ಕಳೆದುಕೊಂಡ ಹಾಸನ ಕ್ಷೇತ್ರ ವಶಕ್ಕೆ ದಳಪತಿ ಪ್ಲಾನ್​​ -ಹಾಸನ ಶಾಸಕ ಪ್ರೀತಂ ಗೌಡಗೆ ಅಷ್ಟ ದಿಗ್ಬಂಧನ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ದಳಪತಿಗಳು ಭರ್ಜರಿ ಸಿದ್ಧತೆ ನಡೆಸ್ತಿದ್ದಾರೆ. ಅದರಲ್ಲೂ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೌಡರ ಕುಟುಂಬ ಬಿಜೆಪಿಗೆ ಅಷ್ಟದಿಗ್ಬಂಧನ ಹಾಕಲು ತಯಾರಿ ನಡೆಸಿದೆ. ಹಾಸನ ಕ್ಷೇತ್ರದಲ್ಲಿ ಆಳ್ತಿರೋ ಕೇಸರಿ ಕಲಿಗೆ ತಕ್ಕಪಾಠ ಕಲಿಸಲು ದೊಡ್ಡ ಗೌಡರ ಸೊಸೆಯೇ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.

ರಾಜ್ಯದಲ್ಲಿ ಪರಿಷತ್ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಮೇಲ್ಮನೆಯಲ್ಲಿ ಮೋಡಿ ಮಾಡಲು ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸ್ತಿವೆ. ಅದೇ ರೀತಿ ದಳಪತಿಗಳು ತಾವು ಸ್ಪರ್ಧಿಸಿರೋ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಗ್ ಪ್ಲಾನ್ ಮಾಡಿದ್ದಾರೆ. ಅದರಲ್ಲೂ ಹಾಸನದಲ್ಲಿ ಪರಿಷತ್ ಚುನಾವಣೆ ಗೆಲ್ಲುವ ಮೂಲಕ ಮುಂದಿನ ಚುನಾವಣೆಗೆ ಅಡಿಪಾಯ ಹಾಕಲು ಸಜ್ಜಾಗಿದ್ದಾರೆ. ಈ ಮೂಲಕ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಅಷ್ಟದಿಗ್ಬಂಧನ ವಿಧಿಸಲು ಹೆಚ್‌.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಭಾರೀ ರಣತಂತ್ರ ಹೆಣೆದಿದ್ದಾರೆ. ಪ್ರೀತಂ ಗೌಡರ ಹಣೆಯಲ್ಲಿ ಬೆವರು ತರುವಂತಹ ಅಷ್ಟ ಅಸ್ತ್ರಗಳನ್ನ ಸಿದ್ಧಪಡಿಸಿದ್ದಾರೆ.

ಹಾಸನ ಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವ್ಯೂಹ
ಹಾಸನ ಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಳಪತಿಗಳು ವ್ಯೂಹ ರಚಿಸಿದ್ದಾರೆ. ಎಲ್ಲ ಲೆಕ್ಕಾಚಾರ ಹಾಕಿಯೇ ಸೂರಜ್ ರೇವಣ್ಣಗೆ ಹಾಸನ ಪರಿಷತ್​​ ಟಿಕೆಟ್​​ ನೀಡಿದ್ದಾರೆ. ಇನ್ನು ಸೂರಜ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ರು ಎನ್ನಲಾಗಿದೆ. ಹೀಗಾಗಿ ಭವಾನಿ ರೇವಣ್ಣರ ಮಾತಿಗೆ ಕಟ್ಟುಬಿದ್ದು, ಸೂರಜ್​ಗೆ ಗೌಡರಿಗೆ ಟಿಕೆಟ್ ನೀಡಲಾಗಿದೆಯಂತೆ. ​​ಈ ಮೂಲಕ ಸೂರಜ್​ರನ್ನು ಪರಿಷತ್​ಗೆ ಕಳುಹಿಸಿ ಹಾಸನವನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳಲು ದಳ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಈಗಾಗಲೇ ಹಾಸನದಲ್ಲಿ ಜೆಡಿಎಸ್‌ ಪಾರುಪತ್ಯ ಮೆರೆದಿದೆ. ಅಲ್ಲದೇ ಭದ್ರಕೋಟೆಯನ್ನೂ ರಚಿಸಿಕೊಂಡಿದೆ. ಇದರ ಮಧ್ಯೆ ಬಿಜೆಪಿ ಕೋಟೆಗೆ ಲಗ್ಗೆ ಹಾಕಲು ಅಷ್ಟ ಸೂತ್ರಗಳನ್ನ ಭವಾನಿ ರೇವಣ್ಣ ರಚಿಸಿದ್ದಾರೆ ಎನ್ನಲಾಗಿದೆ. ಅದೇನು ಅಂತಾ ನೋಡೋದಾದ್ರೆ,

