ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಹೆಚ್ಚಾದ ಅಪೌಷ್ಟಿಕತೆ; ಶಾಲೆ ಆವರಣದಲ್ಲೇ ಕೈ ತೋಟ, ಹೊಸ ಪ್ರಯತ್ನದತ್ತ ತೋಟಗಾರಿಕೆ ಇಲಾಖೆ | Department of Horticulture cultivates vegetables and fruits in school Atmosphere over Malnutrition in children kalaburagi


ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಹೆಚ್ಚಾದ ಅಪೌಷ್ಟಿಕತೆ; ಶಾಲೆ ಆವರಣದಲ್ಲೇ ಕೈ ತೋಟ, ಹೊಸ ಪ್ರಯತ್ನದತ್ತ ತೋಟಗಾರಿಕೆ ಇಲಾಖೆ

ಶಾಲೆ ಆವರಣದಲ್ಲೇ ಕೈ ತೋಟ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕೆಲ ತಿಂಗಳಿಂದ ಮೊಟ್ಟೆ ಮತ್ತು ಬಾಳೆ ಹಣ್ಣನ್ನು ಕೂಡಾ ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿ ಊಟದ ಯೋಜನೆಯಿದೆ. ಆದರೂ ಕೂಡಾ ಮಕ್ಕಳಿಗೆ ಪೌಷ್ಟಿಕಾಂಶಗಳು ಸಿಗುತ್ತಿಲ್ಲ. ಕಲಬುರಗಿ ತೋಟಗಾರಿಕೆ ಇಲಾಕೆಯ ಅಧಿಕಾರಿಗಳು ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಪೌಷ್ಟಿಕ ಕೈತೋಟ ಅನ್ನೋ ವಿಶಿಷ್ಟ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿಯೇ ಅನೇಕ ರೀತಿಯ ತರಕಾರಿಯನ್ನು ಸಾವಯವ ಮಾದರಿಯಲ್ಲಿ ಬೆಳೆಯಲಾಗಿದೆ. ಸಾವಯವ ಪದ್ದತಿಯಲ್ಲಿ ಬೆಳೆದ ತರಕಾರಿಯನ್ನೇ ಮಕ್ಕಳ ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸಲಾಗುತ್ತದೆ. ಇದರಿಂದ ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆಯನ್ನು ಹೋಗಲಾಡಿಸುವ ಕೆಲಸವಾದರೆ ಮತ್ತೊಂದಡೆ ಮಕ್ಕಳಿಗೆ ಕೃಷಿ ಪಾಠವು ಸಿಕ್ಕತ್ತಾಂತಾಗುತ್ತಿದೆ.

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಾಗಿರುವ ಅಪೌಷ್ಟಿಕತೆ
ಹೌದು ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ರಾಜ್ಯ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲೇ ಹೆಚ್ಚು.
ಜಿಲ್ಲೆ -ಅಪೌಷ್ಟಿಕತೆ -ರಕ್ತಹೀನತೆ ಹೊಂದಿರುವ ಶೇಕಡಾವಾರು ಮಕ್ಕಳ ಸರಾಸರಿ
ಕಲಬುರಗಿ- 72.4
ಬೀದರ್- 69.1
ಯಾದಗಿರಿ- 74
ರಾಯಚೂರು-70.6
ಕೊಪ್ಪಳ- 70.7
ಬಳ್ಳಾರಿ-72.3
ವಿಜಯಪುರ-68

ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಹೀಗಾಗಿ ಸರ್ಕಾರ ಕಳೆದ ಡಿಸೆಂಬರ್ ತಿಂಗಳಿಂದ ಮಕ್ಕಳಿಗೆ ಮಧ್ನಾಹ್ನದ ಬಿಸಿ ಊಟ, ಹಾಲು, ಮೊಟ್ಟೆ ಹಾಗೂ ಬಾಳೆ ಹಣ್ಣನ್ನು ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇದೀಗ ಕಿಚನ್ ಗಾರ್ಡನ್ ತೋಟಗಾರಿಕೆ ಇಲಾಖೆಯ ಸಹಾಯದದೊಂದಿಗೆ, ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ.

