ಕಾಂಗ್ರೆಸ್​​​ನಲ್ಲಿ ಬಣ ರಾಜಕೀಯದ ಕಿಡಿ..? ಬಿಜೆಪಿ ಟ್ವೀಟ್ ಅಸ್ತ್ರಕ್ಕೆ ಡಿಕೆಎಸ್​ ಕೆಂಡಾಮಂಡಲ


ಬಿಜೆಪಿ ವಿರುದ್ಧ ಬಿಟ್ಟುಬಿಡದೇ ‘ಬಿಟ್​’ ಯುದ್ಧ ನಡೆಸುತ್ತಿರೋ ಕಾಂಗ್ರೆಸ್ ಮನೆಯಲ್ಲಿ ಸದ್ಯ ಬಣ ರಾಜಕೀಯದ ಬೆಂಕಿ ಹೊತ್ತಿಕೊಂಡಿದೆ. ನಿನ್ನೆ ನಡೆದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಭೆಯಲ್ಲಿ ಸಿದ್ದು-ಡಿಕೆಶಿ ನಡುವಿನ ಒಡುಕು ಬಹಿರಂಗವಾಗಿದೆ. ಇನ್ನು ಕೈ ಮನೆಯಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಟ್ವೀಟ್ ಅಸ್ತ್ರ ಪ್ರಯೋಗಿಸಿದೆ.

ಏಯ್​ ವ್ಯಕ್ತಿ ಪೂಜೆ ಇಲ್ಲ. ಕಾಂಗ್ರೆಸ್​ ಪಾರ್ಟಿ ಪೂಜೆ ಅಷ್ಟೇ. ಬೂಟಾಟಿಕೆ ಎಲ್ಲಾ ಬಿಟ್ಟು ಬನ್ನಿ.. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿ ಕೈ ಕಾರ್ಯಕರ್ತರಿಗೆ ವಾರ್ನ್ ಮಾಡಿದ ಪರಿಯಿದು. ಡಿಕೆ ಶಿವಕುಮಾರ್ ಹೀಗೆ ಹೇಳಿದ್ದೇ ತಡ ಕಾಂಗ್ರೆಸ್ ಪಾಳಯದಲ್ಲಿ ತಣ್ಣಗಾಗಿದ್ದ ಬಣ ರಾಜಕೀಯದ ಕಿಡಿ ಮತ್ತೆ ಹೊತ್ತಿಕೊಂಡಿದೆ. ವ್ಯಕ್ತಿಪೂಜೆ ವಿವಾದ ಮತ್ತೆ ಜೇವ ಪಡೆದುಕೊಂಡಿದೆ.

ನಿನ್ನೆ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಕೈ ಮನೆಯಲ್ಲಿನ ಒಡಕನ್ನು ಬಟಾಬಯಲುಗೊಳಿಸಿತ್ತು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಕಾರ್ಯಕರ್ತರಿಂದ ಡಿಕೆ ಡಿಕೆ ಎಂಬ ಘೋಷಣೆಗಳು ಮೊಳಗಿದವು. ಇದರಿಂದ ಬೇಸರಗೊಂಡ ಸಿದ್ದರಾಮಯ್ಯ ಅರ್ಧಕ್ಕೆ ತಮ್ಮ ಭಾಷಣವನ್ನು ಮೊಟಕುಗೊಳಿಸಿದ್ರು. ಬಳಿಕ ಡಿಕೆ ಶಿವಕುಮಾರ್ ವ್ಯಕ್ತಿ ಪೂಜೆ ಸಲ್ಲದು ಅಂತಾ ಹೇಳಿದ್ದು ಕಾರ್ಯಕರ್ತರ ಹೆಗಲ ಮೇಲೆ ಬಂದೂಕಿಟ್ಟು ಸಿದ್ದರಾಮಯ್ಯರತ್ತ ಪರೋಕ್ಷವಾಗಿ ಗುಂಡು ಹಾರಿಸಿದಂತಿತ್ತು.

ಇನ್ನು ಕಾಂಗ್ರೆಸ್​ನ ಬಿಟ್​​ ಬಾಣಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಬಿಜೆಪಿ ಹಸ್ತ ಪಾಳಯದ ಬಣ ರಾಜಕೀಯವನ್ನೇ ಗುರಾಣಿಯಾಗಿಸಿಕೊಂಡಿದೆ. ಕೈ ಪಾಳಯದ ಬಣ ಬೆಂಕಿಗೆ ಟ್ವೀಟ್​ ಮೂಲಕ ಮತ್ತಷ್ಟು ತುಪ್ಪ ಸುರಿದಿದೆ.

