ಲಕ್ನೋ: ಅನಾರೋಗ್ಯದಿಂದ ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರನ್ನು ಮಂಗಳವಾರ ರಾತ್ರಿಯಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಹಲವು ಬಿಜೆಪಿ ನಾಯಕರು ಈಗಾಗಲೇ ಕಲ್ಯಾಣ್ ಸಿಂಗ್ ಅವರಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಆಷಾಢ ಮಾಸ – 1000 ಕೆ.ಜಿ ಮೀನು, 10 ಕುರಿ ಮಗಳಿಗೆ ಗಿಫ್ಟ್ ಕೊಟ್ಟ ತಂದೆ

ಇದ್ದಕ್ಕಿದ್ದಂತೆ ದೇಹ ಊದಿಕೊಂಡು, ಪ್ರಜ್ಞಾ ಹೀನರಾದ ಹಿನ್ನೆಲೆಯಲ್ಲಿ ಜುಲೈ 4ರಂದು ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಲ್ಯಾಣ್ ಸಿಂಗ್ ಅವರ ಆರೋಗ್ಯದ ಬಗ್ಗೆ ತಜ್ಞ ವೈದ್ಯರ ತಂಡ ನಿರಂತರವಾಗಿ ಗಮನ ಹರಿಸುತ್ತಿದೆ. ಕಾರ್ಡಿಯಾಲಜಿ, ನೆಫ್ರಾಲಜಿ, ನ್ಯೂರಾಲಜಿ, ಎಂಡೋಕ್ರಿನಾಲಜಿ ವೈದ್ಯರು ಸಿಂಗ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.

ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಅಸ್ಥಿರವಾಗಿದೆ. ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ಸಂಜಯ್ ಗಾಂಧಿ ಆಸ್ಪತ್ರೆ ವೈದ್ಯರು ನಿನ್ನೆ ಸಂಜೆ ತಿಳಿಸಿದ್ದಾರೆ. ನಿನ್ನೆ ಸಂಜೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಕೂಡ ಆಸ್ಪತ್ರೆಗೆ ತೆರಳಿ ಕಲ್ಯಾಣ್ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು. ಈಗಾಗಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಕಲ್ಯಾಣ್ ಸಿಂಗ್ ಅವರಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

The post ಕಲ್ಯಾಣ್ ಸಿಂಗ್ ಆರೋಗ್ಯ ಗಂಭೀರ-ವೆಂಟಿಲೇಟರ್ ಅಳವಡಿಕೆ appeared first on Public TV.

Source: publictv.in

Source link