garden-in-school-

ಶಾಲೆ ಆವರಣದಲ್ಲೇ ಕೈ ತೋಟ

ಏನಿದು ಪೌಷ್ಟಿಕ ಕೈತೋಟ?
ಅಪೌಷ್ಟಿಕತೆಯನ್ನು ಹೋಗಲಾಡಿಸುವ ಉದ್ದೇಶದಿಂದ, ತೋಟಗಾರಿಕೆ ಇಲಾಖೆಯ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಕೈತೋಟ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಖಾಲಿ ಜಾಗ, ನೀರಿನ ಸೌಲಭ್ಯ ಇರುವ ಗ್ರಾಮೀಣ ಭಾಗದ ಶಾಲೆಗಳಲ್ಲಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಆಳಂದ ತಾಲೂಕಿನ ಗುಂಜಬಬಲಾದ ಸರ್ಕಾರಿ ಶಾಲೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶಾಲೆಗಳಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಕಡೆ ಈ ಪೌಷ್ಟಿಕ ತೋಟಗಳನ್ನು ನಿರ್ಮಿಸಲಾಗಿದೆ.

ಏನೇನು ಬೆಳೆಯಲಾಗುತ್ತದೆ ಪೌಷ್ಟಿಕ ಕೈ ತೋಟದಲ್ಲಿ
ಆಳಂದ ತಾಲೂಕಿನ ಗುಂಜ ಬಬದಲಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರು ತಿಂಗಳ ಹಿಂದೆ ಪೌಷ್ಟಿಕ ತೋಟ ಯೋಜನೆ ಜಾರಿಗೊಳಿಸಲಾಗಿದೆ. ಇದೀಗ ಶಾಲೆಯಲ್ಲಿಯೇ ಬಗೆ ಬಗೆಯ ಸೊಪ್ಪನ್ನು ಬೆಳೆಯಲಾಗಿದೆ. ಶಾಲೆಯ ಆವರಣದಲ್ಲಿಯೇ ಮೇಂತೆ, ಪಾಲಕ್, ಕೊತ್ತಂಬರಿ, ನುಗ್ಗೆ ಸೊಪ್ಪು, ಹುಣಚಿ ಪಲ್ಯಾ ಸೇರಿದಂತೆ ಬಗೆಬಗೆಯ ಸೊಪ್ಪನ್ನು ಹಾಗೂ ಬದನೆ, ಬೆಂಡೆ ಸೇರಿದಂತೆ ಬಗೆ ಬಗೆಯ ತರಕಾರಿಗಳನ್ನು ಬೆಳೆಯಲಾಗಿದೆ. ಮಾವು, ಸಪೋಟಾ ಸೇರಿದಂತೆ ಕೆಲ ಹಣ್ಣಿನ ಗಿಡಗಳನ್ನು ಕೂಡಾ ಪೌಷ್ಟಿಕ ಕೈ ತೋಟದಲ್ಲಿ ಹಚ್ಚಲಾಗಿದೆ.

ಈ ಮೊದಲು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯ ಮುಖ್ಯಪಾಧ್ಯಾಯರು ಬೇರೆ ಕಡೆಯಿಂದ ತರಕಾರಿಯನ್ನು ಖರೀದಿಸಿ ತರುತ್ತಿದ್ದರು. ಆದ್ರೆ ಸರ್ಕಾರ ತರಕಾರಿಗೆ ನೀಡುತ್ತಿದ್ದ ಹಣ ಯಾವುದಕ್ಕು ಕೂಡಾ ಸಾಲುತ್ತಿರಲಿಲ್ಲ. ಹೀಗಾಗಿ ಮಧ್ಯಾಹ್ನದ ಬಿಸಿ ಊಟದಲ್ಲಿ ತರಕಾರಿ, ಸೊಪ್ಪಿನ ಬಳಕೆ ಕಡಿಮೆಯಿತ್ತು. ಮಧ್ಯಾಹ್ನದ ಬಿಸಿ ಊಟ, ಮಕ್ಕಳ ಹೊಟ್ಟೆ ತುಂಬಿಸುತ್ತಿತ್ತೇ ವಿನಹ ಅದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚು ಸಿಗುತ್ತಿರಲಿಲ್ಲ. ಆದರೆ ಇದೀಗ ಶಾಲಾ ಆವರಣದಲ್ಲಿಯೇ ಅನೇಕ ಸೊಪ್ಪು, ತರಕಾರಿಯನ್ನು ಬೆಳೆಯುತ್ತಿರುವದರಿಂದ ಮಧ್ಯಾಹ್ನದ ಬಿಸಿ ಊಟಕ್ಕೆ ಯಥೇಚ್ಚವಾಗಿ ತರಕಾರಿ ಮತ್ತು ಸೊಪ್ಪು ಸಿಗುತ್ತಿದೆ.

