ವಿರಾಟ್-ಅನುಷ್ಕಾ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ಅವರು ಟೆಸ್ಟ್ ಕ್ರಿಕೆಟ್ಗೆ ರಾಜೀನಾಮೆ ನೀಡಿದ್ದರು. ಅವರ ಈ ನಿರ್ಧಾರ ಸಾಕಷ್ಟು ಶಾಕಿಂಗ್ ಆಗಿತ್ತು. ಟೀಂ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದ ಹೊರತಾಗಿಯೂ ಅವರು ಏಕಾಏಕಿ ರಾಜೀನಾಮೆ ನೀಡಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಅವರು ಮಾಡಿದ ಸಾಧನೆಯನ್ನು ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ವಿರಾಟ್ ಕೊಹ್ಲಿಯನ್ನು ಅವರ ಪತ್ನಿ ಅನುಷ್ಕಾ ಶರ್ಮಾ ಹೊಗಳಿದ್ದಾರೆ.
‘2014ರಲ್ಲಿ ಎಂ.ಎಸ್. ಧೋನಿ ಅವರು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದರು. ಆಗ ನೀವು ನನ್ನ ಬಳಿ ಬಂದು ‘ನನ್ನನ್ನು ಟೀಂ ಇಂಡಿಯಾ ನಾಯಕನನ್ನಾಗಿ ಮಾಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ ಮಾತು ನನಗೆ ಈಗಲೂ ನೆನಪಿದೆ. ಆ ಬಳಿಕ ನಾನು, ನೀವು ಮತ್ತು ಎಂಎಸ್ ಧೋನಿ ಕುಳಿತು ಮಾತನಾಡಿದೆವು. ಈ ವೇಳೆ ನಿಮ್ಮ ಗಡ್ಡ ಎಷ್ಟು ಬೇಗನೆ ಬೂದು ಬಣ್ಣಕ್ಕೆ ತಿರುಗುತ್ತಿದೆ ಎಂದು ಅವರು ತಮಾಷೆ ಮಾಡಿದ್ದರು. ಆಗ ನಾವೆಲ್ಲರೂ ಆ ಬಗ್ಗೆ ಸಾಕಷ್ಟು ನಗುತ್ತಿದ್ದೆವು. ಆ ದಿನದಿಂದ, ನಿಮ್ಮ ಗಡ್ಡವು ಬೂದು ಬಣ್ಣಕ್ಕೆ ತಿರುಗುವುದನ್ನು ಮಾತ್ರ ನಾನು ನೋಡಿಲ್ಲ’ ಎಂದು ಬರೆದುಕೊಂಡಿದ್ದಾರೆ ಅನುಷ್ಕಾ. ಈ ಮೂಲಕ ಕೊಹ್ಲಿ ಕಂಡ ಏಳು-ಬೀಳಿನ ಹಾದಿಯನ್ನೂ ಕಂಡಿದ್ದೇನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
‘ನಾನು ನಿಮ್ಮ ಬೆಳವಣಿಗೆಯನ್ನು ನೋಡಿದೆ. ಅದೂ ಅಪಾರ ಬೆಳವಣಿಗೆ. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ನಿಮ್ಮ ಬೆಳವಣಿಗೆ ಮತ್ತು ನಿಮ್ಮ ನಾಯಕತ್ವದಲ್ಲಿ ತಂಡವು ಮಾಡಿದ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಅನುಷ್ಕಾ ಹೇಳಿದ್ದಾರೆ.
‘ನೀವು ಮಾದರಿ ಆಗಿ ತಂಡವನ್ನು ಮುನ್ನಡೆಸಿದ್ದೀರಿ. ಕೆಲವು ಸೋಲಿನ ಬಳಿಕ ನಿಮ್ಮ ಪಕ್ಕದಲ್ಲಿ ಬಂದು ಕೂತಾಗ ನಿಮ್ಮ ಒದ್ದೆ ಕಣ್ಣನ್ನು ನಾನು ನೋಡಿದ್ದೇನೆ. ತೋರಿಕೆ ಮಾಡೋದು ನಿಮ್ಮ ವೈರಿ. ಇದು ನನ್ನ ದೃಷ್ಟಿಯಲ್ಲಿ ಮತ್ತು ನಿಮ್ಮ ಅಭಿಮಾನಿಗಳ ದೃಷ್ಟಿಯಲ್ಲಿ ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡಿದೆ. ಯಾವಾಗಲೂ ಶುದ್ಧ, ಕಲಬೆರಕೆಯಿಲ್ಲದ ಉದ್ದೇಶಗಳು ನಿಮ್ಮದು. ಪ್ರತಿಯೊಬ್ಬರೂ ಅದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ ಅನುಷ್ಕಾ.