ಸಂಚಾರಿ ವಿಜಯ್ ಅನ್ನೋ ಸ್ನೇಹ ಜೀವಿ ದೊಡ್ಡ ಸ್ನೇಹ ಲೋಕವನ್ನೇ ಸೃಷ್ಟಿಸಿಕೊಂಡಿದ್ದರು. ಅವರ ಸ್ನೇಹ ಲೋಕದಲ್ಲಿ ದೊಡ್ಡವರು ಸಣ್ಣವರು ಸಿರಿವಂತರ ಬಡವರು ಅನ್ನೋ ಭೇದಭಾವ ಇರಲೇ ಇಲ್ಲ. ತನ್ನ ಸಮಾನ ವಯಸ್ಕರ ಜೊತೆ ಹೇಗೆ ಸ್ನೇಹ ಬಾಂಧವ್ಯವನ್ನ ಇಟ್ಟುಕೊಂಡಿದ್ದರೋ ಅಷ್ಟೇ ಉತ್ತಮ ಗೆಳೆತನವನ್ನ ದೊಡ್ಡವರಲ್ಲೂ ಇಟ್ಟುಕೊಂಡಿದ್ದರು.

ಬೈಕ್​​​​​ನಲ್ಲಿ ಮನೆಗೆ ಹೋಗುವಾಗ ಆಕ್ಸಿಡೆಂಟ್ ಆಗಿದೆ ಅಂತೆ, ಇವ್ರು ಹಿಂದೆ ಕೂತಿದ್ರಂತೆ, ಬಲಭಾಗದ ಮೆದುಳಿಗೆ ಪಟ್ಟಾಗಿದೆಯಂತೆ, ರಾತ್ರಿನೇ ಆಪರೇಷನ್ ಮಾಡಿದ್ದಾರಂತೆ, ಈಗ ಕೊಂಚ ರೆಸ್ಪಾನ್ಸ್ ಮಾಡ್ತಿದ್ದಾರಂತೆ; ಇಷ್ಟೆಲ್ಲ ಅಂತೆ ಕಂತೆಗಳ ಸಮಾಚಾರಗಳು ಸಂಚಾರಿ ವಿಜಯ್ ಅವರ ಬಗ್ಗೆ ಹೊರ ಬರುತ್ತಿದ್ದಾಗ ಎಲ್ಲರಲ್ಲೋ ಒಂದೇ ಬೇಡಿಕೆ : ಅವರಿಗೇನು ಆಗಬಾರದು, ಅವರು ನಮ್ಮನ ಬಿಟ್ಟು ಹೋಗಬಾರದು ಅಂತ ಪ್ರಾರ್ಥಿಸಿದ್ರು. ಆದ್ರೆ ಎಲ್ಲರನ್ನೂ ಪ್ರೀತಿಸುವ ಮನಸೊಂದು ನೋಡ ನೋಡುತ್ತಿದಂಗೆ ಕಣ್ಮರೆಯಾಗಿಯೇ ಬಿಡ್ತು.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದವರು ಸಂಚಾರಿ ವಿಜಯ್
ಬಹಳಷ್ಟು ಮಂದಿಯ ಪ್ರಕಾರ ಸಂಪಾದನೆ ಅಂದ್ರೆ ದುಡ್ಡು ಮಾಡೋದು ಆಸ್ತಿ-ಅಂತಸ್ತು ಮಾಡೋದು ಅಂತ ಅರ್ಥ. ಆದ್ರೆ ಕೆಲವೇ ಕೆಲವು ಮನಸುವುಳ ಮನುಷ್ಯರಲ್ಲಿ, ಸಂಪಾದನೆ ಅಂದ್ರೆ ಜನರನ್ನ ಗಳಿಸೋದು, ಎಲ್ಲರನ್ನ ಸ್ನೇಹದಿಂದ ಕಾಣೋದು, ಪ್ರೀತಿ ವಿಶ್ವಾಸ ಗೌರವದಿಂದ ಬೆರೆಯೋದು ಅಂತ ಅರ್ಥ. ಈ ಎರಡನೇ ಕ್ಯಾಟಗರಿಯವರಾಗಿದ್ದವರು ಸಂಚಾರಿ ವಿಜಯ್. ಮತ್ತೊಬ್ಬರ ಮೊಗದಲ್ಲಿ ಸಣ್ಣ ನಗುವನ್ನ ಅರಳಿಸದ ವ್ಯಕ್ತಿಯ ಜೀವನಕ್ಕೆ ಏನ್ ಅರ್ಥ ಹೇಳಿ? ಸಂಚಾರಿ ಇದ್ದಲ್ಲಿ ಸ್ನೇಹ ಪ್ರೀತಿ ವಿಶ್ವಾಸ ಅಭಿಮಾನ ಸಂಚಾರಿಸುತ್ತಿತ್ತು. ಈ ಕ್ಷಣದಲ್ಲೇ ವಿಜಯ್ ಅವರನ್ನ ಪರಿಚಯವಾದ್ರು ಅವರನ್ನ ಆಕರ್ಷಿಸುವ ವ್ಯಕ್ತಿ ಅವರಾಗಿದ್ದರು. ಈ ಕಾರಣಕ್ಕೆ ಸಂಚಾರಿ ವಿಜಯ್ ಅಗಲಿಕೆಗೆ ಇಡೀ ಕಲಾಲೋಕ ‘‘ಅಯ್ಯೋ ಇದು ಅನ್ಯಾಯ’’ ಎಂದು ಪರಿತಪಿಸಿದ್ದು.

