ! ಮುಂದೇನು?

ಮಲ್ಲಿಕಾರ್ಜುನ ಖರ್ಗೆ ಮೂಲಕ ಹೈಕಮಾಂಡ್ ಬಳಿ ಹೋದ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ತಮ್ಮ ಪಟ್ಟು ಬಿಗಿಗೊಳಿಸಿ, ಈ ಕಠಿಣ ನಿರ್ಧಾರಕ್ಕೆ ಬಂದಿರುವುದು ಎದ್ದುಕಾಣುತ್ತಿದೆ. ಮುಂದಿನ ಚುನಾವಣಾ ದೃಷ್ಟಿಯಿಂದ ಜೆಡಿಎಸ್ ಗೆ ಬೆಂಬಲ ಬೇಡ ಎಂದು ಈ ನಾಯಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು: ಕರ್ನಾಟಕದ ವಿಧಾನಮಂಡಲದಿಂದ ರಾಜ್ಯಸಭಾ ಚುನಾವಣೆಗೆ ಜೂನ್ 10ರಂದು ಚುನಾವಣೆ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಸಿರುವ ಯಾವುದೇ ಅಭ್ಯರ್ಥಿ ನಾಮಪತ್ರವನ್ನು ವಾಪಸ್​ ಪಡೆದಿಲ್ಲ. ಮುಂದಿನ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂ.10ರಂದೇ ಸಂಜೆ 5ಕ್ಕೆ ಮತ ಎಣಿಕೆ ನಡೆಸಿ, ಅಂದೇ ಸಂಜೆ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಹೇಳಿದ್ದಾರೆ.

ಅಲ್ಲಿಗೆ ಹಾಲಿ ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಪ್ರತಿಷ್ಠಿತ ಅಭ್ಯರ್ಥಿಗಳು ಅನಾಯಾಸವಾಗಿ ಗೆಲುವು ಸಾಧಿಸುತ್ತಾರಾದರೂ ಈಗ ಕಾಡುತ್ತಿರುವುದು ಪ್ರಥಮ ಪ್ರಾಶಸ್ತ್ಯದ ಉಳಿಕೆ ಮತಗಳ ಜೊತೆಗೆ, ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಯಾರು ಹೆಚ್ಚು ಎಳೆಯುವಲ್ಲಿ ಯಶಸ್ವಿಯಾಗುತ್ತಾರೋ ಅವರೇ ವಿಜಯ ಸಾಧಿಸುವುದು ನಿಶ್ಚಿತವಾಗಿದೆ. ಆದರೆ ಇದು ಸಂಪೂರ್ಣ ಸಸ್ಪೆನ್ಸ್​ ಆಗಿದೆ. ಮುಖ್ಯವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ಸಂಧಾನ ಮಾತುಕತೆ ಕೊನೆಗೂ ಸಫಲವಾಗದೆ, ಎರಡೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿಯಲು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂಪಡೆಯದಿರುವುದು ನೋಡಿದರೆ ಜೆಡಿಎಸ್-ಕಾಂಗ್ರೆಸ್​ ಹೈಕಮಾಂಡ್ ಹಂತದ ಇನ್ ಫ್ಲೂಯೆನ್ಸ್ ತಂತ್ರ ಸಹ ಫಲಿಸಿಲ್ಲ ಎಂಬುದು ಕಣ್ಣಿಗೆ ರಾಚುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಮೂಲಕ ಸೋನಿಯಾ ಗಾಂಧಿ ಕದ ತಟ್ಟಿದ್ದ ಜೆಡಿಎಸ್
ಮುಂದಿನ ಚುನಾಚಣೆ ಗಮನದಲ್ಲಿಟ್ಟುಕೊಂಡು ಕೈ ಅಭ್ಯರ್ಥಿ ಹಿಂಪಡೆಯುವ ಬಗ್ಗೆ ಒತ್ತಡ ಹಾಕಿತ್ತು. ಆದರೆ ಅಭ್ಯರ್ಥಿ ಹಿಂಪಡೆಯಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಕಾರ ಸೂಚಿಸಿ, ಈ ಬಾರಿ ಜೆಡಿಎಸ್ ಪಕ್ಷವೇ ತನ್ನ ಅಭ್ಯರ್ಥಿಯನ್ನು ಕಣದಿಂದ ವಾಪಸ್​ ಪಡೆಯಬೇಕು ಎಂಬ ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ.

