ಸಿದ್ದಾಪುರ: ಹವ್ಯಾಸಕ್ಕಾಗಿ ಕಾಳುಮೆಣಸು ಬೆಳೆಯೋ ರೈತನಿಂದ ದೇಶದಲ್ಲೇ ಎಲ್ಲೂ ಸಿಗದ ಕಾಳುಮೆಣಸಿನ ತಳಿಯ ಅವಿಷ್ಕಾರವಾಗಿದೆ. ರೋಗಗಳೇ ಬಾಧಿಸದ ಈ ವಿಶೇಷ ಕಾಳುಮೆಣಸಿನ ತಳಿಗೆ ಅಪಾರ ಬೇಡಿಕೆ ಬಂದಿದ್ದು ಇದಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಹಾಗಿದ್ರೆ ವಿಶಿಷ್ಟವಾದ ಈ ಕಾಳುಮೆಣಸು ಯಾವ್ದು? ಇದರ ಪೇಟೆಂಟ್ ಪಡೆದ ರೈತರು ಯಾರು..?

ಹೌದು.. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕೋಡ್ಸರ ಹುಣಸೆಕೊಪ್ಪದ ರಮಾಕಾಂತ ಹೆಗಡೆ ಅನ್ನೋ ರೈತ ಪರಿಚಯಿಸಿದ ಈ ಕಾಳುಮೆಣಸಿನ ತಳಿಯ ಹೆಸರು ಸಿಗಂಧಿನಿ. ಈ ತಳಿಗೆ ಉಳಿದ ಕಾಳುಮೆಣಸಿನ ರೀತಿ ರೋಗಗಳು ಬಾಧಿಸುತ್ತಿಲ್ಲ. ಇದಕ್ಕೆ ಯಾವುದೇ ಹೆಚ್ಚು ಮೆಂಟೇನನ್ಸ್ ಅವಶ್ಯಕತೆ ಕೂಡ ಇಲ್ಲ. ಇದರ ಮತ್ತೊಂದು ವಿಶೇಷತೆ ಅಂದ್ರೆ ಇದು ಹೆಚ್ಚು ತೂಕವುಳ್ಳದ್ದು ಕೂಡ.. ಇದೀಗ ಈ ಕಾಳುಮೆಣಸಿನ ತಳಿಗೆ ಕೇಂದ್ರ ಸರ್ಕಾರದ ವತಿಯಿಂದ ಪೇಟೆಂಟ್ ಕೂಡ ಸಿಕ್ಕಿದೆ. ಇದಕ್ಕೆ ತೋಟಗಾರಿಕಾ ಸಂಶೋಧನಾ ಕೇಂದ್ರ ಕೂಡ ಸಹಕಾರ ನೀಡಿದೆ.

ಇನ್ನು ಈ ಸಿಗಂಧಿನಿ ತಳಿಯ ಕಾಳುಮೆಣಸಿನ ಬಳ್ಳಿ ರಮಾಕಾಂತ ಹೆಗಡೆ ಯವರ ಪೂರ್ವಜರು ಬೆಳೆಸಿದ್ರು. ಸೊಂಪಾಗಿ ಬೆಳೆದ ಬಳ್ಳಿ ನೆಲದ ಆಶ್ರಯ ಪಡೆದ್ರೂ ಕೂಡ ಕೊಳೆ ಬರದಿದ್ದನ್ನ ನೋಡಿದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇದರ ಸಂಶೋಧನೆಗೆ ಮುಂದಾದ್ರು. ಕೇರಳದ ಕೋಜಿಕ್ಕೊಡ್ ನಿಂದ ಒಂದು ಕೇಂದ್ರ ತಂಡ ಸಂಶೋಧನೆಗೆ ಬಂದು ಈ ತಳಿಯ ಸ್ಯಾಂಪಲ್ ಅನ್ನು ತೆಗೆದುಕೊಂಡು ಹೋಯ್ತು.

