ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ, ಶಾಸಕ‌ ಸಾ.ರಾ.ಮಹೇಶ್ ಅವರ ವಾಗ್ದಾಳಿ ಮುಂದುವರೆದಿದೆ. ನನ್ನ ಮೇಲೆ ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ನಿನ್ನೆ ಹೇಳಿಕೆ ನೀಡಿದ್ದ ಹಿನ್ನೆಲೆ ಸಾ.ರಾ ಮಹೇಶ್​​ ಡಿ.ಸಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹೇಶ್​, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ನಿಮ್ಮ ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳ? ಎಂದು ಕೇಳಿದ್ರು.

ವಾಲ್ಮಿಕಿ ಜಯಂತಿ ಆಚರಣೆಗೆ ಬರಲಿಲ್ಲ, ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ? ಸೋಂಕಿತರಿಗೆ ಮಾತ್ರೆ ಕೊಡಲು ದುಡ್ಡಿಲ್ಲ. ಆದ್ರೆ ಕೊರೊನಾ ಸಂದರ್ಭದಲ್ಲಿ ಡಿ.ಸಿ ಮನೆಯಲ್ಲಿ ಇನ್ಡೋರ್ ಜಿಮ್, ಇನ್ಡೋರ್ ಸ್ವಿಮ್ಮಿಂಗ್ ಪೂಲ್ ಏಕೆ? ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು? ಇದಕ್ಕೆ ಹಣ ಎಲ್ಲಿಂದ ಬಂತು ? ಅದು ಕಟ್ಟಿರೋದು ಸುಳ್ಳಾ? ರಾಜ್ಯದ ಸಿಎಂ, ರಾಷ್ಟ್ರದ ಪಿಎಂ ಮನೆಯಲ್ಲಿ ಈಜುಕೊಳ ಇದೆಯಾ?  ರಾಜ್ಯ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಇದೆಯಾ? ನಾವು ನೀವು ಜನರಿಗೆ ಮಾದರಿಯಾಗಿರಬೇಕು. ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳ? ಎಂದು ಪ್ರಶ್ನೆ ಮಾಡಿದ್ರು.

ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳ. ಈಜುಕೊಳದ 50 ಲಕ್ಷ ಕೊರೊನಾಗೆ ಬಳಸಬೇಕಿತ್ತು. ನಿಮ್ಮನ್ನು ಯಾರು ಕೇಳಬೇಕು? ಇಂತಹ ಪರಿಸ್ಥಿತಿಯಲ್ಲೂ ಮೈಸೂರಿನಲ್ಲಿ ಶಾಸಕರು, ಪಾಲಿಕೆ ಸದಸ್ಯರು ಕೆಲಸ ಮಾಡುತ್ತಿರುವುದಕ್ಕೆ ಕ್ಷಮೆ ಕೇಳಬೇಕು.
ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ. ಇದೆಲ್ಲಾ ಏನೇ ಇರಲಿ ನೊಂದವರ ನಿಟ್ಟುಸಿರು ತಟ್ಟದೆ ಬಿಡುವುದಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ದ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ರು.

ಇದೇ ವೇಳೆ ಸಾಂಕ್ರಾಮಿಕ ಹೆಚ್ಚಳವಾಗ್ತಿರೊ ಬಗ್ಗೆ ಮಾತನಾಡಿದ ಮಹೇಶ್​, ತಜ್ಞರು-ಮಾಧ್ಯಮಗಳ ವರದಿಯಂತೆ ಈಗಾಗಲೇ ಮೂರನೇ ಅಲೆ ಶುರುವಾಗಿದೆ. ಲಾಕ್‌ಡೌನ್‌‌ನಿಂದ ಈಗಾಗಲೇ ಶ್ರಮಿಕ ವರ್ಗ ತುಂಬಾ ನೊಂದಿದೆ. ಹೋರಾಟದಿಂದ ಬಂದಿರುವ ಸಿಎಂ ಆರ್ಥಿಕವಾಗಿ ಸಹಾಯ ಮಾಡಬೇಕು. ಆರ್ಥಿಕ ಸಂಕಷ್ಟ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಇದಕ್ಕಾಗಿ ಎಲ್ಲಾ ಶಾಸಕರು, ಪರಿಷತ್ ಸದಸ್ಯರ ಒಂದು ವರ್ಷದ ವೇತನ ಬಳಸಿಕೊಳ್ಳಿ ಎಂದರು.

