ಕಳ್ಳಬಟ್ಟಿ ಸೇವನೆಯಿಂದ ಬಿಹಾರದ ಎರಡು ಜಿಲ್ಲೆಗಳಲ್ಲಿ 24 ಜನರ ಸಾವು | 24 dead in two Bihar districts after consuming suspected spurious liquor


ಕಳ್ಳಬಟ್ಟಿ ಸೇವನೆಯಿಂದ ಬಿಹಾರದ ಎರಡು ಜಿಲ್ಲೆಗಳಲ್ಲಿ 24 ಜನರ ಸಾವು

ಪ್ರಾತಿನಿಧಿಕ ಚಿತ್ರ

ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ 8 ಹಾಗೂ ಗೋಪಾಲ್​ಗಂಜ್ ಜಿಲ್ಲೆಯಲ್ಲಿ 16 ಸೇರಿದಂತೆ ಒಟ್ಟು 24 ಮಂದಿ ಕಳ್ಳಬಟ್ಟಿ ಸೇವಿಸಿ ಮೃತಪಟ್ಟಿದ್ದಾರೆ. ಹಲವಾರು ಜನರು ಅಸ್ವಸ್ಥರಾಗಿದ್ದಾರೆ. ಬಿಹಾರದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದ್ದರೂ ಈ ದುರ್ಘಟನೆ ನಡೆದಿದೆ.

ಪಶ್ಚಿಮ ಚಂಪಾರಣ್ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಬೆಟ್ಟಯಾ ಸಮೀಪದ ತೆಲ್ಹುವಾ ಗ್ರಾಮದಲ್ಲಿ ಎಂಟು ಮಂದಿ ಕಳ್ಳಬಟ್ಟಿ ಸೇವಿಸಿ ಸಾವನ್ನಪ್ಪಿದ್ದಾರೆ. ಗೋಪಾಲ್​ಗಂಜ್​ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಸತ್ತವರ ಸಂಖ್ಯೆಯು 16ಕ್ಕೆ ಮುಟ್ಟಿದೆ. ಸತ್ತವರ ಸಂಖ್ಯೆಯನ್ನು ಜಿಲ್ಲಾಡಳಿತ ದೃಢಪಡಿಸಿದೆ. ಎರಡೂ ಜಿಲ್ಲಾಡಳಿತಗಳು ಸಾವಿನ ಕಾರಣವನ್ನು ದೃಢಪಡಿಸಿಲ್ಲ. ಕಳೆದ 10 ದಿನಗಳಲ್ಲಿ ವರದಿಯಾಗಿರುವ 10ನೇ ಕಳ್ಳಬಟ್ಟಿ ದುರಂತ ತೆಲ್ಹುವಾ ಗ್ರಾಮದ್ದು.

ಗೋಪಾಲ್​ಗಂಜ್​ಗೆ ಸಚಿವ ಜನಕ್ ರಾಮ್ ಧಾವಿಸಿದ್ದಾರೆ. ‘ನಾನು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದೆ. ಅವರು ಕಳ್ಳಬಟ್ಟಿ ಸೇವಿಸಿ ಸಾವನ್ನಪ್ಪಿದ್ದಾರೆ ಎನ್ನಲು ಯಾವುದೇ ಆಧಾರವಿಲ್ಲ. ಎನ್​ಡಿಎ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆಯುತ್ತಿರುವ ಷಡ್ಯಂತ್ರ ಇದಾಗಿರಬಹುದು ಎಂದು ಅವರು ಪ್ರತಿಕ್ರಿಯಿಸಿದರು. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ವರ್ತಕರು ಮಾರಿದ್ದ ಮದ್ಯವನ್ನು ಸುಮಾರು 20 ಮಂದಿ ಸೇವಿಸಿದ್ದಾರೆ. ಇವರೆಲ್ಲರೂ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಜೆಡಿಯು ಸರ್ಕಾರವು ಏಪ್ರಿಲ್ 5, 2016ರಂದು ರಾಜ್ಯದಲ್ಲಿ ಮದ್ಯ ತಯಾರಿಕೆ, ಮಾರಾಟ, ದಾಸ್ತಾನು, ಸಾಗಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

ಇದೀಗ ಸಂಭವಿಸಿರುವ ಈ ದುರಂತವು ರಾಜಕೀಯ ಕೆಸರೆರೆಚಾಟಕ್ಕೂ ವೇದಿಕೆ ಕಲ್ಪಿಸಿದೆ. ರಾಜ್ಯ ಸರ್ಕಾರವು ಮದ್ಯ ನಿಷೇಧವನ್ನು ಸರಿಯಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಮರಣೋತ್ತರ ಪರೀಕ್ಷೆಗೆ ಮೊದಲೇ ಪೊಲೀಸರು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಈ ದುರಂತದ ಹೊಣೆ ಹೊರಬೇಕು ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸರ್ಕಾರವನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 3 ಸಾವು; ಮದ್ಯ ನಿಷೇಧವಿರುವ ಇಲ್ಲಿ ಈ ವರ್ಷ ನಕಲಿ ಮದ್ಯ ಸೇವಿಸಿ ಸಾವಿಗೀಡಾದವರು 70 ಮಂದಿ
ಇದನ್ನೂ ಓದಿ: ಉಪ ಚುನಾವಣೆ: ಬಿಹಾರದಲ್ಲಿ ಜೆಡಿಯು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಗೆಲುವು

TV9 Kannada


Leave a Reply

Your email address will not be published. Required fields are marked *