ಮಂಗಳೂರು: ಲಸಿಕೆ ವಿತರಣಾ ಕೇಂದ್ರಗಳಲ್ಲಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಖಂಡರು ಹವಣಿಸುತ್ತಿದ್ದಾರೆ. ಅವರ ಈ ಪ್ರಯತ್ನದಿಂದ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವೇದವ್ಯಾಸ ಕಾಮತ್, ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುವುದು ಬಿಟ್ಟು, ಬಿಕ್ಕಟ್ಟು ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‍ನವರು ಪ್ರಯತ್ನಿಸುತ್ತಿದ್ದಾರೆ. ಲಸಿಕೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಹಬ್ಬಿಸಿ ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ ಉಂಟಾಗುವ ಪರಿಸ್ಥಿತಿ ನಿರ್ಮಿಸುವ ಕಾರ್ಯ ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ. ಆ ಮೇಲೆ ಫ್ಲೆಕ್ಸ್ ಹಿಡಿದು ಪ್ರತಿಭಟನೆ ನಡೆಸುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡಲು ವಿಫಲ-ಐವನ್ ಡಿಸೋಜಾ ನೇತೃತ್ವದಲ್ಲಿ ಪ್ರತಿಭಟನೆ

ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಮುಖಂಡರು ತಮ್ಮ ಸಲಹೆಗಳೇನಾದರೂ ಇದ್ದರೆ ಜಿಲ್ಲಾಡಳಿತಕ್ಕೆ ನೀಡಲಿ. ಅದು ಬಿಟ್ಟು ರಾಜಕೀಯ ಹೇಳಿಕೆಗಳಲ್ಲೇ ಕಾಲಹರಣ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ.

ಲಸಿಕೆ ನೀಡುವ ಮುಂಚಿನ ದಿನವಷ್ಟೇ ಲಸಿಕೆ ಬರುವ ಕುರಿತು ಖಾತ್ರಿಯಾಗುತ್ತದೆ. ಆ ಕಾರಣಕ್ಕಾಗಿ ಜನರಿಗೆ ಲಸಿಕೆ ನೀಡುವ ದಿನ ಪತ್ರಿಕೆಗಳಲ್ಲಿ ಮಾಹಿತಿ ನೀಡಲಾಗುತ್ತದೆ. ಜಿಲ್ಲಾಡಳಿತದ ವ್ಯವಸ್ಥೆಯಡಿಯಲ್ಲಿ ಟೋಕನ್ ನೀಡಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಆಡಳಿತ ವ್ಯವಸ್ಥೆ ಮೇಲೆ ಜನ ಸಾಮಾನ್ಯರನ್ನು ಎತ್ತಿಕಟ್ಟಲು ಕಾಂಗ್ರೆಸ್ ಹಬ್ಬಿಸುವ ಸುಳ್ಳು ಪ್ರಚಾರದಿಂದ ಜನರು ಮುಂಜಾನೆ 3 ಗಂಟೆಗೆ ಸರತಿ ಸಾಲಿನಲ್ಲಿ ನಿಲ್ಲುವುದು, ಕಾದು ಕೂರುವ ಘಟನೆಗಳು ಆಗುತ್ತಿದೆ. ಅನಗತ್ಯ ಸುಳ್ಳು ಸುದ್ದಿಗಳನ್ನು ನಂಬದೆ ಸಾರ್ವಜನಿಕರು ಲಸಿಕೆ ಸಿಗುವ ದಿನ ಲಸಿಕಾ ಕೇಂದ್ರಗಳಿಗೆ ಬರಬೇಕು ಎಂದು ಕಾಮತ್ ಮನವಿ ಮಾಡಿಕೊಂಡರು.

The post ಕಾಂಗ್ರೆಸಿಗರ ಅಪಪ್ರಚಾರದಿಂದ ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ- ವೇದವ್ಯಾಸ್ ಕಾಮತ್ appeared first on Public TV.

Source: publictv.in

Source link

Leave a comment