ಇನ್ನು ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದಲೇ ಈ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ನೀಡಲಾಗುತ್ತಿದೆ. ಈ ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲೆಯಲ್ಲಿಯೇ ಬೆಳೆದ ಬಗೆ ಬಗೆಯ ತರಕಾರಿ, ಸೊಪ್ಪನ್ನು ಬಳಸಲಾಗುತ್ತಿದೆ. ಇನ್ನು ಶಾಲೆಯಲ್ಲಿ ಸಂಪೂರ್ಣವಾಗಿ ಸಾವಯವ ಮಾದರಿಯಲ್ಲಿಯೇ ಸೊಪ್ಪು, ತರಕಾರಿ ಬೆಳೆಯಲಾಗುತ್ತಿದೆ. ಇದರಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟಕ್ಕೆ ಕೆಮಿಕಲ್ ಮುಕ್ತ ತರಕಾರಿಯನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯವು ಸುಧಾರಿಸುತ್ತದೆ, ಜೊತೆಗೆ ಅವರಲ್ಲಿ ಅಪೌಷ್ಟಿಕತೆ ಕೂಡಾ ದೂರವಾಗುತ್ತದೆ.

ಮಕ್ಕಳಿಗೆ ಶೈಕ್ಷಣಿಕ ಪಾಠದ ಜೊತೆಗೆ ಕೃಷಿ ಪಾಠ
ಇನ್ನು ಗುಂಜ ಬಬದಲಾದ ಸರ್ಕಾರಿ ಶಾಲೆಯಲ್ಲಿರುವ ಖಾಲಿ ಜಾಗದಲ್ಲಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಲಾಗಿದೆ. ಮಕ್ಕಳು ಕೂಡಾ ಈ ಪೌಷ್ಟಿಕ ತೋಟದಲ್ಲಿ ಆಗಾಗ ಕೆಲಸ ಮಾಡುತ್ತಾರೆ. ತರಕಾರಿ ಬೆಳೆಗೆ ನೀರು ಹಾಕುತ್ತಾರೆ. ಕಳೆ ತಗೆಯುವ ಕೆಲಸ ಮಾಡುತ್ತಾರೆ. ಈ ಸಮಯದಲ್ಲಿ ಶಿಕ್ಷಕರು ಕೂಡಾ ಹಾಜರಿದ್ದು, ಮಕ್ಕಳಿಗೆ ಕೃಷಿ ಪಾಠವನ್ನು ಕೂಡಾ ಮಾಡುತ್ತಾರೆ. ಇದರಿಂದ ಮಕ್ಕಳಿಗೆ ಕೃಷಿಯ ಬಗ್ಗೆ ಪ್ರಾಯೋಗಿಕ ಜ್ಞಾನವು ಸಿಗುವಂತಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ, ಶೈಕ್ಷಣಿಕ ಪಾಠದ ಜೊತೆಗೆ ಕೃಷಿ ಪಾಠವು ಹೇಳಿಕೊಡುವದರಿಂದ, ಅವರಿಗೆ ಹೆಚ್ಚಿನ ಅನಕೂಲತೆಗಳು ಆಗುತ್ತಿವೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ನಮ್ಮ ಶಾಲೆಯಲ್ಲಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಲಾಗಿದೆ. ಮಧ್ಯಾಹ್ನದ ಬಿಸಿ ಊಟಕ್ಕೆ ಇದೀಗ ಅಲ್ಲಿ ಬೆಳೆದ ತರಕಾರಿ, ಸೊಪ್ಪನ್ನೆ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಸಹ ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಕೂಡಾ ಸಹಕಾರ ನೀಡುತ್ತಿದ್ದಾರೆ ಎಂದು ಸರ್ಕಾರಿ ಪ್ರಾಥಮಿಕ ಶಾಲೆ, ಗುಂಜ ಬಬಲಾದ ಮುಖ್ಯಶಿಕ್ಷಕ ನಿಂಗಪ್ಪ ಸಂತಸ ಹಂಚಿಕೊಂಡಿದ್ದಾರೆ.
garden-in-school