ಅಲ್ಲಿ ಇದನ್ನ ಪರೀಕ್ಷೆಗೆ ಒಳಪಡಿಸಿ ಇದೊಂದು ಅತಿ ಹೆಚ್ಚು ರೆಸಿಸ್ಟನ್ಸ್ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿದೆ ಅಂತ ನಿರ್ಧರಿಸಿತು.. ಹಾಗೂ ದೇಶದಲ್ಲಿ ಇಂತಹ ಪ್ರಥಮ ತಳಿ ಅನ್ನೋದನ್ನ ಹೇಳಿತು. ನಂತರ ಇದರ ಪೇಟೆಂಟ್ ಪಡೆದುಕೊಳ್ಳೋಕೆ ರಮಾಕಾಂತ ಹೆಗಡೆ ಅರ್ಜಿ ಸಲ್ಲಿಸಿದ್ರು. ಈಗ ಕೇಂದ್ರದಿಂದ ಇದರ ಪೇಟೆಂಟ್ ಲಭಿಸಿದ್ದು, ಈ ತಳಿಯ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯ ಕಾಳುಮೆಣಸಿನ ತಳಿ 20 ರಿಂದ 25 ರೂಪಾಯಿ ವರೆಗೆ ಮಾರಾಟವಾದ್ರೆ, ಈ ತಳಿಯನ್ನ 140 ರಿಂದ 150 ರೂಪಾಯಿ ವರೆಗೆ ಕೇಳಿದ್ರು. ಆದ್ರೆ ನನಗೆ ದುಡ್ಡು ಮಾಡಬೇಕೆಂಬ ಆಸೆ ಇಲ್ಲ. ಆದ್ದರಿಂದ ಕೇವಲ 20 ರೂಪಾಯಿಗಳಿಗೆ ಇದರ ಮಾರಾಟ ಮಾಡುತ್ತಿದ್ದೇವೆ ಅಂತಾರೆ ರಮಾಕಾಂತ ಹೆಗಡೆ.

ಸಿಗಂಧಿನಿ ನರ್ಸರಿ ಅನ್ನೋ ಹೆಸರಲ್ಲೇ ನರ್ಸರಿ ನಿರ್ಮಿಸಿ ಬಳ್ಳಿಗಳನ್ನ ಮಾರಾಟ ಮಾಡ್ತಿದ್ದಾರೆ ಇವ್ರು. ಇದುವರೆಗೆ ಸುಮಾರು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಮಾರಾಟ ಮಾಡಿದ್ದಾರೆ. ಬೇಡಿಕೆ ಹೆಚ್ಚಾದ್ರೆ ಯಾರಾದ್ರೂ ಬಳ್ಳಿಗಳ ಬೆಲೆ ಹೆಚ್ಚಿಸಿ ಮಾರಾಟ ಮಾಡೋದಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಪೇಟೆಂಟ್ ಲಭಿಸಿದ್ದು ಸಂತೋಷ ಅಂತಾರೆ ರಮಾಕಾಂತ ಹೆಗಡೆ..

ಒಟ್ಟಿನಲ್ಲಿ ಕಾಳುಮೆಣಸಿಗೆ ಬೆಲೆ ಬಂದಂತೆ ಬೆಳೆಗಾರರ ಸಂಖ್ಯೆ ಜಾಸ್ತಿ ಆಗ್ತಿದೆ. ಕಾಳುಮೆಣಸಿನ ತಳಿಗಳಿಗೂ ಕೂಡ ರೋಗಬಾಧೆ ಜಾಸ್ತಿ ಆಗ್ತಿದೆ. ಇದರ ನಡುವೆ ರೋಗ ಬಾರದಂತಹ ಸಿಗಂಧಿನಿ ಕಾಳು ಮೆಣಸಿನ ತಳಿಯ ಸಂಶೋಧನೆ ಬೆಳೆಗಾರರಲ್ಲಿ ಸಂತಸ ಮೂಡಿಸಿದ್ರೆ ಪೇಟೆಂಟ್ ಸಿಕ್ಕಿದ್ದು ಜಿಲ್ಲೆಯ ಪಾಲಿಗೆ ಸಂತೋಷದ ವಿಷಯವಾಗಿದೆ..

ವಿಶೇಷ ವರದಿ: ಶ್ರೀಧರ್ ಜಿ.ಎಚ್, ನ್ಯೂಸ್ ಫಸ್ಟ್, ಶಿರಸಿ

The post ಕರ್ನಾಟಕ ರೈತನ ಸಿಗಂಧಿನಿ ಹೆಸರಿನ ಈ ವಿಶೇಷ ಕಾಳುಮೆಣಸಿನ ತಳಿಗೆ ಸಿಕ್ಕಿದೆ ವಿಶ್ವಮಾನ್ಯತೆ appeared first on News First Kannada.

Source: newsfirstlive.com

Source link