ಇನ್ನು ಕೆ.ಆರ್ ನಗರದಲ್ಲಿ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯ್ಡ್​ ನೀಡುತ್ತಿದ್ದಾರೆ ಎಂಬ
ರೋಹಿಣಿ ಸಿಂಧೂರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಗೊತ್ತಿದ್ದರೆ ಕ್ರಮ ಏಕೆ ಕೈಗೊಂಡಿಲ್ಲ?
ಇದಕ್ಕೆ ಜವಾಬ್ದಾರರು ಯಾರು? ಎಂದು ಕೇಳಿದ್ರು. ಇದನ್ನು ಕೇಳುವುದೇ ತಪ್ಪಾಗಿದೆ. ವಿರೋಧ ಪಕ್ಷದವರು ಎಚ್ಚರಿಸುವ ಕೆಲಸ ಮಾಡುತ್ತೇವೆ. ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ. ಇಲ್ಲಿ ಯಾರು ಶಾಶ್ವತ ಅಲ್ಲ, ಕಾಲ ಚಕ್ರ ಉರುಳುತ್ತದೆ. ಕೋವಿಡ್ ಮುಗಿಯಲಿ, ಜಿಲ್ಲಾಧಿಕಾರಿಗಳ ವಿಚಾರವಾಗಿ ಕೆಲ ದಾಖಲೆಗಳಿವೆ ಬಿಡುಗಡೆ ಮಾಡುವೆ ಎಂದು ಹೇಳಿದ್ರು.

ಶಾಸಕಾಂಗ ಕಾರ್ಯಾಂಗದ ಮಾತು ಕೇಳಬೇಕು. ಇಂತಹ ಪರಿಸ್ಥಿತಿ ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ. ಡಿಸಿಗೆ ಶಾಸಕ ಮಂಜುನಾಥ್ ಜಮೀನು ವಿಚಾರವಾಗಿ ಪತ್ರ ಬರೆದಿದ್ದರು. ನಂತರ ಅದನ್ನು ಅವರೇ ಕ್ಲಿಯರ್ ಮಾಡಿಕೊಟ್ಟಿದ್ದಾರೆ. ಕ್ಲಿಯರ್ ಮಾಡುವುದು ತಪ್ಪಲ್ಲ. ಆದರೆ ಅ ವಿಚಾರವಾಗಿ ಎಲ್ಲರೂ ನನ್ನ ಮಾತು ಕೇಳಬೇಕು ಅನ್ನೋದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ರು.

ಇನ್ನು ಟಾಸ್ಕ್‌ಫೋರ್ಸ್ ಕಮಿಟಿಗೆ ಜನರಿಂದ ಆಯ್ಕೆಯಾದ ಶಾಸಕರನ್ನ ಸೇರಿಸಿಕೊಂಡಿಲ್ಲ.
ಟಾಸ್ಕ್‌ಫೋರ್ಸ್ ಸಭೆಗಳಿಗೆ ನಮ್ಮನ್ನ ಕರೆಯೋದೂ ಇಲ್ಲ. ಕೇವಲ ನಾಮಿನಿ ಪ್ರತಿನಿಧಿಗಳನ್ನ ಸೇರಿಸಿಕೊಂಡು ಸಭೆ ಮಾಡ್ತಾರೆ. ಸಭೆ ಮೇಲೆ‌ ಸಭೆ ನಡೆಸಿದ್ರು ಏನು ಪ್ರಯೋಜನವಾಗ್ತಿಲ್ಲ ಎಂದು ಮಹೇಶ್​ ಗುಡುಗಿದ್ರು.

The post ಕರ್ನಾಟಕದ ದುಡ್ಡು ತಿರುಪತಿಗೆ ಕೊಟ್ಟಿದ್ದು ಸುಳ್ಳ? -ಸಿಂಧೂರಿಗೆ ಮಹೇಶ್​ ಪ್ರಶ್ನೆ appeared first on News First Kannada.

Source: newsfirstlive.com

Source link