ಭಾವನೆಗಳನ್ನ ಅರ್ಥ ಮಾಡಿಕೊಳ್ಳೋ ಶಕ್ತಿ ಮನುಷ್ಯ ಜನ್ಮಕ್ಕಿದೆ. ದೊಡ್ಡ ಸವಾಲನ್ನು ದೂರಾಗಿಸೋ ಶಕ್ತಿ ಸ್ನೇಹಕ್ಕಿದೆ. ಕಷ್ಟದಲ್ಲೇ ಇದ್ದರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದವರು ಸಂಚಾರಿ ವಿಜಯ್. ಲಾಕ್​​ಡೌನ್​​ನಲ್ಲಿ ಅದೆಷ್ಟೋ ತನ್ನ ಸ್ನೇಹ ಬಳಗದ ಕುಟುಂಬಗಳಿಗೆ ಹೇಳದೆ-ಕೇಳದೆ ಕಷ್ಟಗಳನ್ನ ಅರಿತು ಫುಡ್ ಕಿಟ್ , ಹೆಲ್ತ್ ಕಿಟ್​ಗಳನ್ನ ಕೊಟ್ಟು ಬಂದಿದ್ದರು. ತನ್ನ ಕಾರನೇ ಮಾರಿ ತನ್ನವರಿಗೆ ಸಹಾಯ ಹಸ್ತ ಚಾಚಿದ್ದರು. ಇದೇ ರೀತಿ ಉತ್ತರ ಕರ್ನಾಟಕದ ಪ್ರತಿಭೆ ಸೋನು ಪಾಟೀಲ್ ಅವರಿಗೂ ಸಹಾಯದ ಹಸ್ತವನ್ನ ಚಾಚಿಬಂದಿದ್ದರು ಸಂಚಾರಿ.

ಸಂಚಾರಿ ವಿಜಯ್ ಅವರ ಸ್ನೇಹಕ್ಕೆ ವಯಸ್ಸಿನ ವಯೋಮಿತಿ ಇರಲಿಲ್ಲ. ದೊಡ್ಡವರನ್ನಾಗಿ ಸಣ್ಣವರನ್ನಾಗಲಿ ಸಮಾನ ಸ್ನೇಹ ಮನದಿಂದ ಕಾಣುತ್ತಿದ್ದರು. ಸೋನು ಪಾಟೀಲ್ ಅವರಿಗೆ 90 ವರ್ಷ ಮೀರಿದ ಅಜ್ಜಿಯೊಬ್ಬರಿದ್ದಾರೆ. ಆ ಅಜ್ಜಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರನ್ನ ತುಂಬಾನೇ ಹಚ್ಚಿಕೊಂಡಿದ್ದಾರೆ. ಪ್ರತಿ ಭಾರಿ ಸೋನು ಪಾಟೀಲ್ ತನ್ನ ಅಜ್ಜಿಗೆ ಫೋನ್ ಮಾಡಿದಾಗೆಲ್ಲ ‘‘ನಂಗ ಗಾಡಿ ಮ್ಯಾಗ ಕರ್ಕೋ ಹೋಗಿದ್ನಲ್ಲ, ಸಂಚಾರಿ ವಿಜಯ್ ಹೆಂಗೌವ್ನೇ’’ ಅಂತ ಕೇಳ್ತಾನೇ ಇರ್ತಾರಂತೆ. ಆದ್ರೆ ಸಂಚಾರಿ ವಿಜಯ್ ಅಗಲಿಕೆಯ ವಿಚಾರ ಸೋನು ಪಾಟೀಲ್ ಅವರ ಅಜ್ಜಿಗೆ ಗೊತ್ತೇ ಇರಲಿಲ್ಲ.

