ಕಾಂಗ್ರೆಸ್ ದೃಷ್ಟಿಯಲ್ಲಿ ಗಲಭೆ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ: ಬಿಜೆಪಿ ಆಕ್ರೋಶ | BJP questions Congress about Their Reaction in Hubli Communal Clashes


ಕಾಂಗ್ರೆಸ್ ದೃಷ್ಟಿಯಲ್ಲಿ ಗಲಭೆ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ: ಬಿಜೆಪಿ ಆಕ್ರೋಶ

ಬಿಜೆಪಿ

ಬೆಂಗಳೂರು: ಹುಬ್ಬಳ್ಳಿ ಗಲಭೆಯನ್ನು ರಾಜ್ಯ ಸರ್ಕಾರ ಕೇವಲ ಮೂರು ಗಂಟೆಗಳಲ್ಲಿ ತಹಬದಿಗೆ ತಂದಿದೆ. ಮತಾಂಧ ಅಲ್ಪಮತೀಯ‌ ಆರೋಪಿಗಳನ್ನು ಸಕಾಲದಲ್ಲಿ ಬಂಧಿಸಲಾಗಿದೆ. ಆದರೆ ಕಾಂಗ್ರೆಸ್ ಮಾತ್ರ ವಿನಾಕಾರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಹುಯಿಲೆಬ್ಬಿಸುತ್ತಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ ಎಂದು ಬಿಜೆಪಿ ಕರ್ನಾಟಕ ಘಟಕ ಟ್ವೀಟ್ ಮಾಡಿ ಪ್ರಶ್ನಿಸಿದೆ. ಡಿಜೆ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಸಂಪತ್ ರಾಜ್ ಸೇರಿದಂತೆ 110ಕ್ಕೂ ಹೆಚ್ಚು ಮತಾಂಧರ ಬಂಧನವಾಗಿದೆ. ಪಾದರಾಯನಪುರ ಗಲಭೆಯಲ್ಲಿ 116 ದಂಗೆಕೋರರ ಬಂಧನವಾಗಿದೆ. ಉಪ್ಪಿನಂಗಡಿಯ ಠಾಣೆಯ ಮುಂದೆ ಗಲಭೆ ಮಾಡಿದವರನ್ನು ಸುಮ್ಮನೆ ಬಿಟ್ಟಿಲ್ಲ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಸೇರಿದಂತೆ 126 ಸಮಾಜ ಘಾತುಕರ ಬಂಧನವಾಗಿವೆ ಎಂದು ಬಿಜೆಪಿ ವಿವರ ನೀಡಿದೆ.

ಕಾಂಗ್ರೆಸ್ ರಣಹದ್ದುಗಳಿಗೆ ಹುಬ್ಬಳ್ಳಿ ಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಸಂತೋಷ ನೀಡಿಲ್ಲ. ಸಮಾಜದ ಶಾಂತಿ ಸರ್ವನಾಶವಾಗುವಂಥ ಫಲಿತಾಂಶವನ್ನು ಕಾಂಗ್ರೆಸ್ಸಿಗರು ಬಯಸಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ಮಿಂಚಿನ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ನಿಭಾಯಿಸಿದ್ದು ಹರಳೆಣ್ಣೆ ಕುಡಿಸಿದ ಅನುಭವ ನೀಡಿದೆ. ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಬಂಧನವಾಗಿದೆ. ಆದರೆ ರಿಂಗ್ ಮಾಸ್ಟರ್ ಯಾರೆಂದು ತಿಳಿಯಬೇಕಲ್ಲವೇ? ಆ ರಿಂಗ್‌ ಮಾಸ್ಟರ್‌ ಮಹಾನಾಯಕ ಆಗಿರಬಹುದೇ ಅಥವಾ ಮೀರ್‌ಸಾದಿಕ್ ಆಗಿರಬಹುದೇ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಲೇವಡಿ ಮಾಡಿದೆ.

ಬಿಜೆಪಿ ಸಮಾವೇಶ: ಎಂಟಿಬಿಗೆ ಅದ್ದೂರಿ ಸ್ವಾಗತ

ದೇವನಹಳ್ಳಿ: ತಾಲ್ಲೂಕಿನ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಬಂದ ಎಂ.ಟಿ.ಬಿ.ನಾಗರಾಜ್ ಅವರಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಶಿಳ್ಳೆ, ಚಪ್ಪಾಳೆ, ಜಯಕಾರಗಳೊಂದಿಗೆ ಶಾಸಕರನ್ನು ಸ್ವಾಗತಿಸಲಾಯಿತು. ಕಾರ್ಯಕರ್ತರು ಎಂಟಿಬಿಗೆ ಸ್ವಾಗತ ಕೋರಿದ್ದು ಕಂಡು ಸಮಾವೇಶಕ್ಕೆ ಬಂದಿದ್ದ ನಾಯಕರು ದಂಗಾದರು. ಜಯಕಾರ ಕೇಳಿ ಬಿ.ಎಸ್.ಯಡಿಯೂರಪ್ಪ ಅವರೇ ಬಂದಿರಬಹುದು ಎಂದುಕೊಂಡು ಆಚೀಚೆ ನೀಡಿದರು. ನಂತರ ಎಂಟಿಬಿ ಬಂದಿದನ್ನು ಕಂಡ ಅಶೋಕ್ ಮತ್ತು ಸುಧಾಕರ್ ಪರಸ್ಪರ ಹಾಸ್ಯ ಮಾಡಿಕೊಂಡು ನಗೆಗಡಲಲ್ಲಿ ತೆಲಿದರು.

ವಿಜಯಪುರದ ಛತ್ರವೊಂದರಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಸುಧಾಕರ್​, ಅಶೋಕ್​, ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ.ರವಿ ಮತ್ತಿತರರು ಭಾಗಿಯಾಗಿದ್ದಾರೆ. ಇವರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ನಾಲ್ಕೂ ತಾಲೂಕುಗಳ ಮುಖಂಡರು ಭಾಗಿಯಾಗಿದ್ದರು.

ಉಗ್ರರಿಗೆ ಬಿರಿಯಾನಿ ತಿನ್ನಿಸೋ ಕಾಲವಿತ್ತು: ಸಿಟಿ ರವಿ

ದೇಶದಲ್ಲಿ ಉಗ್ರರಿಗೆ ಬಿರಿಯಾನಿ ತಿನಿಸುವ ಕಾಲವೂ ಒಂದು ಇತ್ತು. ಆದರೆ ಈಗ ಹಾಗಿಲ್ಲ. ಪರಿಸ್ಥಿತಿ ಬದಲಾಗಿದೆ. ಈಗ ಯಾರಾದ್ರೂ ಬಾಲ ಬಿಚ್ಚಿದ್ರೇ ಅವರ ಮನೆ ಎದುರು ಸೀದಾ ಜೆಸಿಬಿ, ಬುಲ್​ಡೋಜರ್​ಗಳು ಹೋಗುತ್ವೆ ಎಂದು ವಿಜಯಪುರದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಭಯೋತ್ಪಾದನೆ ಮಾಡುವವರಿಗೆ ಈಗ ಬಿರಿಯಾನಿ ತಿನಿಸಲ್ಲ. ಬಂದೂಕಿನಿಂದ ದಾಳಿ ಮಾಡಿದರೆ ನಮ್ಮ ರಕ್ಷಣಾ ಪಡೆಗಳು ಬಂದೂಕಿನಿಂದಲೇ ಉತ್ತರ ಕೊಡುತ್ತವೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡುತ್ತವೆ ಎಂದರು.

TV9 Kannada


Leave a Reply

Your email address will not be published. Required fields are marked *