ಬೆಂಗಳೂರು: ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಹಾಗೂ ಅವರ ಬೆಂಬಲಿಗರ ವಿರುದ್ಧ ಮತ್ತೊಂದು ಹಲ್ಲೆ ಆರೋಪ ಕೇಳಿಬಂದಿದೆ. ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಯಲಹಂಕದ ಕ್ಲಬ್ನಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ನೀನು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಗೌಡ ಕಡೆಯವ ಎಂದು ಹೇಳಿ ನಲಪಾಡ್ ಹಲ್ಲೆ ಮಾಡಿದ್ದಾರೆ. ಸಿದ್ದು ಹಳ್ಳೇಗೌಡರ ತಮ್ಮ, ಸ್ನೇಹಿತ ಹಾಗೂ ಕಾರು ಚಾಲಕನ ಮೇಲೂ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಲಪಾಡ್ ಸ್ನೇಹಿತರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸಿದ್ದು ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಸಿದ್ದುಗೌಡ ಮಾಡಿರುವ ಆರೋಪ ಏನು..?
ನಲಪಾಡ್ JW Marriott ಹೋಟೆಲ್ನಲ್ಲಿ ಮಧ್ಯಾಹ್ನ Get Together ರೀತಿಯಲ್ಲಿ ಪೂರ್ವಭಾವಿ ಸಭೆ ಕರೆದ್ದರು. ಅಲ್ಲಿ ಪೂರ್ವಭಾವಿ ಸಭೆಯ ರೀತಿಯಲ್ಲಿ ಸಭೆ ನಡೆಸಿದ್ದರು. ಆ ಕ್ಷಣದಲ್ಲಿ ನಾನು ಮುಂದಿನ ಅಧ್ಯಕ್ಷನಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಅಂತಾ ನಲಪಾಡ್ ಪ್ರಸ್ತಾಪಿಸಿದರು.
ರಾತ್ರಿ ಯಲಹಂಕದ ಒಂದು ಕ್ಲಬ್ನಲ್ಲಿ ಭೋಜನಕ್ಕೆ ಕರೆದು ‘ಏನಲೇ ನೀವು ಮಂಜುಗೌಡಗೆ ಸಪೋರ್ಟ್ ಮಾಡುತ್ತೀಯಾ?’ ಎಂದು ಜಿಲ್ಲಾಧ್ಯಕ್ಷರಾದ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆ. ಮತ್ತು ಅವರ ತಮ್ಮ ಹಾಗೂ ಸ್ನೇಹಿತನ ಮೇಲೆ ಹಾಗೂ ಕಾರು ಚಾಲಕನ ಮೇಲೂ ಹಲ್ಲೆ ನಡೆಸಿರುತ್ತಾರೆ. ಅಲ್ಲಿಂದ ಅವರನ್ನು ರಾಜ್ಯ ಉಪಾಧ್ಯಕ್ಷರಾದ ಮಂಜುಗೌಡ ಅವರ ವಾಹನವನ್ನು ಹಿಂಬಾಲಿಸಿ ಬಂದು ಅವರೆಲ್ಲರನ್ನೂ ಪ್ರಾಣಾಪಾಯದಿಂದ ಪಾರುಮಾಡಿ ಆ ಸ್ಥಳದಿಂದ ತಪ್ಪಿಸಿಕೊಂಡು ಕರೆದೊಯ್ದಿದ್ದಾರೆ. ನಾಲಪಾಡ್ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ಜಿಲ್ಲಾಧ್ಯಕ್ಷರಾದ ನನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.