ಚಿಕ್ಕಮಗಳೂರು: ವಾರದ ಹಿಂದೆ ತಾಯಿಯನ್ನ ಕಳೆದುಕೊಂಡಿದ್ದ ಯುವಕ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನ ಬಿಟ್ಟು ಕೊರೊನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.

ಮೃತನನ್ನ ಮದೀನ್(30) ಎಂದು ಗುರುತಿಸಲಾಗಿದೆ. ಇಂದು ರಂಜಾನ್ ಹಬ್ಬ. ಸಂಭ್ರಮ-ಸಡಗರ ನೆಲೆಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮದೀನ್ ತಾಯಿ ಶಾಯಿನ್‍ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮದೀನ್‍ನಲ್ಲೂ ಪಾಸಿಟಿವ್ ಬಂದಿದ್ದರಿಂದ ಅಮ್ಮನನ್ನೂ ನೋಡಿಕೊಂಡಂತೆ ಆಗುತ್ತೆ ಎಂದು ಆತನನ್ನೂ ನಗರದ ಕೆ.ಆರ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ವಾರ ಮದೀನ್ ತಾಯಿ ಶಾಯಿನ್ ಸಾವನ್ನಪ್ಪಿದ್ದರು. ಶಾಯಿನ್‍ರ ಅಂತ್ಯ ಸಂಸ್ಕಾರ ಮಾಡಿ ಬರುವಷ್ಟರಲ್ಲಿ ಮದೀನ್ ಸ್ಥಿತಿ ಕೂಡ ಗಂಭೀರವಾಗಿತ್ತು. ಕೆ.ಆರ್.ಎಸ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಯ್ತು ಎಂದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಮದೀನ್ ಕೂಡ ಸಾವನ್ನಪ್ಪಿದ್ದಾರೆ

ಆರೋಗ್ಯವಾಗಿದ್ದ ಮದೀನ್ ತಾಯಿ ತೀರಿಕೊಂಡ ಬಳಿಕ ತೀವ್ರ ಅಸ್ವಸ್ಥನಾಗಿದ್ದರು. ಕಳೆದೊಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಮದೀನ್ ಇಂದು ಕೊನೆಯುಸಿರೆಳೆದಿದ್ದಾರೆ. ಆರೋಗ್ಯವಾಗಿದ್ದ ಮಗ ಹೇಗೆ ಸತ್ತ ಎಂದು ಮದೀನ್ ತಂದೆ ಶಫಿವುಲ್ಲಾ ಆತಂಕಕ್ಕೀಡಾಗಿದ್ದಾರೆ. ಒಂದು ಕ್ವಿಂಟಾಲ್ ಅಕ್ಕಿ ಮೂಟೆಯನ್ನ ಎತ್ತಿ ಎಸೆಯುತ್ತಿದ್ದ. ಅಷ್ಟು ಗಟ್ಟಿ ಇದ್ದವನು ಹೇಗೆ ವೀಕ್ ಆದ ಸಾವನ್ನಪ್ಪಿದ ಎಂದು ಕಂಗಾಲಾಗಿದ್ದಾರೆ.

ನಿನ್ನೆ ರಾತ್ರಿ 1 ಗಂಟೆವರೆಗೆ ಸ್ನೇಹಿತರ ಜೊತೆ ಮಾತನಾಡಿರುವವನು ಇಂದು ಬೆಳಗ್ಗಿನ ಜಾವ ಸತ್ತಿದ್ದಾನೆ ಅಂದರೆ ನಂಬಲು ಅಸಾಧ್ಯ ಎಂದು ತಂದೆ ಶಫಿವುಲ್ಲಾ ನೊಂದಿದ್ದಾರೆ. ನೊಂದ ತಂದೆ ಕೊರೊನಾ ಬಂತು ಅಂತ ಆಸ್ಪತ್ರೆಗೆ ಹೋಗಬೇಡಿ. ಆಸ್ಪತ್ರೆಗೆ ಹೋದರೆ ಕಥೆ ಮುಗಿಯಿತು. ಮನೆಯಲ್ಲೇ ಕಷಾಯ ಕುಡಿದು ಹುಷಾರಾಗಿ. ಆಸ್ಪತ್ರೆಗೆ ಹೋದರೆ ವಾಪಸ್ ಬರಲ್ಲ ಎಂದು ಅಸಮಾಧಾನದ ಹೊರಹಾಕಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌತಳ್ಳಿ ಗ್ರಾಮದ 22 ವರ್ಷದ ಯುವಕ ಶ್ರೇಯಸ್ ಕೂಡ ಇದೇ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಶಿವಗಿರಿ ಸೇವಾ ಯುವಕರ ತಂಡ ಆತನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಎರಡು ದಿನದಲ್ಲಿ ಮೂವರು ಹದಿಹರೆಯದ ಯುವಕರು ಸಾವನ್ನಪ್ಪಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.

The post ಕಳೆದ ವಾರ ಅಮ್ಮ, ಇಂದು ಮಗ – ಹಬ್ಬದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ appeared first on Public TV.

Source: publictv.in

Source link