ಕಲಬುರ್ಗಿ-ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ | Kalaburagi Bellary Mayor Election Postponed Due to Legislative Council Election Code of Conduct


ಕಲಬುರ್ಗಿ-ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ

ಸಾಂಕೇತಿಕ ಚಿತ್ರ

ಕಲಬುರ್ಗಿ: ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಲಬುರ್ಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಸ್ಥಾನದ ಚುನಾವಣೆಗಳನ್ನು ಮುಂದೂಡಿ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಕಲಬುರ್ಗಿ ಪಾಲಿಕೆಯ ಮೇಯರ್ ಸ್ಥಾನದ ಚುನಾವಣೆ ನ.20ಕ್ಕೆ ಹಾಗೂ ಬಳ್ಳಾರಿ ಪಾಲಿಕೆ ಮೇಯರ್ ಚುನಾವಣೆ ನ.18ಕ್ಕೆ ನಿಗದಿಯಾಗಿತ್ತು. ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮೇಯರ್ ಸ್ಥಾನದ ಚುನಾವಣೆ ಮುಂದೂಡಲಾಗಿದೆ.

ಐವರು ಹಾಲಿ ಎಂಎಲ್​ಸಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧಾರ
ಕರ್ನಾಟಕದ 25 ವಿಧಾನ ಪರಿಷತ್​​ (Vidhan Parishad) ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿಯ (BJP) ಹಾಲಿ ವಿಧಾನ ಪರಿಷತ್ ಸದಸ್ಯರ ಪೈಕಿ ಐವರಿಗೆ ಮತ್ತೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಎಂ.ಕೆ. ಪ್ರಾಣೇಶ್, ಬಿ.ಜಿ. ಪಾಟೀಲ್, ಮಹಾಂತೇಶ್​​ ಕವಟಗಿಮಠ, ಪ್ರದೀಪ್ ಶೆಟ್ಟರ್​ಗೆ ಮತ್ತೆ ಟಿಕೆಟ್ ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಡಿ.10ಕ್ಕೆ ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ
ಕರ್ನಾಟಕದ ವಿಧಾನ ಪರಿಷತ್​​ನ 25 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ಡಿಸೆಂಬರ್ 10ರಂದು ಮತದಾನ ನಡೆಸುವುದಾಗಿ ಘೋಷಣೆ ಮಾಡಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ.

ಡಿಸೆಂಬರ್ 10ರ ಶುಕ್ರವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಮಾಡಬಹುದಾಗಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 16ರ ವೇಳೆಗೆ ಎಲ್ಲ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಬೀದರ್ 1 , ಕಲಬುರ್ಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಮೈಸೂರು ,2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1 ಹಾಗೂ ಕೊಡಗು ಜಿಲ್ಲೆಯ ಒಂದು ಕ್ಷೇತ್ರಕ್ಕೆ ಡಿ. 10ರಂದು ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್​ಗೆ ದ್ವೈವಾರ್ಷಿಕ ಚುನಾವಣೆ ದಿನಾಂಕ ಪ್ರಕಟ, ಡಿಸೆಂಬರ್​​ನಲ್ಲಿ 25 ಸ್ಥಾನಗಳಿಗೆ ಮತದಾನ
ಇದನ್ನೂ ಓದಿ: ಡಿ. 10ಕ್ಕೆ ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ; ಜನವರಿ 5ಕ್ಕೆ ತೆರವಾಗಲಿರುವ ಸ್ಥಾನಗಳಿವು

TV9 Kannada


Leave a Reply

Your email address will not be published. Required fields are marked *