ತೋಟಗಾರಿಕೆ ಇಲಾಕೆಯ ಅಧಿಕಾರಿಗಳ ಪ್ರಯತ್ನಕ್ಕೆ ಯಶಸ್ಸು
ಇನ್ನು ಶಾಲಾ ಆವರಣದಲ್ಲಿ ಪೌಷ್ಟಿಕ ಕೈತೋಟಗಳು ಚೆನ್ನಾಗಿ ಬೆಳೆಯಲು ಕಾರಣವಾಗಿದ್ದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಪರಿಶ್ರಮ. ಹೌದು ಆಳಂದ ತಾಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಯಾಗಿರುವ ಶಂಕರಗೌಡ ಅವರು, ಹೆಚ್ಚು ಮುತವರ್ಜಿ ವಹಿಸಿ, ಆಳಂದ ತಾಲೂಕಿನ ಅನೇಕ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಕೈ ತೋಟವನ್ನು ನಿರ್ಮಾಣ ಮಾಡುವಂತೆ ಮಾಡಿದ್ದಾರೆ. ತಾಲೂಕಿನ ಅನೇಕ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ. ಖಾಲಿ ಜಾಗ ಇರುವ ಸ್ಥಳದಲ್ಲಿ ಪೌಷ್ಟಿಕ ಕೈ ತೋಟದ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ಆಸಕ್ತಿ ತೋರಿಸಿದ ಶಾಲೆಯಲ್ಲಿ ಪೌಷ್ಟಿಕ ತೋಟ ನಿರ್ಮಾಣವಾಗುವಂತೆ ನೋಡಿಕೊಂಡಿದ್ದಾರೆ.

ಇನ್ನು ತೋಟಗಾರಿಕೆ ಇಲಾಖೆಯವರು, ಉದ್ಯೋಗ ಖಾತ್ರಿ ಯೋಜನೆಯಡಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಿದ್ದಾರೆ. ತೋಟಗಾರಿಕೆ ಇಲಾಖೆಯವರೇ, ಬೇಕಾದ ಬೀಜಗಳನ್ನು ನೀಡಿದ್ದಾರೆ. ಬೇಕಾದ ಮಾಹಿತಿಯನ್ನು ಶಾಲಾ ಸಿಬ್ಬಂಧಿಗೆ ನೀಡಿದ್ದಾರೆ. ಇದೀಗ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂಧಿ, ಪೌಷ್ಟಿಕ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಅನೇಕ ಕಡೆ ಪ್ರಾರಂಭ ಮಾಡಿರುವ ಪೌಷ್ಟಿಕ ತೋಟದಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ತಾಜಾ ತರಕಾರಿ ಸಿಗುತ್ತಿದೆ. ಇದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಕೂಡಾ ಹೆಚ್ಚಾಗುತ್ತಿದೆಯಂತೆ.ಗುಂಜ ಬಬಲಾದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತುಂಬಾ ಉತ್ಸಾಹದಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಿದ್ದಾರೆ. ಇದೇ ರೀತಿ ಎಲ್ಲಾ ಶಾಲೆಯವರು ಮಾಡಿದ್ರೆ ಮಕ್ಕಳಿಗೆ ಕೃಷಿ ಪಾಠದ ಜೊತೆಗೆ, ಅವರಲ್ಲಿ ಪೌಷ್ಟಿಕಾಂಶ ಕೂಡಾ ಹೆಚ್ಚಾಗುತ್ತದೆ.

ಆಳಂದ ತಾಲೂಕಿನ ಅನೇಕ ಕಡೆ ಪೌಷ್ಟಿಕ ತೋಟವನ್ನು ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಜಾಗವಿದ್ದಲ್ಲಿ ಪೌಷ್ಟಿಕ ತೋಟವನ್ನು ನಿರ್ಮಾಮ ಮಾಡಲಾಗಿದೆ. ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿದೆ. ಪೌಷ್ಟಿಕ ತೋಟದಲ್ಲಿ ಪೌಷ್ಟಿಕಾಂಶ ಹೆಚ್ಚಾಗುವ ಸೊಪ್ಪು ಮತ್ತು ತರಕಾರಿ, ಹಣ್ಣಗಳನ್ನು ಬೆಳೆಯಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ಶಂಕರಗೌಡ ಮಾಹಿತಿ ನೀಡಿದ್ದಾರೆ.

ವರದಿ; ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ

TV9 Kannada


Leave a Reply

Your email address will not be published. Required fields are marked *