ಅಭ್ಯರ್ಥಿ ಹಿಂಪಡೆದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಮುಸ್ಲಿಂ ಸಮುದಾಯ ಮತ್ತೆ ಕಾಂಗ್ರೆಸ್ ಮೇಲೆ ಮುನಿಸಾಗಬಹುದು. ಜೆಡಿಎಸ್ ಗೆ ಬೆಂಬಲಿಸಿದರೆ ಮುಸ್ಲಿಂ ಸಮುದಾಯ ಮತಗಳು ಸ್ಥಿರವಾಗಿ ಇರುವುದಿಲ್ಲ. ದ್ವಂದ್ವ ನಿಲುವಿನ ಜೆಡಿಎಸ್ ಪಕ್ಷವು ಕಾಂಗ್ರೆಸ್ ಬಳಸಿಕೊಂಡು ಲಾಭ ಮಾಡಿಕೊಳ್ಳಲು ಯತ್ನಿಸಿದೆ. ಪರಿಸ್ಥಿತಿಗೆ ತಕ್ಕಂತ ನಿರ್ಧಾರ ಬದಲಾಯಿಸಿದರೆ ರಾಜಕೀಯವಾಗಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಜೆಡಿಎಸ್ ನ ಜಾತ್ಯಾತೀತ ವಿಶ್ವಾಸಾರ್ಹತೆಯೇ ಪ್ರಶ್ನೆಯಲ್ಲಿರುವಾಗ ಕಾಂಗ್ರೆಸ್ ಬೆಂಬಲಿಸಿದರೆ ಅಹಿಂದ ಸಮುದಾಯಕ್ಕೆ ಉತ್ತರ ನೀಡುವುದು ಹೇಗೆ? ಕಳೆದ ಬಾರಿ ಜೆಡಿಎಸ್ ಪಕ್ಷದ ಹೆಚ್ ಡಿ ದೇವೇಗೌಡರಿಗೆ ಬೆಂಬಲ ನೀಡಿದ್ದೆವು. ಈ ಬಾರಿ ಜೆಡಿಎಸ್ ಪಕ್ಷವೇ, ಕಾಂಗ್ರೆಸ್ ಅನ್ನು ಬೆಂಬಲಿಸಲಿ. ಜಾತ್ಯಾತೀತೆಯೇ ಮುಖ್ಯ ಎಂಬುದಾದರೆ ಕಾಂಗ್ರೆಸ್ ಗೇ ಬೆಂಬಲಿಸಲಿ ಎಂಬುದು ಸಿದ್ದರಾಮಯ್ಯ-ಡಿಕೆ ಶಿವಕುಮಾರ್​ ಜೋಡಿಯ ಲೆಕ್ಕಾಚಾರವಾಗಿದೆ.

ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಮೂಲಕ ಹೈಕಮಾಂಡ್ ಬಳಿ ಹೋದ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ತಮ್ಮ ಪಟ್ಟು ಬಿಗಿಗೊಳಿಸಿ, ಈ ಕಠಿಣ ನಿರ್ಧಾರಕ್ಕೆ ಬಂದಿರುವುದು ಎದ್ದುಕಾಣುತ್ತಿದೆ. ಮುಂದಿನ ಚುನಾವಣಾ ದೃಷ್ಟಿಯಿಂದ ಜೆಡಿಎಸ್ ಗೆ ಬೆಂಬಲ ಬೇಡ ಎಂದು ಈ ನಾಯಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅತ್ತ ಚುನಾವಣಾ ರಾಜಕೀಯ ಫಲಿತಾಂಶದ ದೂರಗಾಮಿ ಪರಿಣಾಮ ಮುಂದಿಟ್ಟು ಹೈಕಮಾಂಡ್ ಜೊತೆ ಖರ್ಗೆ ಜೆಡಿಎಸ್ ಪರ ಬ್ಯಾಟಿಂಗ್ ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಹಾಗೂ ಮೈತ್ರಿ ಪಕ್ಷದ ಹೊಂದಾಣಿಗೆ ದೃಷ್ಟಿಯಲ್ಲಿಟ್ಟಕೊಂಡು ಜೆಡಿಎಸ್ ಜೊತೆ ಹೊಂದಾಣಿಕೆ ಬಗ್ಗೆ ಚರ್ಚೆ ನಡೆದಿತ್ತು. ಬಿಜೆಪಿ ವಿರುದ್ದ ಹೋರಾಡಲು ಮಾಜಿ ಪ್ರಧಾನಿಯಂತಹ ಗಟ್ಟಿ ದನಿಯ ಅಗತ್ಯತೆ ಇದೆ ಎಂಬುದು ಕಾಂಗ್ರೆಸ್ ನಲ್ಲೇ ಕೆಲವರ ವಾದವಿದೆ. ಆದರೆ, ಹೈಕಮಾಂಡ್ ಮನವೊಲಿಸುವಲ್ಲಿ ಸಫಲರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರುಗಳು ಒಕ್ಕಲಿಗ ಮತಗಳ ಅಧಿಪತ್ಯ, ಹಳೇ ಮೈಸೂರು ರಾಜಕಾರಣದಲ್ಲಿ ಮೇಲುಗೈ ಸಾಧಿಸಲು ಜೆಡಿಎಸ್ ಬೆಂಬಲಿಸುವುದು ಬೇಡ ಎಂದೂ ವಾದ ಮುಂದಿಟ್ಟಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತೆ. ಆಗಾಗ ಅವರು ಸದನದ ಹೊರಗೂ ಒಳಗೂ ಜೆಡಿಎಸ್​- ಬಿಜೆಪಿ ಜೊತೆ ಒಪ್ಪಂದ ಮಾಡಿಕೊಳ್ಳುತ್ತೆ. ಈ ಎಲ್ಲಾ ಕಾರಣಗಳಿಂದ ಜೆಡಿಎಸ್ ಗೆ ಬೆಂಬಲಿಸದಂತೆ ಹೈಕಮಾಂಡ್ ಮನವೊಲಿಸುವಲ್ಲಿ ಸಿದ್ದರಾಮಯ್ಯ ಅಂಡ್ ಡಿ ಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

TV9 Kannada


Leave a Reply

Your email address will not be published. Required fields are marked *