ಕಳೆದ ವರ್ಷ ಮಾದಕ ವ್ಯಸನ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ | Number of suicides result from drug abuse and alcoholism saw sharp spike last year home affairs Nityanand Rai told in Parliament


ಕಳೆದ ವರ್ಷ ಮಾದಕ ವ್ಯಸನ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ

ನಿತ್ಯಾನಂದ ರಾಯ್

ದೆಹಲಿ: ಮಾದಕ ವ್ಯಸನ ಮತ್ತು ಮದ್ಯಪಾನದಿಂದ ಉಂಟಾದ ಆತ್ಮಹತ್ಯೆಗಳ ಸಂಖ್ಯೆಯು ಹಿಂದಿನ ವರ್ಷಗಳಿಗಿಂತ ಕಳೆದ ವರ್ಷ ತೀವ್ರ ಏರಿಕೆ ಕಂಡಿದೆ ಎಂದು ಸಂಸತ್ತಿನಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳನ್ನು ಉಲ್ಲೇಖಿಸಿ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ (Nityanand Rai)  ಹೇಳಿದ್ದಾರೆ. “ಎನ್‌ಸಿಆರ್‌ಬಿ ಪ್ರಕಟಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 2018, 2019 ಮತ್ತು 2020 ರಲ್ಲಿ ಮಾದಕ ವ್ಯಸನ ಮತ್ತು ಮದ್ಯದ ಚಟದಿಂದಾಗಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ಕ್ರಮವಾಗಿ 7,193, 7,860 ಮತ್ತು 9,169 ಆಗಿದೆ ಎಂದು ರಾಯ್ ಹೇಳಿದ್ದಾರೆ. ಈ ಸಂಖ್ಯೆಗಳ ಪ್ರಕಾರ 2020 ರಲ್ಲಿ ಈ ಎರಡು ಸಮಸ್ಯೆಗಳಿಗೆ ಸಂಬಂಧಿಸಿದ ಆತ್ಮಹತ್ಯೆಗಳು ಹಿಂದಿನ ವರ್ಷಕ್ಕಿಂತ ಶೇ 16.65 ರಷ್ಟು ಏರಿಕೆ ಕಂಡಿವೆ. “ಯುವಕರಲ್ಲಿ ಮಾದಕ ದ್ರವ್ಯ ಸೇವನೆಯ ಸಮಸ್ಯೆಯನ್ನು ತಡೆಗಟ್ಟಲು ಸರ್ಕಾರವು ನಿರಂತರ ಮತ್ತು ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ರಾಯ್ ಹೇಳಿದರು. 272 ಅತ್ಯಂತ ದುರ್ಬಲ ಜಿಲ್ಲೆಗಳಲ್ಲಿ ನಶಾ ಮುಕ್ತ್ ಭಾರತ ಅಭಿಯಾನ, ವ್ಯಸನಿಗಳಿಗಾಗಿ 380 ಸಮಗ್ರ ಪುನರ್ವಸತಿ ಕೇಂದ್ರಗಳ ರಚನೆ, ದುರ್ಬಲ ಮಕ್ಕಳು ಮತ್ತು ಹದಿಹರೆಯದವರಿಗೆ ಸಮಸ್ಯೆ ಪರಿಹರಿಸಲು 80 ಸಮುದಾಯ ಆಧಾರಿತ ನೇತೃತ್ವದ ಆಪ್ತ ಸಮಾಲೋಚನೆ ಕೇಂದ್ರ, 93 ಔಟ್ರೀಚ್ ಮತ್ತು ಡ್ರಾಪ್-ಇನ್ ಕೇಂದ್ರಗಳ ಸ್ಥಾಪನೆ ಬಗ್ಗೆ ಹೇಳಿದ ಅವರು ಭಾರತದಾದ್ಯಂತ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಂಸತ್ತಿಗೆ ವಿವರಿಸಿದರು.
ದೇಶಾದ್ಯಂತ ಯುವಕರಲ್ಲಿ ಮಾದಕ ದ್ರವ್ಯ ಸೇವನೆಯನ್ನು ತಡೆಯಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಕೈಗೊಂಡ ಉಪಕ್ರಮಗಳು ಮತ್ತು ಜಾಗೃತಿ ಅಭಿಯಾನಗಳನ್ನು ರಾಯ್ ಪಟ್ಟಿ ಮಾಡಿದರು.

ಎನ್‌ಸಿಬಿ 2020 ರಲ್ಲಿ 10,195 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದು, ಈ ವರ್ಷ ಇಲ್ಲಿಯವರೆಗೆ 20,189 ಅಂತಹ ಕಾರ್ಯಕ್ರಮಗಳನ್ನು ನಡೆಸಿದೆ ಎಂದು ಅವರು ಹೇಳಿದರು. ಸೆಪ್ಟೆಂಬರ್‌ನಲ್ಲಿ ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ ವಾರ್ಷಿಕ ದತ್ತಾಂಶವು ಆತ್ಮಹತ್ಯೆ-ಸಂಬಂಧಿತ ಸಾವುಗಳಲ್ಲಿ ತೀವ್ರ ಏರಿಕೆಯನ್ನು ತೋರಿಸಿದೆ.

153,052 ಆತ್ಮಹತ್ಯೆ-ಸಂಬಂಧಿತ ಸಾವುಗಳು ಸಂಭವಿಸಿವೆ. ಅದು 1967ರ ನಂತರ ಅತಿ ಹೆಚ್ಚು. ಮಾದಕ ವ್ಯಸನ ಮತ್ತು ಮದ್ಯಪಾನ-ಸಂಬಂಧಿತ ಆತ್ಮಹತ್ಯೆಗಳು ಒಟ್ಟು ಸಂಖ್ಯೆಯ ಶೇ 17 ರಷ್ಟಿದೆ.

ಇದನ್ನೂ ಓದಿ: ಒಮಿಕ್ರಾನ್ ಆತಂಕ: ದೇಶಾದ್ಯಂತ ಕೊರೊನಾ ಕಂಟೇನ್​​ಮೆಂಟ್ ಕಾರ್ಯತಂತ್ರ ಡಿಸೆಂಬರ್ 31ರವರೆಗೆ ವಿಸ್ತರಣೆ

TV9 Kannada


Leave a Reply

Your email address will not be published. Required fields are marked *