ಹಾಸನದಲ್ಲಿ ಅಷ್ಟ ದಿಗ್ಬಂಧನ!
ಹೆಚ್.ಡಿ.ರೇವಣ್ಣ ಸದ್ಯ ಹೊಳೆನರಸೀಪುರ ಕ್ಷೇತ್ರದ ಶಾಸಕ. ಇತ್ತ ಹೆಚ್‌.ಡಿ. ರೇವಣ್ಣರ ಪುತ್ರ ಪ್ರಜ್ವಲ್ ರೇವಣ್ಣ ಹಾಸನದ ಲೋಕಸಭಾ ಸದಸ್ಯ. ಇದೀಗ ಇನ್ನೊಬ್ಬ ಪುತ್ರ ಸೂರಜ್ ರೇವಣ್ಣರನ್ನ ಮೇಲ್ಮನೆಗೆ ಕಳುಹಿಸೋದು ಭವಾನಿ ರೇವಣ್ಣ ಅಷ್ಟದಿಗ್ಬಂಧನದ ಪ್ಲಾನ್ ಆಗಿದೆ. ಈ ಮೂಲಕ 2023ರ ವಿಧಾನಸಭಾ ಚುನಾವಣೆಗೆ ಭವಾನಿ ರೇವಣ್ಣ ಕೂಡಾ ಸಿದ್ಧತೆ ನಡೆಸ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯಲು ತೆರೆಮರೆಯಲ್ಲಿ ತಯಾರಿಯನ್ನೂ ಆರಂಭಿಸಿದ್ದಾರಂತೆ. ಈ ಮೂಲಕ ಪ್ರೀತಂಗೌಡ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ಭವಾನಿ ರೇವಣ್ಣ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಹಾಸನ ಕ್ಷೇತ್ರವನ್ನ ಕೇಂದ್ರೀಕರಿಸಿ ಮುಂದಿನ ಚುನಾವಣೆ ಎದುರಿಸೋದು ದೇವೇಗೌಡರ ಸೊಸೆಯ ರಣತಂತ್ರವಂತೆ.

ಅದೇನೆ ಇರ್ಲಿ ಚುನಾವಣೆ ಎದುರಾಗ್ತಿದ್ದಂತೆ ಪಕ್ಷಗಳು ನಾನಾ ತಂತ್ರಗಳನ್ನ ಹೆಣೆಯೋದು ಸಾಮಾನ್ಯ. ಆದ್ರೆ, ಈ ಪ್ಲಾನ್‌ಗಳು ವರ್ಕೌಟ್ ಆಗ್ಬೇಕು ಅಂದ್ರೆ ಆಯಾ ಕ್ಷೇತ್ರಗಳಲ್ಲಿ ನಾಯಕರ ಕಾರ್ಯಸಾಧನೆ ಕೂಡಾ ಅದರಂತೆ ಇರ್ಬೇಕು. ಹೀಗಾಗಿ ದಳಪತಿಗಳ ಅಷ್ಟದಿಗ್ಬಂಧನ ಅಸ್ತ್ರ ಹಾಸನ ಬಿಜೆಪಿಗೆ ಮಾರಕವಾಗುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವಿಶೇಷ ಬರಹ: ಹರೀಶ್ ಕಾಕೋಳ್, ನ್ಯೂಸ್‌ಫಸ್ಟ್, ಬೆಂಗಳೂರು

News First Live Kannada

Leave a comment

Your email address will not be published. Required fields are marked *