ಕರ್ನಾಟಕದ ಐವತ್ತು ಕ್ಷೇತ್ರದಿಂದ ಸಂತರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ; ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯ ಸ್ಪೋಟಕ ಹೇಳಿಕೆ | Saints from the fifty constituencies of Karnataka will contest the election; Explosive statement of Brahmananda Saraswati Swamiji in Bhatkal


ಕರ್ನಾಟಕದ ಐವತ್ತು ಕ್ಷೇತ್ರದಿಂದ ಸಂತರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ; ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯ ಸ್ಪೋಟಕ ಹೇಳಿಕೆ

ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ

ಕಾರವಾರ: ಕರ್ನಾಟಕದ ಐವತ್ತು ಕ್ಷೇತ್ರದಿಂದ ಸಂತರು (Saints) ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಭಟ್ಕಳ್ ಸಾರದಹೊಳೆ ಹಳೆಕೋಟೆ ಹನುಮಂತ ದೇವರ ಕಾರ್ಯಕ್ರಮದಲ್ಲಿ ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಭಟ್ಕಳದಿಂದಲೇ ಮೊದಲ ಪ್ರಯೋಗ ಮಾಡಲಾಗುವುದು. ನನಗೆ ರಾಜಕೀಯ ಆಸೆ ಇಲ್ಲ. ಆದರೂ ನಾನೆ ಭಟ್ಕಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದ ಸ್ವಾಮೀಜಿ ಹೇಳಿದ್ದಾರೆ. ನಾನು ಸ್ಪರ್ಧೆಗೆ ಇಳಿದರೆ ಉಳಿದವರೇಲ್ಲಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ. ರಾಮರಾಜ್ಯದ ಪರಿಕಲ್ಪನೆಯಲ್ಲಿ ಹೊಸ ಸಂಸ್ಥೆಯೊಂದನ್ನ ಹುಟ್ಟು ಹಾಕುತ್ತೇವೆ. ಚುನಾವಣಾ ಪ್ರಚಾರಕ್ಕೆ ನೀವ್ಯಾರು ಬೇಡ, ನನ್ನ 5 ಲಕ್ಷ ನಾಗಾಸಾಧುಗಳು ಬರಲಿದ್ದಾರೆ. ನಾವು ಸನ್ಯಾಸಿಗಳೆಲ್ಲಾ ತಯಾರಾಗಿದ್ದೇವೆ,‌ ನಮಗೆ ಆದಿತ್ಯನಾಥರ ಪ್ರೇರಣೆ ಇದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳ ಶಾಸಕ‌ ಸುನೀಲ್ ನಾಯ್ಕ, ಮಾಜಿ ಶಾಸಕರಾದ ಜೆ ಡಿ ನಾಯ್ಕ, ಆರ್ ಎನ್ ನಾಯ್ಕ ಎದುರಲ್ಲೇ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರವು ಮಠಾಧೀಶರಿಂದಲೂ ಪರ್ಸೆಂಟೇಜ್ ಕೇಳುತ್ತಿದೆ:

ಬಾಗಲಕೋಟೆ: ‘ಕರ್ನಾಟಕ ಸರ್ಕಾರವು ಕೇವಲ ಗುತ್ತಿಗೆದಾರರಿಂದ ಮಾತ್ರವಲ್ಲ, ಮಠಾಧೀಶರಿಂದಲೂ ಪರ್ಸೆಂಟೇಜ್ ಕೇಳುತ್ತಿದೆ. ಮಠಗಳು ಶೇ 30ರ ಪರ್ಸೆಂಟೇಜ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ’ ಎಂದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಳಗಂಡಿಯಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿದರು. ಎಸ್​.ಆರ್.ಪಾಟೀಲ್ ನೇತೃತ್ವದ ಟ್ರ್ಯಾಕ್ಟರ್​ ಱಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 30 ಪರ್ಸೆಂಟ್​ ಹಣ ಕೊಟ್ಟರೆ ಮಾತ್ರ ಮಠಗಳ ಕಟ್ಟಡ ಶುರುವಾಗುತ್ತವೆ. ಕಮಿಷನ್​ ಬಗ್ಗೆ ಅಧಿಕಾರಿಗಳೇ ಬಂದು ಹೇಳುತ್ತಾರೆ. ನವದೆಹಲಿ ಅಥವಾ ಬೆಂಗಳೂರಿನಲ್ಲಿ ಐಸ್ ಕ್ರೀಂ ಬಿಡುಗಡೆಯಾದರೆ ಉತ್ತರ ಕರ್ನಾಟಕಕ್ಕೆ ಬರುವುದು ಬರೀ ಕಡ್ಡಿ ಮಾತ್ರ ಎಂದು ಐಸ್ ಕ್ರೀಂ ಕಥೆಯ ಮೂಲಕ ಭ್ರಷ್ಟಾಚಾರದ ಮುಖ ಬಚ್ಚಿಟ್ಟರು. ಸ್ವಾಮೀಜಿ ನೀಡಿದ ಮಠಗಳ ಪರ್ಸೆಂಟೇಜ್ ವ್ಯವಹಾರದ ಹೇಳಿಕೆಗೆ ರಾಜ್ಯದ ಹಲವು ರಾಜಕಾರಿಣಿಗಳು ಪ್ರತಿಕ್ರಿಯಿಸಿದ್ದಾರೆ.

ಸ್ವಾಮಿಜಿಗೂ ಭ್ರಷ್ಟಾಚಾರದ ಬಿಸಿ: ಸತೀಶ್ ಜಾರಕಿಹೊಳಿ:
ದಾವಣಗೆರೆ: ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಮಿಷನ್ ಪಿಡುಗು ಸ್ವಾಮೀಜಿಗಳನ್ನು ಸಹ ಬಿಟ್ಟಿಲ್ಲ ಎನ್ನುವುದು ವಿಷಾದನೀಯ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದರು. ಮಹಾನಾಯಕ ವಿಚಾರವಾಗಿ ಸೋದರ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಬಾಂಬ್ ಸ್ಪೋಟ ಮಾಡಬೇಕು. ನಮ್ಮ ಕಡೆ ಬಾಂಬ್ ಇಲ್ಲ. ಸ್ಪೋಟಕ್ಕಾಗಿ ಬಹುತೇಕರು ಗೋಕಾಕದಲ್ಲಿ ಕಾಯುತ್ತಿದ್ದಾರೆ ಎಂದರು. ಇನ್ನೆಷ್ಟು ಸಚಿವರು ಕಮಿಷನ್ ವಿಚಾರಕ್ಕೆ ಸ್ಥಾನ ಕಳೆದುಕೊಳ್ಳಲಿದ್ದಾರೋ ಗೊತ್ತಿಲ್ಲ. ಹಲಾಲ್ ವಿಚಾರವು ಇನ್ನೆಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತದೆಯೋ ನೋಡಬೇಕು. ಈಶ್ವರಪ್ಪ ಕೇವಲ ರಾಜೀನಾಮೆ ಕೊಟ್ಟರೇ ಸಾಲದು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

TV9 Kannada


Leave a Reply

Your email address will not be published. Required fields are marked *