ಬಣ ರಾಜಕಾರಣ ಅನಾವರಣ

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ “ಡಿಕೆ ಡಿಕೆ” ಎಂಬ ಘೋಷಣೆ. ಅಲ್ಲಿಗೆ ಕಾಂಗ್ರೆಸ್ ಬಣ ರಾಜಕಾರಣದ ಇನ್ನೊಂದು ಮುಖ ಅನಾವರಣಗೊಂಡಿದೆ. ಒಡೆದ ಮನೆಯಾಗಿರುವ ಕಾಂಗ್ರೆಸ್‌ನಲ್ಲಿ ಇದು ಸಾಮಾನ್ಯವಲ್ಲವೇ?

ಕರ್ನಾಟಕ ಬಿಜೆಪಿ

ಇನ್ನು ಬಿಜೆಪಿ ಟ್ವೀಟ್ ಮೂಲಕ ಕೈ ಪಡೆ ಮೇಲೆ ಮುಗಿಬೀಳುತ್ತಿದ್ದಂತೆ ಡಿಕೆ ಶಿವಕುಮಾರ್​ ಕೂಡ ಕೌಂಟರ್​ ಅಟ್ಯಾಕ್ ಮಾಡಿದ್ದಾರೆ. ಮೆಂಟಲ್​​ ಗಿರಾಕಿಗಳಿಗೆಲ್ಲ ಉತ್ತರಿಸೋಲ್ಲ ಅಂತಾ ಕಟು ಶಬ್ದಗಳಲ್ಲೇ ತಿರುಗೇಟು ನೀಡಿದ್ದಾರೆ.

‘ಮೆಂಟಲ್ ಗಿರಾಕಿಗಳಿಗೆ ಉತ್ತರಿಸಲ್ಲ’

ಯಾರೋ ಬಿಜೆಪಿ, ಮೆಂಟಲ್ ಗಿರಾಕಿಗಳಿಗೆ ಉತ್ತರ ಕೊಡಲು ಸಾಧ್ಯ ಇಲ್ಲ. ಮೊದಲು ಅವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣ ನೋಡಿಕೊಳ್ಳಲಿ. ಸಿದ್ದರಾಮಯ್ಯನವರು ಪುನೀತ್ ಕಾರ್ಯಕ್ರಮಕ್ಕೆ ಹೋಗಲು ಬೇಗ ಭಾಷಣ ಮುಗಿಸಿದ್ರು ಅಷ್ಟೇ. ಅವರೆಲ್ಲ ನನ್ನ ಕಾರ್ಯಕರ್ತರು, ಕೆಲವೊಮ್ಮೆ ಅವರ ಮೇಲೆ ಸಿಟ್ಟಾಗ್ತೀನಿ, ಕೆಲವೊಮ್ಮೆ ಪ್ರೀತಿ ತೋರಿಸ್ತೀನಿ, ಕೆಲವೊಮ್ಮೆ ಸಾಫ್ಟ್ ಆಗಿರ್ತೀನಿ. ಅದು ನನ್ನ ಆಟಿಟ್ಯೂಡ್. ನಾನು‌ ನನ್ನ ಆಟಿಟ್ಯೂಡ್ ಚೇಂಜ್ ಮಾಡಿಕೊಳ್ಳಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಪುನೀತ್ ಕಾರ್ಯಕ್ರಮಕ್ಕೆ ತೆರಳುವುದಕ್ಕಾಗಿ ಭಾಷಣ ಬೇಗ ಮುಗಿಸಿದ್ದಾಗಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಾಗಿದೆ ಅಂತಾ ಹೇಳೋ ಮೂಲಕ ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ. ಆದರೆ ಬೆಂಕಿ ಇಲ್ಲದೇ ಹೊಗೆಯಾಡೋದಿಲ್ಲ. ಸದ್ಯ ಹಸ್ತದ ದೋಣಿಗೆ ಬಣ ರಾಜಕೀಯದ ತೂತು ಬಿದ್ದಿದ್ದು, ಇದೇ ಅಸ್ತ್ರವನ್ನು ಬಳಸಿಕೊಂಡು ಕೈ ಪಡೆಯನ್ನು ಮುಳುಗಿಸಲು ಕಮಲ ಪಾಳಯ ತಂತ್ರ ಹೆಣೆಯುತ್ತಿದೆ.

ವಿಶೇಷ ಬರಹ: ಗಣಪತಿ, ನ್ಯೂಸ್​ಫಸ್ಟ್, ಬೆಂಗಳೂರು

News First Live Kannada


Leave a Reply

Your email address will not be published. Required fields are marked *