ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಣ ರಾಜಕೀಯ ಮತ್ತೆ ಭುಗಿಲೆದ್ದಿದೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಲಾಗಿದೆ. ಪದೇಪದೆ ಡಿಕೆ ಡಿಕೆ ಎಂದು ಘೋಷಣೆ ಕೆಲವರು ಕೂಗಿದ್ದಾರೆ. ಜಮೀರ್ ಫೋಟೋ ಹಿಡಿದಿದ್ದ ಕೆಲವರಿಂದ ಘೋಷಣೆ ಕೂಗಲಾಗಿದೆ. ಈ ವೇಳೆ ಸಿಟ್ಟಾದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಭಾಷಣ ಅರ್ಧಕ್ಕೆ ನಿಲ್ಲಿಸಿ ಕುಳಿತುಕೊಂಡಿದ್ದಾರೆ.
ಭಾಷಣವನ್ನು ಅರ್ಧಕ್ಕೆ ಮುಗಿಸಿದ ಸಿದ್ದರಾಮಯ್ಯ ಸರಸರನೆ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ವೇದಿಕೆಯಿಂದ ಕೆಳಗಿಳಿದು ಗೇಟ್ ಬಳಿ ನಡೆದು ಹೋಗಿದ್ದಾರೆ. ಮಾತಿಗೆ ಅಡ್ಡಪಡಿಸಿದ ಹಿನ್ನಲೆಯಲ್ಲಿ ಸಿಟ್ಟಾದ ಸಿದ್ದರಾಮಯ್ಯ ತಿರುಗಿ ನೋಡದೇ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಇಂದು (ನವೆಂಬರ್ 16) ಘಟನೆ ನಡೆದಿದೆ.
ಇದಕ್ಕೂ ಮೊದಲು ಅಬ್ದುಲ್ ಜಬ್ಬಾರ್ಗೆ ಕಾಂಗ್ರೆಸ್ ಬಾವುಟ ನೀಡಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೀಯ ಜವಾಬ್ದಾರಿ ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿದ್ದರಾಮಯ್ಯ ಆಗಮನದ ವೇಳೆ ಅಭಿಮಾನಿಗಳು ಸಿಳ್ಳೆ, ಚಪ್ಪಾಳೆಗಳಿಂದ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದರು. ಆದರೆ, ಭಾಷಣದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಡಿಕೆ ಎಂದು ಘೋಷಣೆ ಹಾಕಿದ್ದಾರೆ.
ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ. ವ್ಯಕ್ತಿ ಪೂಜೆ ಮೇಲೆ ಕಾಂಗ್ರೆಸ್ ನಿಂತಿಲ್ಲ. ಈ ದೇಶದ ಸಂವಿಧಾನ ರಕ್ಷಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು ಕಾಂಗ್ರೆಸ್. ಸೋನಿಯಾ, ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಕೊವಿಡ್ ವೇಳೆ ಮುಸ್ಲಿಂ ಬಂಧುಗಳು ಕೆಲಸ ಮಾಡಿದ್ದೀರಿ. ಕೊರೊನಾಗೆ ಬಲಿಯಾದವರ ಶವಸಂಸ್ಕಾರ ಮಾಡಿದ್ದೀರಿ. ಕೇಂದ್ರ ಸಚಿವ ಸುರೇಶ್ ಅಂಗಡಿ ಶವವನ್ನು ಬಿಸಾಡಿದ್ದರು. ಸರ್ಕಾರ ಗೌರವಯುತವಾಗಿ ಶವಸಂಸ್ಕಾರವನ್ನೂ ಮಾಡಲಿಲ್ಲ. ಮುಸ್ಲಿಂ ಬಂಧುಗಳು ಒಗ್ಗಟ್ಟಾಗಿ ಶವ ಸಂಸ್ಕಾರ ಮಾಡಿದ್ದೀರಿ. ನಿಮ್ಮೆಲ್ಲರಿಗೂ ಅಭಿನಂದನೆ ಎಂದು ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ವ್ಯಕ್ತಿ ಪೂಜೆ ನಡೆಯಲ್ಲ. ವ್ಯಕ್ತಿ ಪೂಜೆ ಮೇಲೆ ಕಾಂಗ್ರೆಸ್ ನಿಂತಿಲ್ಲ ಎಂದು ಡಿ.ಕೆ ಶಿವಕುಮಾರ್ ಭಾಷಣ ಆರಂಭಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಕಾರ್ಯಕರ್ತರು ಸುಮ್ಮನಾಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕೋಮುವಾದಿಗಳು ದೇಶ ಒಡೆಯುತ್ತಿದ್ದಾರೆ; ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು: ಸಿದ್ದರಾಮಯ್ಯ
ಇದನ್ನೂ ಓದಿ: ನಾವು ಹಗರಣದ ಬಗ್ಗೆ ತನಿಖೆ ನಡೆಸಲು ಇದೇನು ನಮ್ಮ ಸರ್ಕಾರವೇ: ಡಿಕೆ ಶಿವಕುಮಾರ್