ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟ ಸಾಧ್ಯವಿಲ್ಲ: ರಾಹುಲ್ ಭೇಟಿಯ ನಂತರ ಸಂಜಯ್ ರಾವುತ್ | Shivsena in rescue act Sanjay Raut meets Rahul Gandhi Says Opposition Front Not Possible Without Congress


ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟ ಸಾಧ್ಯವಿಲ್ಲ: ರಾಹುಲ್ ಭೇಟಿಯ ನಂತರ ಸಂಜಯ್ ರಾವುತ್

ಶಿವಸೇನೆ ನಾಯಕ ಸಂಜಯ್ ರಾವುತ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಮುಂಬೈ: ಕಾಂಗ್ರೆಸ್​ ಸಹಭಾಗಿಯಾಗದೆ ವಿರೋಧಪಕ್ಷಗಳ ಮೈತ್ರಿಕೂಟ ರಚನೆ ಅಸಾಧ್ಯ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಮಂಗಳವಾರ (ಡಿ 7) ಹೇಳಿದರು. ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ ರಚನೆ ಬಗ್ಗೆ ಶಿವಸೇನೆಗೆ ಆಸಕ್ತಿಯಿದೆ. ಈ ಮೈತ್ರಿಕೂಟದ ಮುಖ ಯಾರಾಗಿರಬೇಕು ಎನ್ನುವುದನ್ನು ಚರ್ಚೆಯ ನಂತರ ನಿರ್ಧರಿಸಬೇಕು. ರಾಹುಲ್ ಗಾಂಧಿ ಅವರು ಶೀಘ್ರ ಮುಂಬೈಗೆ ಬರಲಿದ್ದಾರೆ. ದೇಶದಲ್ಲಿ ಒಂದೇಒಂದು ವಿರೋಧಪಕ್ಷಗಳ ಮೈತ್ರಿಕೂಟ ಇರಬೇಕು ಎಂದರು.

ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದೆ. ಮೊದಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಚರ್ಚೆಯ ವಿವರಗಳನ್ನು ತಿಳಿಸುತ್ತೇನೆ. ಅದಾದ ನಂತರ ಎಲ್ಲರಿಗೂ ಮಾಹಿತಿ ನೀಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ಮತ್ತೋರ್ವ ಪ್ರಭಾವಿ ನಾಯಕರಾದ ಪ್ರಿಯಾಂಕಾ ಗಾಂಧಿ ಅವರನ್ನು ರಾವುತ್ ಬುಧವಾರ (ಡಿ 8) ಭೇಟಿಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್​ಸಿಪಿ) ಮತ್ತು ಶಿವಸೇನೆ ಮೈತ್ರಿಯ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರದಲ್ಲಿದೆ.

ತೃಣಮೂಲ ಕಾಂಗ್ರೆಸ್​ನ ನಾಯಕಿ ಮಮತಾ ಬ್ಯಾನರ್ಜಿ ಅವರು ಎನ್​ಸಿಪಿ ನಾಯಕ ಶರದ್​ ಪವಾರ್ ಅವರನ್ನು ಈಚೆಗೆ ಮುಂಬೈನಲ್ಲಿ ಭೇಟಿಯಾಗಿ ಚರ್ಚಿಸಿದ್ದರು. ಭಾರತದಲ್ಲಿ ಯುಪಿಎ ಎಂಬುದು ಉಳಿದಿಲ್ಲ ಎಂಬ ಅವರ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕಾಂಗ್ರೆಸ್​ ಪಕ್ಷವನ್ನು ದೂರ ಇರಿಸಿಯೇ ವಿರೋಧ ಪಕ್ಷಗಳ ಮೈತ್ರಿಕೂಟ ರಚಿಸುವ ಬಗ್ಗೆ ಮಮತಾ ಬ್ಯಾನರ್ಜಿ ಈ ವೇಳೆ ಸುಳಿವು ನೀಡಿದ್ದರು. ತಮ್ಮ ಮುಂಬೈ ಭೇಟಿಯ ವೇಳೆ ಸಂಜಯ್ ರಾವುತ್ ಮತ್ತು ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಅವರನ್ನೂ ಮಮತಾ ಬ್ಯಾನರ್ಜಿ ಭೇಟಿ ಮಾಡಿದ್ದರು. ಕಾಂಗ್ರೆಸ್ ಪಕ್ಷವನ್ನು ದೂರ ಇರಿಸಿ ರಚಿಸುವ ಮೈತ್ರಿಕೂಟಕ್ಕೆ ಹೆಚ್ಚು ಬಲ ಇರುವುದರಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ಪಕ್ಷವು ಪ್ರತಿಕ್ರಿಯಿಸಿತ್ತು.

ರಾಹುಲ್ ಗಾಂಧಿ ಭೇಟಿಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಸಂಜಯ್ ರಾವುತ್, ‘ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಎಂವಿಎ (ಮಹಾವಿಕಾಸ್ ಅಘಾಡಿ) ಎನ್ನುವುದೇ ಮಿನಿ ಯುಪಿಎ’ ಎಂದು ಹೇಳಿದ್ದರು. ಈ ಹಿಂದೆ ದೇಶದಲ್ಲಿ ಆಡಳಿತ ನಡೆಸಿದ್ದ ಯುಪಿಎ ಅಥವಾ ಎನ್​ಡಿಎ ಮಾದರಿಯಲ್ಲಿ ನಾವೂ ಸಹ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಧರಿಸಿ ಕೆಲಸ ಮಾಡುತ್ತಿದ್ದೇವೆ. ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳ ರಾಜಕೀಯ ದೃಷ್ಟಿಕೋನ ಬೇರೆಯೇ ಆಗಿರಬಹುದು. ಆದರೆ ಅವೆಲ್ಲವೂ ದೇಶದ ಹಿತದೃಷ್ಟಿಯಿಂದ ಒಂದಾಗಿವೆ’ ಎಂದು ವಿವರಿಸಿದ್ದರು.

TV9 Kannada


Leave a Reply

Your email address will not be published. Required fields are marked *