ಅಷ್ಟಕ್ಕೂ ಸೋನು ಪಾಟೀಲ್ ಅವರ ಅಜ್ಜಿಗೆ ಸಂಚಾರಿ ವಿಜಯ್ ಅವರಿಗೆ ಹೇಗೆ ಪರಿಚಯ ? ಸಂಚಾರಿ ವಿಜಯ್ ಅವರ ಅಗಲಿಕೆಯ ವಿಚಾರ ಸೋನು ಪಾಟೀಲ್ ಅವರ ಅಜ್ಜಿಗೆ ಗೊತ್ತಿಲ್ವಾ? ಅನ್ನೋದನ್ನ ಸ್ವತಃ ಸೋನು ಪಾಟೀಲ್ ಅವರೇ ಮನಮುಟ್ಟುವ ಹಾಗೇ ಹೇಳ್ತಾರೆ.

ಶ್ರೀ ಗುರು ಕೊಟ್ಟೂರೇಶ ಸಿನಿಮಾದ ಶೂಟಿಂಗ್​​ನಲ್ಲಿ ಬಾಗಕೋಟೆ ಜಿಲ್ಲೆಯ ಸೋನು ಪಾಟೀಲ್ ಅವರ ಅಜ್ಜಿಯನ್ನ ಪರಿಚಯ ಮಾಡಿಕೊಂಡಿದ್ದರು ಸಂಚಾರಿ. ಅಜ್ಜಿ ಜೊತೆಗೆ ಪ್ರೀತಿಯಿಂದ ಮಾತನಾಡುತ್ತಾ ಅವರ ಪ್ರೀತಿ-ವಿಶ್ವಾಸ-ಆಶೀರ್ವಾದ ಪಡೆದಿದ್ದರು. ಸೋನು ಪಾಟೀಲ್ ಅವರ ಅಜ್ಜಿ , ಸಂಚಾರಿ ವಿಜಯ್ ಸಾವಿನ ವಿಚಾರ ಕೇಳಿ ಭಾರಿ ದುಖಃ ಪಡುತ್ತಿದ್ದಾರಂತೆ, ಒಂದು ದಿನ ಪೂರ್ತಿ ಊಟ ಮಾಡಿಲ್ವಂತೆ ಆ ಹಿರಿಯ ಜೀವ.

ಸಂಚಾರಿ ವಿಜಯ್ ಇದೇ ರೀತಿ ತಾನು ಗಳಿಸಿದ ಸ್ನೇಹ ಲೋಕವನ್ನ ಅರ್ಧದಾರಿಯಲ್ಲೇ ಬಿಟ್ಟು ಹೋಗಿರೋದು ನಿಜಕ್ಕೂ ವಿಷಾದದ ವಿಚಾರ. ಸಂಚಾರಿ ವಿಜಯ್ ಅವರ ಅಗಲಿಕೆಯಿಂದ ಅವರ ಸ್ನೇಹ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಸಂಚಾರಿ ವಿಜಯ್ ಅನ್ನೊ ಚಿನ್ನದ ಮನಸುಳ್ಳ ಮನುಷ್ಯ ಇಲ್ಲದಿದ್ದರು ಅವರ ನೆನಪು ಸದಾ ಎಲ್ಲರ ಮನದಲ್ಲೂ ಅಮರ.

The post ಕಷ್ಟದಲ್ಲಿದ್ದವರಿಗೆ ಸಹಾಯ.., ಸಂಚಾರಿ ವಿಜಯ್ ಸಂಪಾದಿಸಿದ ದೊಡ್ಡ ಆಸ್ತಿ ‘ಸ್ನೇಹ’ appeared first on News First Kannada.

Source: newsfirstlive.com

Source link